ಸುರತ್ಕಲ್ ಟೋಲ್ ತೆರವು ಮಾಡಿ ಜನರ ಕಣ್ಣಿಗೆ ಮಣ್ಣೆರಚಿದ ಕೇಂದ್ರ ಸರ್ಕಾರ – ಬೆಂಕಿಯಿಂದ ಬಾಣಲೆಗೆ ಬಿದ್ದ ವಾಹನ ಮಾಲೀಕರು ; ಟೋಲ್ ನಲ್ಲೂ ಗೋಲ್ ಮಾಲ್…!!

ನ್ಯೂಸ್ ಆ್ಯರೋ : ಸುರತ್ಕಲ್ ಟೋಲ್‌ಗೇಟ್ ಅನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಿಲೀನಗೊಳಿಸಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಶುಕ್ರವಾರ ಅಧಿಸೂಚನೆಯನ್ನು ಪ್ರಕಟ ಮಾಡಿದೆ. ಆದರೆ, ಸುರತ್ಕಲ್ ಟೋಲ್ ರದ್ದಿನ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಹೆಜಮಾಡಿ ಟೋಲ್ ಗೇಟ್ ಜತೆ ಸುರತ್ಕಲ್ ಟೋಲ್ ಗೇಟ್ ಜತೆ ವಿಲೀನ ಮಾಡಿ, ಟೋಲ್ ಶುಲ್ಕ ಹೆಚ್ಚಿಸಿರುವುದರಿಂದ ವಾಹನ ಸವಾರರು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಮೂಲಕ ಜನರ ಕಣ್ಣಿಗೆ ಸರ್ಕಾರ ಮಣ್ಣೆರಚಿದೆ ಎಂಬ ದೂರು ವ್ಯಕ್ತವಾಗಿದೆ.
ಸುರತ್ಕಲ್‌ನಿಂದ ನಂತೂರುವರೆಗಿನ ಚತುಷ್ಪಥ ಹೆದ್ದಾರಿ ಹಾಗೂ ನಂತೂರಿನಿಂದ ಪಡೀಲ್‌ವರೆಗಿನ ಬೈಪಾಸ್ ರಸ್ತೆಯ ಬಳಕೆದಾರರಿಂದ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಇದುವರೆಗೆ ಸಂಗ್ರಹಿಸಲಾಗುತ್ತಿದ್ದ ಸುಂಕವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲೇ ಸಂಗ್ರಹಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಬಗ್ಗೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ‘ನಾವು ಹೆಜಮಾಡಿ ಟೋಲ್‌ಗೇಟ್ ನಲ್ಲಿ ಸುಂಕವನ್ನು ಹೆಚ್ಚಿಸಿಲ್ಲ. ಹೆದ್ದಾರಿ ಬಳಕೆದಾರಿಂದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸುತ್ತಿದ್ದ ಸುಂಕವನ್ನು ಹೆಜಮಾಡಿಯಲ್ಲೇ ಸಂಗ್ರಹಿಸಲಾಗುತ್ತದೆ’ ಎಂದಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (ಎನ್‌ಎಚ್ಎಐ) 1988ರ ಎನ್‌ಎಚ್‌ಎಐ ಕಾಯ್ದೆ ಪ್ರಕಾರ ನವಯುಗ ಉಡುಪಿ ಪ್ರೈ.ಲಿಮಿಟೆಡ್ ಕಂಪನಿ ಜೊತೆ 2010ರ ಮಾ 9ರಂದು ರಾಷ್ಟ್ರೀಯ ಹೆದ್ದಾರಿ 66 ಅನ್ನು ಕುಂದಾಪುರದಿಂದ ಸುರತ್ಕಲ್‌ವರೆಗಿನ 75 ಕಿ.ಮೀ, ನಂತೂರಿನಿಂದ ಮಹಾವೀರ (ಪಂಪ್‌ವೆಲ್) ವೃತ್ತದವರೆಗಿನ 1.4 ಕಿ.ಮೀ ಹಾಗೂ ಮಹಾವೀರ ವೃತ್ತದಿಂದ ತಲಪಾಡಿವರೆಗಿನ 13.5 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಕಾಮಗಾರಿಗೆ 2013ರ ಮಾ 12ರಂದು ಅಧಿಸೂಚನೆ ಹೊರಡಿಸಲಾಗಿತ್ತು. 2008ರ ರಾಷ್ಟ್ರೀಯ ಹೆದ್ದಾರಿಗಳ ಸುಂಕ (ದರ ನಿರ್ಧಾರ ಮತ್ತು ಸಂಗ್ರಹಣೆ) ನಿಯಮ ಪ್ರಕಾರ ಸುಂಕದ ದರ ನಿಗದಿಪಡಿಸಲು ಇದರ ಈ ಕಂಪನಿಗೆ ಅವಕಾಶ ಕಲ್ಪಿಸಲಾಗಿತ್ತು.

2007–08ರ ಮೂಲ ದರದ ಆಧಾರದಲ್ಲಿ ದರವನ್ನು ಪರಿಷ್ಕರಿಸ ಬಹುದಾಗಿದ್ದು, ಅದರ ಪ್ರಕಾರ ಹೆಜಮಾಡಿ– ತಲಪಾಡಿ ಹೆದ್ದಾರಿ ನಡುವೆ ಚತುಷ್ಫಥ ಅಥವಾ ಅದಕ್ಕಿಂತ ಹೆಚ್ಚು ಪಥಗಳ ರಸ್ತೆಯಲ್ಲಿ ಸಾಗುವ ವಾಹನಗಳು ಹಿಂದಿನ ಮೂಲದರಕ್ಕಿಂತ ಒಂದರಿಂದ ಒಂದೂವರೆ ಪಟ್ಟು ಹೆಚ್ಚಾಗಲಿದೆ. ನಂತೂರು– ಪಡೀಲ್ ಬೈಪಾಸ್‌ಗೆ ಬಳಸುವ ವಾಹನಗಳಿಗೆ ಮೂಲದರಕ್ಕಿಂತ ಒಂದೂವರೆ ಪಟ್ಟು ಹಾಗೂ ಸುರತ್ಕಲ್‌ನಿಂದ ನಂತೂರುವರೆಗಿನ ವಾಹನಗಳಿಗೆ ಮೂಲದರಕ್ಕಿಂತ ಒಂದು ಪಟ್ಟು ದರ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.
ಟೋಲ್ ಪ್ಲಾಜಾದ 20 ಕಿ.ಮೀ ವ್ಯಾಪ್ತಿಯಲ್ಲಿ ನೆಲೆಸಿರುವ ವಾಹನ ಮಾಲೀಕರು ₹ 315 ಪಾವತಿಸಿ ವಾರ್ಷಿಕ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹೆದ್ದಾರಿ ಅಭಿವೃದ್ಧಿಗೆ ₹ 315.82 ಕೋಟಿ ವೆಚ್ಚವಾಗಿದೆ. ಈ ಬಂಡವಾಳ ವಸೂಲಿ ಆದ ಬಳಿಕ ಸುಂಕದ ಪ್ರಮಾಣವನ್ನು ಶೇ 40ಕ್ಕೆ ಇಳಿಸಬಹುದು. ಹಾಗೂ ವಾರ್ಷಿಕ ಪರಿಷ್ಕರಣೆ ಒಳಪಡಿಸಬಹುದು ಎಂದೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ರದ್ದು:
ನಿರಂತರ ಹೋರಾಟದ ನಂತರ ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು, ಈ ಮೂಲಕ ಬಹುದಿನದ ಜನರ ಹೋರಾಟಕ್ಕೆ ಜಯ ಸಿಕ್ಕಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್ ಗೇಟ್ಗಳು ಇದ್ದು, ಕಾನೂನು ಬಾಹಿರವಾಗಿ ಸುರತ್ಕಲ್ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ನಿರಂತರ ಪ್ರತಿಭಟನೆ ನಡೆಸಿತ್ತು.
ಸುರತ್ಕಲ್ ಟೋಲ್ ಬಂದ್ ಮಾಡಲು ಅಕ್ಟೋಬರ್ 28ರಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಇವರ ಹೋರಾಟ ಪ್ರಾರಂಭವಾದಗ ಸಂಸದ ಕಟೀಲ್ 20 ದಿನದಲ್ಲಿ ಟೋಲ್ ಬಂದ್ ಮಾಡಲಾಗುವುದು ಎಂದರು. ಆದರೆ 20 ದಿನ ಕಳೆದರು ಬಂದ್ ಆಗದಿದ್ದಾಗ ಪ್ರತಿಭಟನೆ ಅಹೋರಾತ್ರಿ ಮುಂದುವರಿದಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿಯ ಸತತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು ಟೋಲ್ ಗೇಟ್ನ್ನು ರದ್ದುಗೊಳಿಸಿದೆ.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿ, ‘ಆರು ವರ್ಷಗಳ ಸತತ ಹೋರಾಟದ ನಂತರ ಸುರತ್ಕಲ್ ಟೋಲ್ ಗೇಟ್ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಇದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ಥ ಜನತೆಯ ಒಗ್ಗಟ್ಟಿನ ಹೋರಾಟದ ಫಲ. ದಣಿವರಿಯದ ಪ್ರಯತ್ನಗಳಿಂದಾಗಿ ಇಂದು ಗೆಲುವು ಸಿಕ್ಕಿದೆ’ ಎಂದು ಸಂತಸವನ್ನು ವ್ಯಕ್ತಪಡಿಸಿದರು.