ಮಂಗಳೂರು : ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಯ ಕಾಂಪೌಂಡ್ ಒಳಗೇ ಕಾಂಕ್ರೀಟ್ ರಸ್ತೆ ನಿರ್ಮಾಣ – ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅನುದಾನದ ಹಣ ದುಂದುವೆಚ್ಚಗೈದ ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆರೋಪ, ಪೋಸ್ಟ್ ವೈರಲ್…!!

ನ್ಯೂಸ್ ಆ್ಯರೋ : ಗ್ರಾಮ ಪಂಚಾಯತ್ ರಸ್ತೆಗಳು ಉತ್ತಮವಾಗಿರಲೆಂಬ ಕಾರಣಕ್ಕೆ ಈಗೀಗ ಮಣ್ಣಿನ ರಸ್ತೆಗಳೂ ಕೂಡ ಕಾಂಕ್ರೀಟ್ ರಸ್ತೆಗಳಾಗಿ ಬದಲಾಗುತ್ತಿವೆ. ತೀರಾ ಹದಗೆಟ್ಟ ರಸ್ತೆಗಳಿಗೆ ಹೊಸ ರೂಪ ಕೊಡುವ ಮೂಲಕ ಮೂಲಭೂತ ಸೌಕರ್ಯಗಳ ಪೈಕಿ ಒಂದಾದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರಗಳೂ ಕೂಡ ಅನುದಾನವನ್ನು ಕಾಲಕಾಲಕ್ಕೆ ಒದಗಿಸುತ್ತಲೇ ಬರುತ್ತಿವೆ. ಆದರೆ ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ ಖಾಸಗಿ ಜಮೀನಿನ ಒಳಭಾಗದ ಮನೆಯೊಂದಕ್ಕೆ ತೆರಳುವ ರಸ್ತೆಗೆ ಕಾಂಕ್ರೀಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇಡೀ ಗ್ರಾಮದ ಜನತೆ ನೀಡುವ ತೆರಿಗೆ ಹಣವನ್ನು ಗ್ರಾಮದ ನಾಗರಿಕರೆಲ್ಲರಿಗೂ ಸದುಪಯೋಗಪಡಿಸುವುದು ಪಂಚಾಯತ್‌ನ ಕರ್ತವ್ಯ. ಆದರೆ ಅಡ್ಯಾರ್ ಗ್ರಾಮ ಪಂಚಾಯತ್ ಕೇವಲ ಒಬ್ಬೊಬ್ಬರಿಗೋಸ್ಕರ ತನ್ನ ಅನುದಾನವನ್ನು ದುರುಪಯೋಗ ಪಡಿಸುತ್ತಿದೆ ಎಂದು ಈ ಪೋಸ್ಟ್ ನಲ್ಲಿ ದೂರಲಾಗಿದೆ.
ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳ ಗ್ರಾಮದ ಮೇರ್ಲಪದವು ಎಂಬಲ್ಲಿ ಪ್ರಕಾಶ್ ಸಲ್ಡಾನ ಎಬವರ ಮನೆಯ ಕಾಂಪೌಂಡ್ ಒಳಗಡೆ ಕಾಂಕ್ರೀಟ್ ರೋಡ್ ಮಾಡಲು ಅಡ್ಯಾರ್ ಪಂಚಾಯತ್ 1ಲಕ್ಷ ಅನುದಾನವನ್ನು ಉಪಯೋಗಿಸಿದೆ ಎನ್ನಲಾಗುತ್ತಿದ್ದು, ಸ್ಥಳೀಯ ವಾರ್ಡ್ ನ ಸದಸ್ಯರೇ ಈ ಬಗ್ಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.
ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಟೀಂ ನ್ಯೂಸ್ ಆ್ಯರೋ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಅವರನ್ನು ಸಂಪರ್ಕಿಸಿ ಪ್ರಶ್ನಿಸಿದ್ದು, ಸದ್ಯ ಗ್ರಾಮ ಪಂಚಾಯತ್ ಅನುದಾನದಲ್ಲಿ ಕಾಂಕ್ರೀಟ್ ಹಾಕಲಾದ ರಸ್ತೆಯನ್ನು ಪ್ರಕಾಶ್ ಸಲ್ಡಾನ ಅವರು ಗ್ರಾಮ ಪಂಚಾಯತ್ ಗೆ ದಾನ ರೂಪವಾಗಿ ನೀಡಿರುವ ಕಾರಣಕ್ಕೆ, ವಾರ್ಡ್ ನ ಇಬ್ಬರು ಸದಸ್ಯರು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ರಸ್ತೆ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ರಸ್ತೆ ದಾನವಾಗಿ ನೀಡಿದ ಕಾರಣಕ್ಕಾಗಿ ಕಾಂಕ್ರೀಟ್ ಮಾಡಲಾಗಿದೆ ಎನ್ನುವುದಾದರೆ ಇನ್ನೂ ಹಲವರೂ ಕೂಡ ಇದೇ ರೀತಿ ದಾನವಾಗಿ ನೀಡಿದರೆ ಗ್ರಾಮ ಪಂಚಾಯತ್ ನವರು ಕಾಂಕ್ರೀಟ್ ಮಾಡಿಕೊಡುತ್ತಾರೆಯೇ? ಇದು ಸ್ವಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಾಡಲಾದ ಕಾಮಗಾರಿಯೇ ಆಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.