ನ್ಯೂಸ್ ಆ್ಯರೋ : ಮಂಗಳೂರು ಕಮೀಷನರೇಟ್ ನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಗ್ರಾಮ ಪಂಚಾಯತ್ ನ ಸ್ತ್ರೀ ಶಕ್ತಿ ಭವನದ ಜಗಲಿಯಲ್ಲಿ ವ್ಯಕ್ತಿಯೊಬ್ಬರ ಶವವು ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಗಂಜಿಮಠ ಗಾಂಧಿನಗರ ನಿವಾಸಿ ಸುರೇಶ್ ಗೌಡ(35) ಎಂದು ಗುರುತಿಸಲಾಗಿದೆ.
ತಲೆಯಿಂದ ವಿಪರೀತ ರಕ್ತಸ್ರಾವವಾಗಿದ್ದು ಇದು ಆಕಸ್ಮಿಕ ಸಾವೇ ಅಥವಾ ಕೊಲೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸುರೇಶ್ ಗೌಡ ಅವರು ಕಳೆದ ಎರಡು ತಿಂಗಳ ಹಿಂದೆಯೇ ಮನೆ ಬಿಟ್ಟಿದ್ದು, ವಿಪರೀತ ಕುಡಿದ ಮತ್ತಿನಲ್ಲಿ ಕುಸಿದು ಬಿದ್ದ ವೇಳೆ ತಲೆಗೆ ಪೆಟ್ಟಾಗಿ ರಕ್ತಸ್ರಾವವಾಗಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಬಜಪೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…