1. Home
  2. Karnataka
  3. ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ‌ – ಇದರ ವಿಶೇಷತೆಗಳೇನು ಗೊತ್ತಾ…!?

ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ‌ – ಇದರ ವಿಶೇಷತೆಗಳೇನು ಗೊತ್ತಾ…!?

ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ‌ – ಇದರ ವಿಶೇಷತೆಗಳೇನು ಗೊತ್ತಾ…!?
0

ನ್ಯೂಸ್ ಆ್ಯರೋ‌ : ವಿಶ್ವದ ಅತಿ ದೊಡ್ಡ ವಿಮಾನ ಎಮಿರೇಟ್ಸ್ ಎ380 ರಾಜ್ಯ ರಾಜಧಾನಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ಕುರಿತು ಬೆಂಗಳೂರು ಏರ್‌ಪೋರ್ಟ್‌ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದೆ. ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟ ಎಮಿರೇಟ್ಸ್‌ನ ಇಕೆ 562 ವಿಮಾನವು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಎಲೆಕ್ಟ್ರಿಕಲ್ ಸಿಟಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

ಈ ಮೊದಲು ಅ. 30ರಂದು ಈ ವಿಮಾನ ಬೆಂಗಳೂರಿಗೆ ಬಂದಿಳಿಯಲಿದೆ ಎಂದು ಹೇಳಲಾಗಿತ್ತು. ಆದರೆ ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಗಡವಾಗಿಯೇ ಏರ್‌ಬಸ್ A380 ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದ್ದು, ಎಮಿರೇಟ್ಸ್ ‌ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದೆ. 500ಕ್ಕೂ ಹೆಚ್ಚು ಸೀಟ್​ಗಳು ಸೇರಿ, ಹಲವು‌ ವಿಶೇಷತೆಗಳನ್ನು ಹೊಂದಿದ್ದು, ಎಮಿರೇಟ್ಸ್ ಏರ್‌ಬಸ್ A380 ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ.

ನಮ್ಮ ಕಾರ್ಯ ನಿರ್ವಾಹಕ ತಂಡಗಳು ಈ ಐತಿಹಾಸಿಕ ಕ್ಷಣಕ್ಕೆ ಸನ್ನದ್ಧವಾಗಿದ್ದು, ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಯಾಚರಣೆ ತಂಡವು ಮೂಲಸೌಕರ್ಯ ಮತ್ತು ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಿದೆ. ಈ ದಿನಕ್ಕಾಗಿ ಹಲವು ದಿನಗಳಿಂದ ಕಾಯುತ್ತಿದ್ದೇವೆ ಎಂದು ವಿಮಾನ ಬರುವ ಮೊದಲು BLR ಏರ್‌ಪೋರ್ಟ್​ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ಈ ವಿಮಾನ ಭಾರತದಲ್ಲಿ ಮೊದಲು ಲ್ಯಾಂಡ್ ಆಗಿದ್ದು, ಸಂಜೆ 4 ಗಂಟೆಗೆ ಹೈದರಾಬಾದ್‌ನಲ್ಲಿ ಲ್ಯಾಂಡ್ ಆದ ವಿಮಾನವು, ಸಂಜೆ 5 ಗಂಟೆಗೆ ಬೆಂಗಳೂರು ತಲುಪಿತು. ದುಬೈನಿಂದ ಹೊರಟ ಈ ವಿಮಾನವು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾಲಿಗೆ ಸಂಭ್ರಮ ತಂದಿದೆ. ಆದರೆ, ಹೈದರಾಬಾದ್, ದಿಲ್ಲಿ, ಮುಂಬೈ ಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ಈ ವಿಮಾನ ಲ್ಯಾಂಡ್ ಆಗಲು ಸೂಕ್ತ ವ್ಯವಸ್ಥೆಗಳಿದ್ದು, ಭಾರತದ ಮಿಕ್ಕ ಯಾವುದೇ ವಿಮಾನ ನಿಲ್ದಾಣದಲ್ಲೂ ಇಷ್ಟೊಂದು ದೊಡ್ಡ ವಿಮಾನ ಲ್ಯಾಂಡ್ ಆಗಲು ಮೂಲ ಸೌಕರ್ಯಗಳಿಲ್ಲ.

ಎ 380 ವಿಮಾನವು 8,200 ನಾಟಿಕಲ್ ಮೈಲ್ (15,200 ಕಿಲೋಮೀಟರ್) ವ್ಯಾಪ್ತಿಯನ್ನು ಹೊಂದಿದ್ದು, ಇದು ಅತ್ಯಂತ ದೂರ ಪ್ರಯಾಣದ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಸಮರ್ಥವಾಗಿದೆ. ಈ ಬೃಹತ್ ವಿಮಾನದಲ್ಲಿ ಗರಿಷ್ಠ 853 ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ಇದೆ. ಆದರೆ, ಸದ್ಯ 525 ಪ್ರಯಾಣಿಕರಿಗಷ್ಟೇ ಆಸನ ವ್ಯವಸ್ಥೆ ಇದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್‍ಆರ್) ಮತ್ತು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಡಿಎಕ್ಸ್‌ಬಿ) ಮಧ್ಯೆ 1675 ಮೈಲಿ (2,695 ಕಿಲೋಮೀಟರ್ ಅಥವಾ 1455 ನಾಟಿಕಲ್ ಮೈಲಿ) ಅಂತರವಿದ್ದು, ವಿಮಾನದ ಕ್ರೂಸ್ ವೇಗ 0.85 ಮ್ಯಾಕ್ ಆಗಿದ್ದು, ಗರಿಷ್ಠ ವೇಗ ಗಂಟೆಗೆ 634 ಮೈಲಿಗಳಾಗಿದೆ. ಈ ಅಪಾರ ವೇಗವನ್ನು ಹೊಂದಿರುವ ಎ380 ಜಗತ್ತಿನ ಅಗ್ರ ಐದು ಅತಿವೇಗದ ವಿಮಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಭಾರತದ ನವದೆಹಲಿ, ಮುಂಬಯಿ, ಬೆಂಗಳೂರು ಹಾಗೂ ಹೈದರಾಬಾದ್ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಮಾತ್ರ ವಿಮಾನ ಲ್ಯಾಂಡ್ ಆಗಲು ಸೂಕ್ತ ವ್ಯವಸ್ಥೆಗಳಿದ್ದು, ಉಳಿದ ಯಾವುದೇ ವಿಮಾನ ನಿಲ್ದಾಣದಲ್ಲೂ ಇಷ್ಟೊಂದು ದೊಡ್ಡ ವಿಮಾನ ಲ್ಯಾಂಡ್ ಆಗಲು ಮೂಲ ಸೌಕರ್ಯಗಳಿಲ್ಲ ಎನ್ನಲಾಗಿದೆ.

ಎ380 ಒಂದು ಪೂರ್ಣ ಉದ್ದದ, ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಹೊಂದಿದೆ. ದೆಹಲಿ ಹಾಗೂ ಮುಂಬೈ ವಿಮಾನ ನಿಲ್ದಾಣಗಳ ಬಳಿಕ, ತನ್ನ ರನ್ ವೇನಲ್ಲಿ ಈ ಜಂಬೋ ಜೆಟ್ ಅನ್ನು ಸ್ವಾಗತಿಸುವ ಮೂರನೇ ಭಾರತೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.

ಮುಂಬೈನಲ್ಲಿ ಸಿಂಗಾಪೂರ್ ಏರ್‌ಲೈನ್ಸ್ ಹಾಗೂ ಎಮಿರೇಟ್ಸ್ ಏರ್‌ಲೈನ್ಸ್ ನ ಜಂಬೋ ಜೆಟ್ ವಿಮಾನಗಳು ಕಾರ್ಯ ನಿರ್ವಹಿಸಿದರೆ ದೆಹಲಿಯಲ್ಲಿ ಲುಫ್ತಾನ್ಸಾ ಹಾಗೂ ಸಿಂಗಾಪೂರ್ ಏರ್‌ಲೈನ್ಸ್ ವಿಮಾನಗಳು ಕಾರ್ಯ ನಿರ್ವಹಿಸುತ್ತವೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..