1. Home
  2. Mangaluru
  3. ಗುಳಿಗ ದೈವದ ಕಾರ್ಣಿಕ ಶಕ್ತಿ ಮತ್ತೊಮ್ಮೆ ಅನಾವರಣ – ವಾಮಂಜೂರಿನಲ್ಲಿ ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ಗುಳಿಗನಿಗೆ ಮೊರೆ ಇಟ್ಟಿದ್ದ ಸ್ಥಳೀಯರು..!!

ಗುಳಿಗ ದೈವದ ಕಾರ್ಣಿಕ ಶಕ್ತಿ ಮತ್ತೊಮ್ಮೆ ಅನಾವರಣ – ವಾಮಂಜೂರಿನಲ್ಲಿ ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ಗುಳಿಗನಿಗೆ ಮೊರೆ ಇಟ್ಟಿದ್ದ ಸ್ಥಳೀಯರು..!!

ಗುಳಿಗ ದೈವದ ಕಾರ್ಣಿಕ ಶಕ್ತಿ ಮತ್ತೊಮ್ಮೆ ಅನಾವರಣ – ವಾಮಂಜೂರಿನಲ್ಲಿ ಬ್ಯಾನರ್ ಹರಿದ ಕಿಡಿಗೇಡಿಗಳ ವಿರುದ್ಧ ಗುಳಿಗನಿಗೆ ಮೊರೆ ಇಟ್ಟಿದ್ದ ಸ್ಥಳೀಯರು..!!
0

ನ್ಯೂಸ್ ಆ್ಯರೋ‌ : ತುಳುನಾಡಿನ ದೈವಗಳ ಕಾರ್ಣಿಕ ಶಕ್ತಿ ಆಗಾಗ್ಗೆ ಅನಾವರಣಗೊಳ್ಳುತ್ತಿರುತ್ತದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ, ದೈವಗಳ ಶಕ್ತಿ, ದೈವಾರಾಧನೆ ಕುರಿತಾದ ಜನರ ನಂಬಿಕೆ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಗುಳಿಗ ದೈವದ ಕಾರ್ಣಿಕದ ಬಗ್ಗೆ ಹೇಳಲಾಗಿತ್ತು. ಇದೀಗ ಮಂಗಳೂರಿನ ವಾಮಂಜೂರಿನಲ್ಲಿ ಅಂತಹುದೇ ಘಟನೆ ನಡೆದಿದ್ದು, ಗುಳಿಗ ದೈವದ ಮೊರೆ ಹೋದ ಬಳಿಕ ಬ್ಯಾನರ್ ಹರಿದ ಕಿಡಿಗೇಡಿಗಳಿಗೆ ಶಿಕ್ಷೆಯಾಗಿದೆ. ಈ ಮೂಲಕ ದೈವಶಕ್ತಿ ಯಾರನ್ನೂ ಕೈಬಿಡೋದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ವಾಮಂಜೂರಿನಲ್ಲಿ ದಸರಾ ಹಿನ್ನೆಲೆಯಲ್ಲಿ ಶಾರದೋತ್ಸವ ಸಮಿತಿ ಮತ್ತು ವಾಮಂಜೂರು ಫ್ರೆಂಡ್ಸ್ ನೇತೃತ್ವದಲ್ಲಿ ಬ್ಯಾನರ್ ಮತ್ತು ಕಟೌಟ್’ಗಳನ್ನು ಅಳವಡಿಸಲಾಗಿತ್ತು. ಆರೋಪಿಗಳು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದರು. ದೂರು ನೀಡಿದ ಬಳಿಕ ಆರೋಪಿಗಳ ಬಗ್ಗೆ ಮಾಹಿತಿಯಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದರು.

ಇದರಿಂದ ಬೇಸರಗೊಂಡ ಶಾರದೋತ್ಸವ ಸಮಿತಿ ಗುಳಿಗನ ಮೊರೆ ಹೋಗಿತ್ತು. ಆರೋಪಿಗಳಿಗೆ ಶಿಕ್ಷೆಯಾಗಲಿ ಅಂತ ದೈವದ ಬಳಿ ಪ್ರಾರ್ಥನೆ ಮಾಡಿದ್ದರು. ಕೊನೆಗೂ ದೈವಗಳ ಕಾರ್ಣಿಕ ಶಕ್ತಿಯಿಂದ ಆ ಪ್ರಾರ್ಥನೆ ಫಲ ಕೊಟ್ಟಿದೆ. ಆರೋಪಿಗಳಾದ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ, ಪ್ರವೀಣ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ತುಳುನಾಡಿನಲ್ಲಿ ದೈವಗಳ ಬಗ್ಗೆ ವಿಶೇಷ ನಂಬಿಕೆಯಿದೆ. ಯಾವುದಕ್ಕೂ ಹೆದರದ ಜನರು ದೈವಗಳಿಗೆ ಹೆದರುತ್ತಾರೆ. ತುಳುವರಿಗೆ ದೈವಗಳೇ ರಕ್ಷಕರು, ಶಿಕ್ಷಕರು. ದೈವಗಳನ್ನು ಪ್ರಾರ್ಥಿಸಿದರೆ ಕಷ್ಟ ಕಳೆಯುತ್ತದೆ, ತಪ್ಪು ಮಾಡಿದರೆ ಶಿಕ್ಷೆಯೂ ಆಗುತ್ತದೆ ಎಂಬುದನ್ನು ತುಳುನಾಡಿನ ಜನರು ಬಲವಾಗಿ ನಂಬುತ್ತಾರೆ. ಖುಷಿಯಿರಲಿ, ದು:ಖವಿರಲಿ, ದೂರದ ಪ್ರಯಾಣವಿರಲಿ, ಮದುವೆ ಮತ್ತಿತರ ಶುಭ ಸಂದರ್ಭಗಳಿರಲಿ.. ದೈವಶಕ್ತಿಯ ಮೊರೆ ಹೋಗುವುದು ವಾಡಿಕೆ. ನಂಬಿದ ದೈವ ಕೈ ಬಿಡಲ್ಲ ಎಂದು ಕರಾವಳಿ ಜನರು ನಂಬುತ್ತಾರೆ.

ತುಳುನಾಡಿನ ದೈವಗಳ ಕಾರ್ಣಿಕ ಶಕ್ತಿಯೇ ಹಾಗಿದೆ. ಪೊಲೀಸ್ ಠಾಣೆ, ಕೋರ್ಟ್ ಕಚೇರಿಗಳಲ್ಲಿ ಇತ್ಯರ್ಥವಾಗದ ಬಹುತೇಕ ಪ್ರಕರಣಗಳು ದೈವಗಳ ಮುಂದೆ ಕೈಯೊಡ್ಡಿ ಬೇಡಿಕೊಂಡ ಬೆನ್ನಲ್ಲೇ ಬಗೆ ಹರಿದಿವೆ. ಒಡೆದು ಹೋದ ಕುಟುಂಬಗಳನ್ನು ದೈವಗಳು ಒಂದು ಮಾಡಿವೆ. ಕುಟುಂಬಗಳ ಕಾವಲುಗಾರನಾಗಿ ದೈವಗಳು ನಿಂತಿವೆ. ಕಾಲ ಬದಲಾದರೂ, ಆಧುನಿಕತೆ ಆವರಿಸಿಕೊಂಡರೂ ಕರಾವಳಿಯಲ್ಲಿ ಇಂದಿಗೂ ಜನರು ದೈವಗಳನ್ನು ನಂಬಿ ಬದುಕುತ್ತಿದ್ದಾರೆ.

ವಾರ್ಷಿಕ ಕೋಲ-ನೇಮ, ಮಾಣಿಚ್ಚಿಲ್, ಅಗೇಲು ಸೇವೆ ನೀಡಿ ತಮ್ಮ ಇಷ್ಟಾರ್ಥ ಸಿದ್ದಿಗೆ ದೈವಗಳ ಮೊರೆ ಹೋಗುತ್ತಾರೆ. ಇದೀಗ ವಾಮಂಜೂರಿನ ಘಟನೆಯಿಂದ ದೈವದ ಮಹಿಮೆ ಮತ್ತೊಮ್ಮೆ ಸಾಬೀತಾಗಿದೆ. ಇದೊಂದು ಪೋಲಿಸರ ಕೆಲಸವಾದರೂ ಗುಳಿಗನ ಕಾರಣಿಕ ಇಲ್ಲಿಯೂ ಕೆಲಸ ಮಾಡಿದೆ ಅನ್ನುತ್ತಾರೆ ಸ್ಥಳೀಯರು..!!

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..