1. Home
  2. Mangaluru
  3. ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆಗೆ ಕ್ಷಣಗಣನೆ – ಮುಖ್ಯಮಂತ್ರಿ, ಸ್ವಾಮೀಜಿಗಳು, ಸಚಿವರು ಭಾಗಿ

ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆಗೆ ಕ್ಷಣಗಣನೆ – ಮುಖ್ಯಮಂತ್ರಿ, ಸ್ವಾಮೀಜಿಗಳು, ಸಚಿವರು ಭಾಗಿ

ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ಲೋಕಾರ್ಪಣೆಗೆ ಕ್ಷಣಗಣನೆ – ಮುಖ್ಯಮಂತ್ರಿ, ಸ್ವಾಮೀಜಿಗಳು, ಸಚಿವರು ಭಾಗಿ
0

ನ್ಯೂಸ್‌ ಆ್ಯರೋ: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಇಂದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ, ರೈತ ಸೈನ್ಯದ ನೇತಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡುವರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಂಸದರು, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಜಿಲ್ಲೆಯ ಹಲವು ನಾಯಕರು, ಒಕ್ಕಲಿಗ ಮುಖಂಡರು ಭಾಗವಹಿಸಲಿದ್ದಾರೆ. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಶೌರ್ಯದ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ.

ಪ್ರತಿಮೆ ಪೀಠದ ಅನಾವರಣವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸುವರು. ಪ್ರವೇಶ ದ್ವಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ನೆರವೇರಿಸಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಡಿ.ವಿ ಸದಾನಂದ ಗೌಡ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಆರ್ ಅಶೋಕ್, ಡಾ.ಕೆ. ಸುಧಾಕರ್, ಅಶ್ವತ್ಥ ನಾರಾಯಣ, ಎಸ್. ಟಿ. ಸೋಮಶೇಖರ್, ಎಸ್. ಅಂಗಾರ, ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯರಾದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ. ಉಳಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಕೆದಂಬಾಡಿ ರಾಮಯ್ಯಗೌಡರ ಗುಣಗಾನ ಮಾಡಲಿದ್ದಾರೆ.

ಜಿಲ್ಲೆಯ ಪ್ರತೀ ತಾಲ್ಲೂಕುಗಳಿಂದ ಗಣ್ಯರು, ಅಭಿಮಾನಿಗಳು, ಸ್ಮಾರಕ ಉಸ್ತುವಾರಿ ಸಮಿತಿ ಸದಸ್ಯರು, ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಎಲ್ಲರಿಗೂ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಹಾಗೂ ವೀರಸಮರದ ಚಿತ್ರಣ ಕಣ್ತುಂಬಲಿದೆ. ಸಮಾರಂಭಕ್ಕೆ 25,000 ಕ್ಕೂ ಅಧಿಕ ಮಂದಿ ಸೇರಲಿದ್ದು, ದೇಶದ ಪ್ರಥಮ ರೈತ ಸೇನಾಧಿಕಾರಿ, ಸಂಘಟಕಾರ ಕೆದಂಬಾಡಿ ರಾಮಯ್ಯ ಗೌಡರ ಬಲಿದಾನದ ನೆನಪನ್ನು ಮಾಡುವ ಸಂದರ್ಭ ಇದಾಗಲಿದೆ.

ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡರ ಪರಾಕ್ರಮದ ಹಿನ್ನೋಟ

1837ರಲ್ಲಿ ತುಳುನಾಡಿನ ವೀರ ರೈತರು ಬ್ರಿಟಿಷ್ ಕಂಪನಿಯ ರೈತ ವಿರೋಧಿ ಕಾರ್ಯಗಳ ವಿರುದ್ಧ ಹೋರಾಟ ನಡೆಸಿ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ಸಮಸ್ತ ಕೆನರಾ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಈ ಹೋರಾಟ ನಮ್ಮ ಜಿಲ್ಲೆಯ ಜನ ಆತ್ಮಭಿಮಾನದಿಂದ ಬೀಗಬೇಕಾದ ಹೆಮ್ಮೆಯ ವಿಚಾರವಾಗಿದೆ. ಈ ಹೋರಾಟದ ಮುಖ್ಯ ರೂವಾರಿ ಕೆದಂಬಾಡಿಯ ರಾಮಯ್ಯ ಗೌಡರು. ಈ ಐತಿಹಾಸಿಕ ಹೋರಾಟ ನಮ್ಮ ಪವಿತ್ರ ನೆಲದಲ್ಲಿ ನಡೆದಿದ್ದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರು ನೆನಪಿಡುವುದರ ಮೂಲಕ ಅವರ ತ್ಯಾಗ, ಬಲಿದಾನಕ್ಕೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ.

ಕೆದಂಬಾಡಿ ರಾಮಯ್ಯ ಗೌಡರು ಒಬ್ಬ ಶ್ರೇಷ್ಠ ಸಂಘಟಕರಾಗಿದ್ದು ತನ್ನ ಅಸಾಧಾರಣ ಮತ್ತು ಅತ್ಯದ್ಭುತ ನಾಯಕತ್ವದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ 13 ದಿನಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು ತನ್ನ ಜೀವವನ್ನು ಅರ್ಪಣೆ ಮಾಡಿದ ವೀರೋದ್ಧಾತ ನಾಯಕರಾಗಿದ್ದರು.ಈ 13 ದಿನಗಳ ಆಡಳಿತ ಅವಧಿಯನ್ನು ಸ್ವತಂತ್ರ ಸ್ಥಾಪಿತ ಸರಕಾರ ಎಂದು ಉಲ್ಲೇಖಿಸಲಾಗಿದೆ.

ಈ ಹೋರಾಟದ 20 ವರ್ಷಗಳ ನಂತರ ಜರಗಿದ 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಬಿಂಬಿಸಿದ್ದು, 1837ರ ಹೋರಾಟ ಇತಿಹಾಸದ ಕಡೆಗಣನೆಗೆ ಒಳಗಾಗಿದೆ. ಪ್ರಮುಖವಾಗಿ ಹೋರಾಟ ಪ್ರಾರಂಭವಾಗಿರುವುದು ರೈತರ ಬೆಲೆಗೆ ಅತಿಯಾಗಿ ತೆರಿಗೆ ಹೇರಿರುವುದರಿಂದ 1837ರ ಮಾರ್ಚ್ 31ರಂದು ಬ್ರಿಟಿಷ್‌ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಹೋರಾಟದ ಮಹಾನ್ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಸುಳ್ಯದ ಮದುವೆ ಗದ್ದೆ ಎಂಬ ಸ್ಥಳದಲ್ಲಿ ಸುಮಾರು 2000ಕ್ಕಿಂತ ಹೆಚ್ಚು ರೈತಾಪಿ ಜನರನ್ನು ಸಂಘಟಿಸಿದ್ದು ಅದಕ್ಕೆ ಪೂರ್ವ ತಯಾರಿಯಾಗಿ ಸುಮಾರು 1500 ಖಡ್ಗವನ್ನು ಕೊಡ್ಲಿಪೇಟೆಯಿಂದ ತರಿಸಿದ್ದರು.

ಮದುವೆ ಗದ್ದೆಯಿಂದ ಹೊರಟ ದಂಡು ಬೆಳ್ಳಾರೆಯತ್ತ ಸಾಗುತ್ತದೆ. ಅಲ್ಲಿ ಸೈನ್ಯವು ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ ನಾಲ್ಕು ತಂಡಗಳಾಗಿ ವಿಂಗಡಿಸಿ ಬೇರೆ ಬೇರೆ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ರಾಮಯ್ಯ ಗೌಡರ ನೇತೃತ್ವದ ಹೋರಾಟಗಾರರ ಮುಖ್ಯ ದಂಡು ಪುತ್ತೂರನ್ನು ವಶಪಡಿಸಿ ಮಂಗಳೂರಿನತ್ತ ಮುನ್ನಡೆಯುತ್ತದೆ. ಪುತ್ತೂರಿನಲ್ಲಿ ರೈತ ಹೋರಾಟಗಾರರ ಬೃಹತ್‌ ದಂಡನ್ನು ಕಣ್ಣಾರೆ ನೋಡಿದ ಕ್ಯಾಪ್ಟನ್ ಲೆವಿನ್ ಯುದ್ಧ ನಡೆಸಲು ಎದೆಗಾರಿಕೆಯಿಲ್ಲದೆ ಮಂಗಳೂರನ್ನು ರಕ್ಷಿಸುವುದು ಮುಖ್ಯವೆಂದು ಬಗೆದು ಯಾವ ಪ್ರತಿರೋಧ ತೋರದೆ ಮಂಗಳೂರಿಗೆ ಹಿಂತಿರುಗಿದರು.

ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅದಕ್ಕೆ ದಾರಿಯುದ್ದಕ್ಕೂ ಆಪಾರವಾದ ಜನಬೆಂಬಲ, ಪ್ರೋತ್ಸಾಹ, ನೆರವು ಮತ್ತು ಸಹಭಾಗಿತ್ವ ದೊರಕುತ್ತದೆ. ದಂಡಿನ ಗಾತ್ರ ವಿಶಾಲವಾಗಿ ಹಿಗ್ಗುತ್ತದೆ. ಧರ್ಮಸ್ಥಳದ ಆಗಿನ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ.

ಹೋರಾಟದೊಂದಿಗೆ ಮಂಗಳೂರಿಗೆ ಆಗಮಿಸಿದ ರೈತ ಹೋರಾಟಗಾರರು ಬ್ರಿಟಿಷ್ ಸೇನೆಗೆ ಬಹಳ ದೊಡ್ಡ ಪ್ರತಿರೋಧ ಒಡ್ಡಿದರು. ರಾತ್ರೋರಾತ್ರಿ ಹೆದರಿದ ಬ್ರಿಟಿಷ್ ಅಧಿಕಾರಿಗಳು ಕಣ್ಣಿನೂರಿಗೆ ಪಲಾಯನ ಮಾಡಿದರು. ಏಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿದ ಹೋರಾಟಗಾರರು ಬಾವುಟ ಗುಡ್ಡೆಯ ಬ್ರಿಟಿಷ್ ನಿಯಂತ್ರಣದ ಸ್ಥಳವಾದ ಲೈಟ್ ಹೌಸ್ ಪ್ರದೇಶದ ಬ್ರಿಟಿಷ್ ಬಂಗಲೆಗಳಿಗೆ ಬೆಂಕಿ ಹಚ್ಚಿದರು. ಅಲ್ಲಿನ ಈಸ್ಟ್ ಇಂಡಿಯಾ ಕಂಪನಿಯ ಬಾವುಟವನ್ನು ಕಿತ್ತೆಸೆದು ರಾಜ ಲಾಂಛನದ ಬಾವುಟವನ್ನು ಹಾರಿಸಿ ಮಂಗಳೂರು ಸ್ವತಂತ್ರಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಿದ್ದರು ಹಾಗೂ 13 ದಿನಗಳ ಕಾಲ ರಾಜ್ಯಭಾರ ಮಾಡಿದ್ದರು. ಆದ್ದರಿಂದ ಈ ಪ್ರದೇಶಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ.

ರಾಮಯ್ಯಗೌಡ ನೇತೃತ್ವದಲ್ಲಿ ಹೋರಾಟಗಾರರು ತಮ್ಮದೊಂದು ಸ್ಥಾಪಿತ ಸರಕಾರವೆಂದು ಬಹಳ ಪ್ರಬುದ್ಧವಾಗಿ ನಡೆದುಕೊಂಡರು. ಮಂಗಳೂರಿನ ನಿವಾಸಿಗಳಿಗೆ ಸಾಹುಕಾರರಿಗೆ 5 ನೇ ಏಪ್ರಿಲ್ 1837 ರಂದು ಪತ್ರ ಬರೆದು ಎಲ್ಲರೂ ಸ್ಥಾಪಿತ ಸರಕಾರದ ಜೊತೆ ಕೈ ಜೋಡಿಸಬೇಕೆಂದು ಕರೆ ನೀಡಲಾಯಿತು. ಹಾಗೆಯೇ ಈ ಭಾಗದ ಜನರಿಗೆ ಅನುಕೂಲವಾಗುವಂತೆ ತೆರಿಗೆ ಮನ್ನಾ ಮಾಡಲಾಯಿತು. 6ನೇ ದಿವಸ ಮಂಗಳೂರಿನ ಸಹಾಯಕ್ಕೆ ಮುಂಬಯಿ, ಗೋವಾ, ಕಣ್ಣನೂರುನಿಂದ ಬಂದ ಸುಸಜ್ಜಿತ ಬ್ರಿಟಿಷ್ ಸೈನ್ಯಕ್ಕೂ, ರೈತ ಹೋರಾಟಗಾರರಿಗೂ ರಕ್ತ ಸಿಕ್ತ ಹೋರಾಟ ನಡೆದು ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಮಯ್ಯಗೌಡರು ಸೇರಿದಂತೆ ಪ್ರಮುಖ ನಾಯಕರುಗಳು ಬ್ರಿಟಿಷರ ಕೈವಶರಾದರು. ಒಟ್ಟು 1115 ಜನರನ್ನು ಬಂಧಿಸಲಾಯಿತು.

ಮಂಗಳೂರಿನಲ್ಲಿ ಕಲ್ಯಾಣ ಸ್ವಾಮಿ (ಪುಟ್ಟ ಬಸಪ್ಪ) ಉಪ್ಪಿನಂಗಡಿ ಮಂಜ, ಲಕ್ಷ್ಮಪ್ಪ ಬಂಗರಸ ಬಂಟ ಆದಿಯಾಗಿ ಹಲವಾರು ಮುಖಂಡರುಗಳನ್ನು ಅರಳಿ ಮರಕ್ಕೆ ನೇಣುಹಾಕಿ ಕೆಲವು ದಿನ ಅಲ್ಲೇ ಇರಿಸಿ ಹದ್ದುಗಳಿಗೆ ತಿನ್ನಲು ಬಿಟ್ಟ ಭೀಕರ ಘಟನೆ ನಡೆದಿದ್ದು, ಆದ್ದರಿಂದ ಈ ಸ್ಥಳಕ್ಕೆ ಭೀಕರವಾದ ಕಟ್ಟೆ ಮುಂದೆ ಬಿಕರ್ನಕಟ್ಟೆ ಎಂದು ಹೆಸರಿಸಲಾಯಿತು. ರಾಜವೇಷದೊಂದಿಗೆ ಹೋರಾಟದಲ್ಲಿ ರಾಜನಾಗಿ ಬಂದ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಬಿಕರ್ನಕಟ್ಟೆ ಯಲ್ಲಿ ಗಲ್ಲು ಶಿಕ್ಷೆಗೆ ಒಳಗದಾಗ ನಾನು ಕೆದಂಬಾಡಿ ರಾಮಯ್ಯ ಗೌಡರ ನಿರ್ದೇಶನದಂತೆ ಈ ಹೋರಾಟದಲ್ಲಿ ರಾಜವೇಷವನ್ನು ಧರಿಸಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿರುತ್ತಾರೆ, ಆದರೂ ಗಲ್ಲು ಶಿಕ್ಷೆಗೆ ಒಳಗಾಗುತ್ತಾರೆ.

ಬ್ರಿಟಿಷರು ಬಹಳ ಜಾಣತನದಿಂದ ಹೋರಾಟವನ್ನು ಸಂಪೂರ್ಣವಾಗಿ ಮಟ್ಟಹಾಕಿ ಸಮಾಧಿ ಮಾಡಿದಂತೆ ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು, ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ, ಬಂಟ, ಕಾರಕಾರ ಸುಬೇದಾ‌ ಕೃಷ್ಣಯ್ಯ, ಗುಡ್ಡಮನ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ಘೋರವಾದ ಶಿಕ್ಷೆಯನ್ನು ಕೊಟ್ಟಿದ್ದರು.

ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಷ್ಟು, ಕುಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಾಗ ಜೈಲಿನಲ್ಲಿ ಸಾವನ್ನಪ್ಪುತ್ತಾರೆ, ಮಹಾನ್ ಸಂಚುಕೋರ ಹುಲಿಕಂದ ನಂಜಯ್ಯನ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ.

ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ ಸಾಮಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಿಡಿದ್ದೆದ್ದು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದು, ತನ್ನ ಅಸಾಧಾರಣ ಮತ್ತು ಅತ್ಯದ್ಭುತ ಮುಂದಾಳುತನದ ಮೂಲಕ ಈ ಭೂಪ್ರದೇಶಕ್ಕೆ ಎರಡು ವಾರಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬವರ್ಗ ಕೊನೆಗೆ ಯಾವುದೋ ಗುರುತು ಪರಿಚಯವಿಲ್ಲದ ಕಡಲಿನಾಚೆಗಿನ ಪರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರುಗಳಲ್ಲದೆ ಇನ್ನೂ ಹಲವು ಜನ ದಾಸ್ಯದ ಶೃಂಖಲೆಯನ್ನು ಕಳಚುವ ಅದ್ಭುತ ಕನಸುಗಳನ್ನು ನನಸಾಗಿಸಲು ಪಣತೊಟ್ಟು ತಮ್ಮದೆಲ್ಲವನ್ನು ನಾಡಿಗಾಗಿ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಬಲಿದಾನ ಮಾಡಿದ ಈ ಮಹಾನ್ ನಾಯಕರ ತ್ಯಾಗ ಬಲಿದಾನ ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ.