ನ್ಯೂಸ್ ಆ್ಯರೋ : ನೀರಾಟವಾಡುತ್ತಿದ್ದ ವ್ಯಕ್ತಿ ತನ್ನ ಕುಟುಂಬ ಸದಸ್ಯರ ಸಮುಖದಲ್ಲೇ ಸಮುದ್ರಪಾಲಾದ ಘಟನೆ ಉಳ್ಳಾಲದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಸ್ಥಳೀಯ ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಮೃತ ದುರ್ದೈವಿಯಾಗಿದ್ದಾರೆ .
ಮಂಗಳೂರಿನ ಕಾಸಾಗಿ ಕಾಲೇಜಲ್ಲಿ ಬಸ್ ಚಾಲಕರಾಗಿದ್ದ ಮೃತ ಪ್ರಶಾಂತ್ ಪ್ರತೀ ಆದಿತ್ಯವಾರವೂ ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳುತಿದ್ದು ಇಂದು ಬೆಳಗ್ಗೆ ಪುತ್ರನಾದ ಚಿರಾಯು, ಸಹೋದರ ಮಗ ವಂದನ್ ಮತ್ತಿತರರೊಂದಿಗೆ ಸೋಮೇಶ್ವರ ಬೀಚ್ ಗೆ ತೆರಳಿದ್ದರು.
ಎಂದಿನಂತೆ ಇಂದು ಬೆಳಗ್ಗೆ ಪ್ರಶಾಂತ್ ಸಮುದ್ರದಲ್ಲಿ ನೀರಾಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ.
ಪ್ರಶಾಂತ್ ಅವರ ಪುತ್ರ ಚಿರಾಯು ಪರಿಣತ ಈಜುಪಟುವಾಗಿದ್ದರಿಂದ ತಕ್ಷಣ ಹಗ್ಗದಿಂದ ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ತಂದಿದ್ದರೂ ಅದಾಗಲೇ ಪ್ರಶಾಂತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮೃತ ಪ್ರಶಾಂತ್ ಅವರ ಏಕೈಕ ಪುತ್ರ ಚಿರಾಯು ಇಂಜಿನಿಯರಿಂಗ್ ವ್ಯಾಸಂಗ ನಡೆಸುತ್ತಿದ್ದಾನೆ. ಮೃತರು ತಾಯಿ, ಪತ್ನಿ , ಪುತ್ರ, ಇಬ್ಬರು ತಮ್ಮಂದಿರು, ತಾಯಿಯನ್ನ ಅಗಲಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.