1. Home
  2. Mangaluru
  3. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಬಸ್‌ ವ್ಯವಸ್ಥೆ – ಅಕ್ಟೋಬರ್ 31ರಂದು ಹಸಿರು ನಿಶಾನೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಬಸ್‌ ವ್ಯವಸ್ಥೆ – ಅಕ್ಟೋಬರ್ 31ರಂದು ಹಸಿರು ನಿಶಾನೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಬಸ್‌ ವ್ಯವಸ್ಥೆ – ಅಕ್ಟೋಬರ್  31ರಂದು ಹಸಿರು ನಿಶಾನೆ
0

ನ್ಯೂಸ್‌ ಆ್ಯರೋ : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಈತನಕ ಪರದಾಟ ನಡೆಸಬೇಕಿತ್ತು. ಅಲ್ಲದೆ, ದುಬಾರಿ ಹಣ ತೆತ್ತು ಖಾಸಗಿ ವಾಹನದ ಮೊರೆ ಹೋಗಬೇಕಿತ್ತು. ಬಹುವರ್ಷದ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ‌ಮಂಗಳೂರು ಮತ್ತು ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಅ. 31ರಂದು ಚಾಲನೆ ದೊರೆಯಲಿದೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈಗಾಗಲೇ ಮೈಸೂರಿನಿಂದ ನಾಲ್ಕು ವೋಲ್ವೋ ಬಸ್‌ಗಳನ್ನು ಜಿಲ್ಲೆಗೆ ತರಲಾಗಿದೆ. ಈ ಹಿಂದೆ ನಿರ್ಧರಿಸಿದಂತೆ ಈ ಬಸ್‌ ಸೇವೆ ಅ. 27ರಂದು ಆರಂಭಗೊಳ್ಳಬೇಕಿತ್ತು. ಕೆಲವು ತಾಂತ್ರಿಕ ಕಾರಣದಿಂದ ಅ. 31ರಿಂದ ಈ ಸೇವೆ ಆರಂಭವಾಗುವುದು ಖಚಿತಗೊಂಡಿದೆ.

ಬಸ್ ಸಂಚಾರದ ತಾತ್ಕಾಲಿಕ ವೇಳಾಪಟ್ಟಿ ಈಗಾಗಲೇ ತಯಾರಿಸಲಾಗಿದೆ. ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 6.30, 8.45, 11.10, ಮಧ್ಯಾಹ್ನ 3, ಸಂಜೆ 5.15, 7.30ಕ್ಕೆ ಹೊರಡಲಿದೆ. ದರವನ್ನು ₹ 100ಕ್ಕೆ ನಿಗದಿಪಡಿಸಲಾಗಿದೆ. ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬೆಳಿಗ್ಗೆ 7.40, 10, ಮಧ್ಯಾಹ್ನ 12.20, ಸಂಜೆ 4.05, 6.25, ರಾತ್ರಿ 8.45ಕ್ಕೆ ಹೊರಡಲಿದೆ. ಜ್ಯೋತಿ, ಲಾಲ್‌ಬಾಗ್‌, ಕುಂಟಿಕಾನ, ಕಾವೂರು ಮೂಲಕ ವಿಮಾನ ನಿಲ್ದಾಣಕ್ಕೆ ಸಂಚರಿಸಲಿದೆ.

ಮಣಿಪಾಲದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ₹300/- ದರ ನಿಗದಿಪಡಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಲ್ಲದೆ, ಇತರರು ಸಹ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಮಂಗಳೂರಿನಿಂದ ಮಣಿಪಾಲಕ್ಕೆ ಈ ಹಿಂದೆ ವೋಲ್ವೊ ಬಸ್‌ ಸೇವೆ ಇತ್ತು. ಆದರೆ, ಕಡಿಮೆ ಆದಾಯದ ಹಿನ್ನೆಲೆಯಲ್ಲಿ ಸಂಚಾರ ಮೊಟಕುಗೊಂಡಿತ್ತು. ಈಗ ಮತ್ತೆ ಈ ದಾರಿಯಲ್ಲಿ 2 ಟ್ರಿಪ್‌ ಕಾರ್ಯಾಚರಿಸಲು ನಿರ್ಧರಿಸಲಾಗಿದೆ.

ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಮಣಿಪಾಲಕ್ಕೆ ಬೆಳಿಗ್ಗೆ 7ಕ್ಕೆ ಒಂದು ಟ್ರಿಪ್‌ ಮತ್ತು ಮಧ್ಯಾಹ್ನ 1.15ಕ್ಕೆ ಮಣಿಪಾಲದಿಂದ ಮಂಗಳೂರಿಗೆ ಒಂದು ಟ್ರಿಪ್‌ ನಡೆಸಲಿದೆ. ಟಿಕೆಟ್‌ ದರ ₹ 150 ನಿಗದಿಪಡಿಸಲಾಗಿದೆ.

ಕರಾವಳಿ ಭಾಗದಿಂದ ಮುಂಬೈ, ಬೆಂಗಳೂರು, ದೆಹಲಿ ಮಾತ್ರವಲ್ಲದೆ ಇನ್ನಿತರ ನಗರಗಳಿಗೆ, ವಿದೇಶಗಳಿಗೆ ಪ್ರತಿದಿನ ಸಾವಿರಾರು ಮಂದಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಅವರಿಗೆ ಮತ್ತು ಅವರನ್ನು ಸ್ವಾಗತಿಸಲು, ಬೀಳ್ಕೊಡಲು ಬರುವವರಿಗೆ ಬಸ್‌ ಸೌಲಭ್ಯವಿಲ್ಲದೆ ಭಾರೀ ಸಮಸ್ಯೆಯಾಗುತ್ತಿತ್ತು. ಕೊನೆಗೂ ಸರ್ಕಾರ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದು, ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..