ನ್ಯೂಸ್ ಆ್ಯರೋ : ಉದ್ಯಮದಲ್ಲಿ ಪಾರ್ಟ್ನರ್ ಆಗಬೇಕಿದ್ದ ವ್ಯಕ್ತಿಯ ಖಾಸಗೀ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡುವುದಾಗಿ ಬೆದರಿಸಿ ಚಿನ್ನ ಹಾಗೂ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೇ ಬೆದರಿಕೆ ಒಡ್ಡಿದ ಆರೋಪದಡಿ ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್(42) ಎಂಬಾತನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಕಾವೂರು ನಿವಾಸಿ ಸುರೇಶ್ ಸುರತ್ಕಲ್‌ನಲ್ಲಿ ರಾಜೇಶ್ ಪವಿತ್ರನ್ ಜತೆ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ ರಾಜೇಶ್ ಪವಿತ್ರನ್‌ನ ಅವ್ಯವಹಾರಗಳು ಗಮನಕ್ಕೆ ಬಂದುದರಿಂದ ಪಾಲುದಾರಿಕೆಯಿಂದ ಹೊರ ಬರಲು ನಿರ್ಧರಿಸಿದ್ದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಆರೋಪಿ ರಾಜೇಶ್ ಪವಿತ್ರನ್ ಎಂಬಾತ ಸುರೇಶ್ ಅವರ ಲ್ಯಾಪ್ ಟಾಪ್ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು, ಇಲ್ಲದಿದ್ದಲ್ಲಿ ಅದರಲ್ಲಿದ್ದ ಖಾಸಗೀ ಮಾಹಿತಿ ಬಹಿರಂಗ ಪಡಿಸುತ್ತೇನೆ ಮಾತ್ರವಲ್ಲ ಕೈ, ಕಾಲು ಮುರಿ ಯುವುದಾಗಿ ಬೆದರಿಕೆ ಹಾಕಿದ್ದ.
ಈ ಬಗ್ಗೆ ನೊಂದ ಸುರೇಶ್ ಅವರು ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಪೊಲೀಸರು ಕ್ರಮ ಕೈಗೊಂಡು ರಾಜೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಗೆ ನೆರವು ನೀಡಿದ ಆರೋಪದಲ್ಲಿ ಡಾ| ಸನಿಜ ಎಂಬಾಕೆಯ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.