1. Home
  2. Mangaluru
  3. ಭಾರೀ ವಿರೋಧದ ನಡುವೆ ಬೆಂಗ್ಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ಕೋಲ ರದ್ದು: ಕೊನೆಗೂ ದೈವಾರಾಧಕರ ವಿರೋಧಕ್ಕೆ ಸಿಕ್ತು ಜಯ

ಭಾರೀ ವಿರೋಧದ ನಡುವೆ ಬೆಂಗ್ಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ಕೋಲ ರದ್ದು: ಕೊನೆಗೂ ದೈವಾರಾಧಕರ ವಿರೋಧಕ್ಕೆ ಸಿಕ್ತು ಜಯ

ಭಾರೀ ವಿರೋಧದ ನಡುವೆ ಬೆಂಗ್ಳೂರಿನಲ್ಲಿ ನಡೆಯಬೇಕಿದ್ದ ಕೊರಗಜ್ಜ ಕೋಲ ರದ್ದು: ಕೊನೆಗೂ ದೈವಾರಾಧಕರ ವಿರೋಧಕ್ಕೆ ಸಿಕ್ತು ಜಯ
0

ನ್ಯೂಸ್ ಆ್ಯರೋ: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಡೆಯಬೇಕಿದ್ದ ಕೊರಗಜ್ಜನ ಕೋಲ ಕ್ಯಾನ್ಸಲ್‌ ಆಗುವ ಮೂಲಕ ಕರಾವಳಿಯ ದೈವಾರಾಧಕರ ವಿರೋಧಕ್ಕೆ ಕೊನೆಗೂ ಜಯ ಸಿಕ್ಕಿದಂತ್ತಾಗಿದೆ.

ಬೆಂಗಳೂರು ಹಾಗೂ ಮೈಸೂರು ಭಾಗದ ಜನರು ದೈವನಂಬಿಕೆಗಳನ್ನು ಮುರಿದು ಪ್ರಚಾರಕ್ಕಾಗಿ ಹಾಗೂ ಹಣಕ್ಕಾಗಿ ಅಲ್ಲಲ್ಲಿ ದೈವದ ಕಟ್ಟೆಗಳನ್ನು ಸ್ಥಾಪಿಸಿ ಹಣ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಕೋಲ ಕಟ್ಟುವವರಿಗೆ ಕೊನೆ ಎಚ್ಚರಿಕೆಯನ್ನು ನೀಡಲಾಗಿತ್ತು.

ದುಡ್ಡು ಸಿಗುತ್ತದೆ ಎಂಬ ಕಾರಣಕ್ಕಾಗಿ ಅಲ್ಲಿ ಹೋಗಿ ನೇಮ ಕಟ್ಟುವವರಿಗೆ, ತಾಸೆ ಬ್ಯಾಂಡ್ ಸೆಟ್‌ನವರಿಗೆ, ಮಧ್ಯಸ್ಥ, ಮುಕ್ಕಾಲ್ದಿ ಹಾಗೂ ಯಾರೆಲ್ಲ ತೊಡಗಿಸಿಕೊಳ್ಳುತಾರೆಯೋ ಅವರೆಲ್ಲರಿಗೂ ಮುಂದೆ ನಮ್ಮ ಊರಿನ ಯಾವುದೇ ದೈವಸ್ಥಾನ, ಮನೆಗಳಲ್ಲಿ ನೇಮದ ಕೊಡಿಯಡಿಯಲ್ಲಿ ಅವಕಾಶವಿಲ್ಲ ಎಂದು ಎಚ್ಚರಿಕೆಯ ಪ್ರಕಟನೆಯನ್ನು ತುಳುನಾಡ ದೈವರಾಧಕರು ನೀಡಿದ್ದರು.

ಹೆಸರು ದುರುಪಯೋಗ ಮಾಡಿದ್ದಾರೆಂದು ದೈವ ನರ್ತಕ ಜನಾರ್ದನ ಕುಪ್ಪೆಪದವು ಬೇಸರ:

‘ಬೆಂಗಳೂರಿನಲ್ಲಿ ಕೊರಗಜ್ಜನ ಕಟ್ಟೆ ಸ್ಥಾಪನೆ ಮಾಡಿದ ಕುಟುಂಬದ ಪರಿಚಯ ನನಗಿರಲಿಲ್ಲ. ಒಂದು ದಿವಸ ಕರೆ ಬರುತ್ತದೆ. ನಾವು ಬೆಂಗಳೂರಿನಲ್ಲಿ ಕೊರಗಜ್ಜನ ಕಟ್ಟೆ ಮಾಡಿದ್ದೇವೆ, ನೀವು ಕೋಲ ನಡೆಸಿಕೊಡಬೇಕೆಂದು. ನಮ್ಮದು ಕೋಲ ಕಟ್ಟುವ ಕಸುಬು ಹಾಗೂ ಅದನ್ನು ಮಾಡಿದರೆ ಮಾತ್ರ ನನ್ನ ಜೀವನ ಸಾಗುತ್ತದೆ. ಹಾಗಾಗಿ ಆಯಿತು ಅಂದೆ. ಈಚೆಗೆ ಬೆಂಗಳೂರಿಗೆ ಸ್ನೇಹಿತರ ಮನೆಗೆ ಹೋಗಿದ್ದ ವೇಳೆ ಕೊರಗಜ್ಜನ ಕಟ್ಟೆಯನ್ನು ನೋಡಬೇಕೆಂದು ಸ್ಥಳಕ್ಕೆ ಹೋದೆ’. ‌

‘ಅವರು ಸ್ಥಾಪಿಸಿದ ಕೊರಗಜ್ಜ ಕಟ್ಟೆ ನೋಡಿದಾಗ, ಎಲ್ಲವೂ ಸರಿಯಿರಲಿಲ್ಲ. ಕಟ್ಟೆ ಮಾಡುವುದು ದೊಡ್ಡದಲ್ಲ. ಇಲ್ಲಿ ನಿರಂತರ ಆರಾಧನೆ ಮತ್ತು ಅದರದ್ದೆ ಆದ ಕಟ್ಟು ಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾಗಿ ನೀವೊಮ್ಮೆ ಕುತ್ತಾರಿಗೆ ಬಂದು ಅನುಭವಿಗಳ ಜತೆ ಮಾತನಾಡಿ ಎಂದು ಸಲಹೆಯನ್ನು ಕೊಟ್ಟಿದ್ದೆ’.

‘ಕೋಲ ಮಾಡಿದರೆ ದೈವರಾಧಾಕರ ನಂಬಿಕೆಗೆ ಧಕ್ಕೆ ಮಾಡಿ, ನಾನು ತಪ್ಪು ಮಾಡಿದ ಹಾಗೇ ಆಗುತ್ತದೆ ಎಂದು ಅವರಿಗೆ ಬುದ್ದಿ ಹೇಳಿದ್ದೆ. ಆದರೆ ಇದೀಗ ಅವರು ಈ ವಿಷಯದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಜನಾರ್ದನ ಕುಪ್ಪೆಪದವು ಅವರು ತುಳು ಸಾಹಿತಿ ಮಹೇಂದ್ರನಾಥ್ ಸಾಲೆತ್ತೂರು ಜತೆ ಫೋನ್ ಸಂಭಾಷಣೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಯಲಯಂಕ ತಾಲ್ಲೂಕಿನ ಚೊಕ್ಕನಹಳ್ಳಿಯುಲ್ಲಿ ಸ್ವಾಮಿ ಕೊರಗಜ್ಜನ ಕೋಲ ಹಾಗೂ 27ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಟಕ್ಕಸಂದ್ರ ಗ್ರಾಮದಲ್ಲಿ ಕೊರಗಜ್ಜ ಹಾಗೂ ಕಲ್ಲುರ್ಟಿ ದೈವದ ನೇಮೋತ್ಸವ ಹಾಗೂ ನರ್ತನ ಸೇವೆಯನ್ನು ಆಯೋಜಿಸಲಾಗಿತ್ತು.