ಮಂಗಳೂರು : ನಕಲಿ ಪೊಲೀಸರ ಹೆಸರಲ್ಲಿ ದಂಡ ವಸೂಲಿ – ದಂಡದ ಹೆಸರಲ್ಲಿ ಪೋಲಿಸ್ ಇಲಾಖೆಯ ನಕಲಿ ರಶೀದಿ, ಯುವಜನರೇ ಟಾರ್ಗೆಟ್..!!

ನ್ಯೂಸ್ ಆ್ಯರೋ : ಸೈಬರ್ ಪೊಲೀಸರ ಹೆಸರಿನಲ್ಲೇ ಸಾರ್ವಜನಿಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ವಂಚಿಸಿ ಹಣ ಪೀಕಿಸುತ್ತಿರುವ ಖದೀಮರ ತಂಡವೊಂದು ಜಿಲ್ಲೆಯಲ್ಲಿ ಸದ್ದಿಲ್ಲದೆ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ.
ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿದ್ದ ಖದೀಮರ ತಂಡ ಈಗ ಪೊಲೀಸ್ ವೇಷದಲ್ಲಿ ‘ದಂಡ’ ವಸೂಲಿಗೆ ಮುಂದಾಗಿದೆ.
ನೇರವಾಗಿ ಜನರಿಗೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಖೆಡ್ಡಾಕ್ಕೆ ಬೀಳಿಸುತ್ತಿದ್ದಾರೆ. ಜಾಲತಾಣಗಳಲ್ಲಿ ನಡೆಯುವ ಗುಪ್ತವಾದ ಸಂಭಾಷಣೆ ವಿಚಾರ ಮುಂದಿಟ್ಟು ಹಣ ಪೀಕಿಸಲಾಗುತ್ತಿದೆ. ಖದೀಮರಿಗೆ ಯುವಜನರೇ ಟಾರ್ಗೆಟ್ ಆಗುತ್ತಿದ್ದಾರೆ.
ಖದೀಮರ ಬಳಿ ಪೊಲೀಸ್ ಇಲಾಖೆಯ ನಕಲಿ ರಶೀದಿಯೂ ಲಭ್ಯವಿದೆ. ಹಣ ಪಾವತಿಸಿದರೆ ವಾಟ್ಸ್‌ಆಪ್‌ನಲ್ಲಿ ನಕಲಿ ರಶೀದಿಯನ್ನು ಕಳುಹಿಸಲಾಗುತ್ತದೆ. ಆ ವಾಟ್ಸ್‌ಆಪ್ ನಂಬರ್‌ನ ಫ್ರೊಫೈಲ್‌ನಲ್ಲಿ ಪೊಲೀಸ್ ಅಧಿಕಾರಿಗಳ ಫೋಟೋ ಇರುವುದರಿಂದ, ವಂಚನೆಗೆ ಒಳಗಾದವರು ಹೆದರಿ ಹಣ ಪಾವತಿಸುತ್ತಿದ್ದಾರೆ.
ಪ್ರಕರಣದ ಬೆದರಿಕೆ:
ಇನ್ನೂ ಕೆಲವರಿಗೆ ನಿಮ್ಮ ಮೊಬೈಲ್‌ನಲ್ಲಿ ನೀಲಿಚಿತ್ರ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಅದಲ್ಲದೆ, ನೀವು ಕೆಲವು ವಿಡಿಯೋಗಳನ್ನು ವಾಟ್ಸ್ ಆಪ್ ನಲ್ಲಿ ಬೇರೆಯವರಿಗೆ ರವಾನಿಸಿದ್ದೀರಿ. ನಿಮ್ಮ ವಿರುದ್ದದ ಪ್ರಕರಣವನ್ನು ತಪ್ಪಿಸಬೇಕಾದರೆ ಹಣ ನೀಡಬೇಕೆಂಬ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ.
ವಂಚನೆಗೆ ಒಳಗಾದವರ ವಿರುದ್ಧ ಪ್ರಕರಣ ಹಾಗೂ ಪಾವತಿ ಹಣದಲ್ಲಿ ರಿಯಾಯಿತಿ ಸಡಿಲಿಕೆಗೆ ವಂಚಕರು ತುರ್ತು ಸ್ಥಿತಿ (ಸೆನ್ಸ್ ಆಫ್ ಅರ್ಜೆನ್ಸಿ) ಸೃಷ್ಟಿ ಮಾಡುತ್ತಾರೆ. ಈಗಾಗಲೇ ಹಣ ಪಾವತಿಸಿದೆ ದಂಡದ ಮೊತ್ತದಲ್ಲಿ ರಿಯಾಯಿತಿ ಮಾಡಲಾಗುವುದು. ಇಲ್ಲವಾದರೆ ಹೆಚ್ಚು ಮೊತ್ತವನ್ನು ಪಾವತಿಸಬೇಕು ಎಂದು ವಂಚಿಸುತ್ತಾರೆ. ಇದರಿಂದ ಕೆಲವರು ಹೆದರಿ ಕೂಡಲೇ ಹಣವನ್ನು ಪಾವತಿಸಿ ಮೋಸದ ಜಾಲಕ್ಕೆ ಬಿದ್ದಿದ್ದಾರೆ.
ಈ ಸಂಬಂಧ ಸೈಬರ್ ಭದ್ರತಾ ತಜ್ಞರು ಪ್ರತಿಕ್ರಿಯಿಸಿ, ‘ವಂಚಕರು ತಮಗೆ ಸಿಗುವ ಫೋನ್ ನಂಬರ್ ಗಳಿಗೆ ಬೆದರಿಕೆಯ ಸಂದೇಶವನ್ನು ಕಳುಹಿಸುತ್ತ ಹಣ ವಂಚನೆ ಮಾಡುತ್ತಿದ್ದಾರೆ. ವಂಚನೆಗೊಳಗಾದವರು ಕೆಲವೊಂದು ವಾಟ್ಸ್ ಆಪ್ ಗ್ರೂಪ್‌ನಲ್ಲಿರುತ್ತಾರೆ. ಯಾರಾದರೂ ಆ ಗ್ರೂಪ್‌ಗೆ ಅಶ್ಲೀಲ ಚಿತ್ರ ಅಥವಾ ವಿಡಿಯೋವನ್ನು ಕಳುಹಿಸಿರುತ್ತಾರೆ. ಅದು ಅವರ ಗ್ಯಾಲರಿಯಲ್ಲಿ ಸ್ಟೋರೇಜ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಪೊಲೀಸರೆಂದು ಕರೆ ಮಾಡಿ ‘ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳಿವೆ’ ಎಂದು ಹೆದರಿಸಿ ಮೋಸ ಮಾಡುತ್ತಾರೆ’ ಎಂದಿದ್ದಾರೆ.
ನಂಬರ್ ಹೇಗೆ ಸಿಗುತ್ತದೆ ಗೊತ್ತಾ?
ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವವರು ಇದ್ದಾರೆ. ಇದರಿಂದ ಸುಲಭವಾಗಿ ಮೊಬೈಲ್ ನಂಬರ್‌ಗಳು ದೊರೆಯುತ್ತದೆ. ವಿದ್ಯಾರ್ಥಿಗಳು, ಕಾರು ಮಾಲೀಕರು ಸೇರಿದಂತೆ ವಿವಿಧ ವರ್ಗಗಳಿಂದ ಗ್ರಾಹಕರ ಮೊಬೈಲ್ ಸಂಖ್ಯೆಗಳು (ಡಾಟಾ ಬೇಸ್) ಮಾರಾಟ ಮಾಡುವ ಸಂಸ್ಥೆಗಳು ಕೂಡ ಇವೆ.
ಬಂಧನದ ಬೆದರಿಕೆ:
ಸೈಬರ್ ಪೊಲೀಸರೆಂದು ಕರೆ ಮಾಡಿ, ನಿನ್ನೆ ರಾತ್ರಿ ನೀವು ಹುಡುಗಿಯೊಂದಿಗೆ ವಿಡಿಯೋ ಚಾಟ್ ಮಾಡಿದ್ದು, ಆ ಹುಡುಗಿ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತನಿಖೆ ವೇಳೆ ನಿಮ್ಮ ನಂಬರ್ ಸಿಕ್ಕಿದೆ. ಈ ಸಂಬಂಧ ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಿದ್ದು. ನಿಮ್ಮ ಮೇಲೂ ಎಫ್‌ಐಆರ್ ದಾಖಲಾಗಿದೆ. ಹಣ ನೀಡಿದರೆ ಈ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದೆಂಬ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ ಕೂಡಲೇ ಕರೆ ಮಾಡುವಂತೆ ಒಂದು ಮೊಬೈಲ್ ಸಂಖ್ಯೆಯನ್ನು ಕೂಡ ಕಳುಹಿಸಲಾಗುತ್ತದೆ. ಕರೆ ಸ್ವೀಕರಿಸಿದರೆ ಇನ್ನಷ್ಟು ಹೆದರಿಸಿ, ಹಣವನ್ನು ವಸೂಲಿ ಮಾಡುತ್ತಿದ್ದಾರೆ.
‘ಮಂಗಳೂರು ನಗರದಲ್ಲಿ ಪೊಲೀಸರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರನ್ನು ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಯಾವುದೇ ಕಾರಣಕ್ಕೂ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ನೋಟಿಸ್ ಕಳುಹಿಸುವುದಿಲ್ಲ. ಜನರು ಈ ಬಗ್ಗೆ ಎಚ್ಚೆತ್ತುಕೊಂಡು ವಂಚನೆಗೆ ಒಳಗಾಗದಿರಿ’ ಎಂದು ಸೈಬರ್ ಭದ್ರತಾ ತಜ್ಞ ಡಾ.ಅನಂತ ಜಿ. ಪ್ರಭು ಹೇಳುತ್ತಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಸೆನ್ ಠಾಣೆ ಇನ್ಸ್‌ಸ್ಪೆಕ್ಟರ್ ಸತೀಶ್, ‘ಅಶ್ಲೀಲ ಚಿತ್ರಗಳ ವಿಷಯವನ್ನು ಮುಂದಿಟ್ಟುಕೊಂಡು ಇನ್ನೂ ಮುಂದೆಯೂ ವಂಚನೆ ಜಾಲಗಳು ಕಾರ್ಯನಿರ್ವಹಿಸಬಹುದು. ಜನರು ಎಚ್ಚೆತ್ತುಕೊಂಡು ಆಮಿಷ, ಬೆದರಿಕೆ ಹೆದರದೆ ಪೊಲೀಸರಗೆ ಮಾಹಿತಿ ನೀಡಬೇಕು’ ಎಂದಿದ್ದಾರೆ.