1. Home
  2. Mangaluru
  3. ಕುಕ್ಕರ್ ಸ್ಫೋಟದ ಬೆನ್ನುಹತ್ತಿದ ಖಾಕಿಗಳಿಗೆ ಸಿಗುತ್ತಿದೆ ಸ್ಫೋಟಕ ಮಾಹಿತಿ: ಲಷ್ಕರ್ ಎ ತೋಯ್ಬಾವನ್ನು ಸಂರ್ಪಕಿಸಲು ಯತ್ನಿಸಿದ್ದ ಆರೋಪಿ, ಎಫ್‌ಐಆರ್‌ ದಾಖಲಿಸಿಕೊಂಡ ರಾಷ್ಟ್ರೀಯ ತನಿಖಾ ದಳ

ಕುಕ್ಕರ್ ಸ್ಫೋಟದ ಬೆನ್ನುಹತ್ತಿದ ಖಾಕಿಗಳಿಗೆ ಸಿಗುತ್ತಿದೆ ಸ್ಫೋಟಕ ಮಾಹಿತಿ: ಲಷ್ಕರ್ ಎ ತೋಯ್ಬಾವನ್ನು ಸಂರ್ಪಕಿಸಲು ಯತ್ನಿಸಿದ್ದ ಆರೋಪಿ, ಎಫ್‌ಐಆರ್‌ ದಾಖಲಿಸಿಕೊಂಡ ರಾಷ್ಟ್ರೀಯ ತನಿಖಾ ದಳ

ಕುಕ್ಕರ್ ಸ್ಫೋಟದ ಬೆನ್ನುಹತ್ತಿದ ಖಾಕಿಗಳಿಗೆ ಸಿಗುತ್ತಿದೆ ಸ್ಫೋಟಕ ಮಾಹಿತಿ: ಲಷ್ಕರ್ ಎ ತೋಯ್ಬಾವನ್ನು ಸಂರ್ಪಕಿಸಲು ಯತ್ನಿಸಿದ್ದ ಆರೋಪಿ, ಎಫ್‌ಐಆರ್‌ ದಾಖಲಿಸಿಕೊಂಡ ರಾಷ್ಟ್ರೀಯ ತನಿಖಾ ದಳ
0

ನ್ಯೂಸ್‌ ಆ್ಯರೋ: ಮಂಗಳೂರಿನ ನಾಗುರಿ ಬಳಿ ನ.19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಮಹಮದ್ ಶಾರೀಕ್ ಉಗ್ರ ಸಂಘಟನೆಯನ್ನು ಸಂಪರ್ಕಿಸಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

Kukkar bomb case Kadri's RSS Office Sangh Niketan was terroristic Target

ಆರೋಪಿ ಮಹಮದ್ ಶಾರೀಕ್ ಎಂಬಾತ ಲಷ್ಕರ್ ಎ ತೋಯ್ಬಾವನ್ನು ಸಂರ್ಪಕಿಸಲು ಯತ್ನಿಸಿದ್ದ. ಅವರ ಸಹಕಾರ ಪಡೆದು ಕರಾವಳಿಯಲ್ಲಿ ಹಿಂದು ಮುಖಂಡರು, ಆರೆಸ್ಸೆಸ್ ನಾಯಕರು ಹಾಗೂ ಪೊಲೀಸರನ್ನು ಈತ ಟಾರ್ಗೆಟ್ ಮಾಡಿದ್ದ. ಇದಕ್ಕಾಗಿ ಎಕೆ-47 ನಂತಹ ರೈಫಲ್ ತರಿಸಲು ಯತ್ನಿಸಿದ್ದ. ಧರ್ಮ ದಂಗಲ್, ಹಿಜಾಬ್ ಘಟನೆ ಬಳಿಕ ಶಾರೀಕ್​ಗೆ ಮಂಗಳೂರೇ ಟಾರ್ಗೆಟ್ ಆಗಿತ್ತು ಎಂಬ ಅಂಶ ಪೊಲೀಸ್‌ ತನಿಖೆಯಲ್ಲಿ ಹೊರ ಬಿದ್ದಿದೆ.

ಪೊಲೀಸರಿಗೆ ಶಾರೀಕ್​ನ ಮೊಬೈಲ್​ನಲ್ಲಿ ಮಹತ್ವದ ಮಾಹಿತಿಗಳು ಲಭಿಸಿವೆ. ಆತ ವಿವಿಧ ಕಾರಣಗಳಿಗೆ 189 ಮಂದಿಯ ಜತೆ ಸಂಪರ್ಕ ಸಾಧಿಸಿರುವ ದಾಖಲೆ ಪತ್ತೆಯಾಗಿದೆ. ಆತನ ಮೊಬೈಲ್​ನಲ್ಲಿ ಕರಾವಳಿಯ ವ್ಯಕ್ತಿಗಳ ಜತೆಗೆ ಸಂಪರ್ಕ ಸಾಧಿಸಿದ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಕರೆ ಸ್ವಿಗ್ಗಿ, ಝೊಮೆಟೋ, ಕೆಲವು ಅಂಗಡಿ ಮಾಲೀಕರು ಮತ್ತು ಮೈಸೂರಿನ ಜನರೊಂದಿಗೆ ಮಾತನಾಡಿರುವುದು ಗೊತ್ತಾಗಿದೆ.

ಆರೋಪಿಯ ಮೊಬೈಲ್​ನಲ್ಲಿ ಹಲವು ಸೆಲ್ಪಿ ಫೋಟೋಗಳು ಸಿಕ್ಕಿದ್ದು, ಬಾಂಬ್ ತಯಾರಿಸುವ ವಿಡಿಯೋಗಳೂ ಪತ್ತೆಯಾಗಿವೆ. ಆತ ಮೈಸೂರಿನ ಬಾಡಿಗೆ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಊಟ, ತಿಂಡಿಗೆ ಸ್ವಿಗ್ಗಿ, ಝೊಮೆಟೋ ಮೂಲಕ ಮನೆಗೆ ಪಾರ್ಸೆಲ್ ತರಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಶಾರೀಕ್ ಮೊಬೈಲ್​ನಲ್ಲಿ ವಿವಾದಿತ ಭಾಷಣಕಾರ ಝಾಕೀರ್ ನಾಯ್ಕ್ ವಿಡಿಯೋಗಳು ಪತ್ತೆಯಾಗಿವೆ. ಆತನ ಭಾಷಣಗಳಿಂದ ಶಾರೀಕ್ ಪ್ರಭಾವಿತನಾಗಿದ್ದ. ಟೋರ್ ಬ್ರೌಸರ್ ಮೂಲಕ ಶಾರೀಕ್ ಡಾರ್ಕ್ ವೆಬ್ ಬಳಸುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್(ಐಆರ್​ಎಫ್) ಜತೆ ಶಾರೀಕ್ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.

ಶಾರೀಕ್ ಎಲ್ಲಿಗೆ ಹೋಗುವುದಿದ್ದರೂ ಆಪ್ ಆಧಾರಿತ ವಾಹನಗಳಲ್ಲಿ ಸಂಚರಿಸುತ್ತಿದ್ದ. ಕೆಲವೊಮ್ಮೆ ಬಸ್​ಗಳಲ್ಲೂ ಹೋಗುತ್ತಿದ್ದ. ಆತ ಒಎಲ್​ಎಕ್ಸ್ ನಂತಹ ವೆಬ್​ಸೈಟ್​ಗಳಲ್ಲಿ ಮಾಹಿತಿ ಪಡೆದು ಹಳೇ ಮಿಕ್ಸಿ, ಗ್ರೈಂಡರ್​ಗಳನ್ನು ಖರೀದಿಸುತ್ತಿದ್ದ. ಅದನ್ನು ಮನೆಗೆ ತಂದು ಬಿಚ್ಚಿ, ಅದರಿಂದ ಕೆಲವು ವಸ್ತುಗಳನ್ನು ತೆಗೆದು ಅದರಲ್ಲಿ ಸ್ಪೋಟಕ ತಯಾರಿಸಲು ಸಾಧ್ಯವೇ ಎಂಬುದರ ಕಡೆಗೆ ಯತ್ನ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೈಸೂರಿನಲ್ಲಿ ಎರಡು ಅಂಗಡಿಗಳಿಂದ 100 ಬೆಂಕಿ ಪೆಟ್ಟಿಗೆ ಖರೀದಿಸಿದ್ದ. ಅಂಗಡಿಯವರು ಇಷ್ಟು ಪ್ರಮಾಣದಲ್ಲಿ ಬೆಂಕಿ ಪೆಟ್ಟಿಗೆ ಯಾಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಪ್ರಾಜೆಕ್ಟ್ ವರ್ಕ್​ಗೆ ಬಳಕೆ ಮಾಡಲು ಎಂದು ಉತ್ತರಿಸಿದ್ದ.

ದೇವಸ್ಥಾನಕ್ಕೆ ಭದ್ರತೆ ನೀಡಿ:

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್​ಸಿ) ಎಂಬ ಸಂಘಟನೆ ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿರುವ ಬಗ್ಗೆ ಬರೆದುಕೊಂಡಿರುವುದರಿಂದ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪೊಲೀಸರಿಗೆ ಮನವಿ ಮಾಡಿದ್ದಾರೆ. ಐಆರ್​ಸಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಕದ್ರಿ ದೇವಸ್ಥಾನಕ್ಕೆ ಬಾಂಬ್ ಪತ್ತೆ ದಳ ಭೇಟಿ ನೀಡಿ ತಪಾಸಣೆ ನಡೆಸಿದೆ.

ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಆರೋಪಿ ಶಾರೀಕ್ ಹೈಕೋರ್ಟ್​ನಿಂದ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಕೋರ್ಟ್​ಗೆ ವಿಚಾರಣೆಗೆ ಹಾಜರಾಗದ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಷರತ್ತು ಬದ್ಧ ಜಾಮೀನು ಉಲ್ಲಂಘಿಸಿ ಶಾರೀಕ್ ಬೆಂಗಳೂರು, ತಮಿಳುನಾಡು, ಕೇರಳ ಸೇರಿ ವಿವಿಧ ಕಡೆ ಸುತ್ತಾಟ ನಡೆಸುತ್ತಿದ್ದ. ಪೊಲೀಸ್ ಠಾಣೆಗಳಲ್ಲೂ ತನ್ನ ಹಾಜರಾತಿಯನ್ನು ದೃಢೀಕರಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕೋರ್ಟ್​ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

ಗೋಡೆ ಬರಹ, ಕುಕ್ಕರ್ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಎನ್ನಲಾದ ಅರಾಫತ್ ಅಲಿ ಸೌದಿಗೆ ತೆರಳಿದ್ದು, ಈತನಿಗೆ ಜಿಲ್ಲಾ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಆದರೆ, ಪತ್ತೆಯಾಗದ ಹಿನ್ನೆಲೆಯಲ್ಲಿ ಅರಾಫತ್ ಅಲಿಗೆ ಲುಕ್​ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

ಎನ್‌ಐಎ ಎಫ್‌ಐಆರ್‌ ದಾಖಲು:

ಕುಕ್ಕರ್ ಸ್ಫೋಟ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳ(ಎನ್​ಐಎ)ಕ್ಕೆ ಹಸ್ತಾಂತರಿಸಿ ಆದೇಶಿಸಿದ್ದು, ಎನ್‌ಐಎ ಎಫ್​ಐಆರ್ ದಾಖಲಿಸಿದೆ. ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಪಾತ್ರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ಮಹಮದ್ ಶಾರೀಕ್​ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಐಸಿಸ್ ಪ್ರೇರಿತ ಅಲ್ ಹಿಂದ್ ಸಂಘಟನೆ ಮೊಹಮ್ಮದ್ ಮತೀನ್ ತಾಹಾನ ಸೂಚನೆ ಮತ್ತು ಸಂಪರ್ಕದ ಮೇರೆಗೆ ಶಾರೀಕ್ ಉಗ್ರ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.