1. Home
  2. Mangaluru
  3. ಮಂಗಳೂರು : ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಶಂಕಿತ ಉಗ್ರ ಶಾರೀಕ್ ಗುರುತು ಪತ್ತೆಗೆ ಆಗಮಿಸಿದ ಪೋಷಕರು..!!

ಮಂಗಳೂರು : ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಶಂಕಿತ ಉಗ್ರ ಶಾರೀಕ್ ಗುರುತು ಪತ್ತೆಗೆ ಆಗಮಿಸಿದ ಪೋಷಕರು..!!

ಮಂಗಳೂರು : ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಶಂಕಿತ ಉಗ್ರ ಶಾರೀಕ್ ಗುರುತು ಪತ್ತೆಗೆ ಆಗಮಿಸಿದ ಪೋಷಕರು..!!
0

ನ್ಯೂಸ್ ಆ್ಯರೋ : ಮಂಗಳೂರಿನಲ್ಲಿ ಸಾಮಾಜಿಕ ಅಶಾಂತಿ ಹುಟ್ಟು ಹಾಕಲು ಸಂಚು ರೂಪಿಸಿ, ಅದಕ್ಕಾಗಿ ಕುಕ್ಕರ್ ಬಾಂಬ್ ಸೃಷ್ಟಿಸಿ ಸ್ಫೋಟಿಸಲು ಆಟೊದಲ್ಲಿ ಸಾಗಿಸುತ್ತಿದ್ದ ವೇಳೆ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ದೊರೆತ ಆಧಾರ್‌ ಕಾರ್ಡ್‌ ವಿಳಾಸವು ನಕಲಿ ಎನ್ನುವುದು ಪತ್ತೆಯಾಗಿದ್ದು, ಅದು ಹುಬ್ಬಳ್ಳಿಯ ಪ್ರೇಮರಾಜ್‌ ಅವರಿಗೆ ಸೇರಿದ್ದಾಗಿದೆ. ಇತ್ತ ಶಾರೀಕ್ ನ ಗುರುತು ಪತ್ತೆಗೆ ಆತನ ಪೋಷಕರು ಮಂಗಳೂರು ತಲುಪಿದ್ದಾರೆ.

ಆಟೋರಿಕ್ಷಾದಲ್ಲಿ ಪತ್ತೆಯಾದ ಆಧಾರ ಕಾರ್ಡ್‌ ಹುಬ್ಬಳ್ಳಿಯ ಕೇಶ್ವಾಪುರ ಮಧುರಾ ಕಾಲೋನಿ ನಿವಾಸಿ ಪ್ರೇಮರಾಜ್‌ ಹೆಸರಿನಲ್ಲಿದ್ದು, ಇದು ಆರು ತಿಂಗಳ ಹಿಂದೆ ಕಳೆದು ಹೋಗಿತ್ತು ಎನ್ನಲಾಗಿದೆ.

ಆದರೆ ಘಟನೆಯಲ್ಲಿ ಶೇಕಡಾ 45% ಭಾಗ ಸುಟ್ಟು ಗಾಯಗೊಂಡಿದ್ದ ಆರೋಪಿ 24 ವರ್ಷದ ಶಾರೀಕ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಹಿಂದೆಯೂ ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಗಾಯಗೊಂಡ ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ತನಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಆಟೋದಲ್ಲಿ ಕುಕ್ಕರ್ ಐಇಡಿಯೊಂದಿಗೆ ತೆರಳುತ್ತಿದ್ದ. ಈ ವೇಳೆ ಸ್ಫೋಟ ಸಂಭವಿಸಿದ್ದು, ಆಟೋ ಚಾಲಕ ಪುರುಷೋತ್ತಮ್ ಗೂ ತೀವ್ರ ಗಾಯಗಳಾಗಿವೆ.

ಮಂಗಳೂರಿನಲ್ಲಿ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಡಿಜಿಪಿ ಹಾಗೂ ಐಜಿಪಿ ಪ್ರವೀಣ್ ಸೂದ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಆಕಸ್ಮಿಕವಲ್ಲ, ಭಯೋತ್ಪಾದನೆಯ ಕೃತ್ಯ ಎಂದು ಹೇಳಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿ ಶಾರೀಕ್ ಐಇಡಿಯನ್ನು ನಿರ್ದಿಷ್ಟ ಗುರಿಯೊಂದಿಗೆ ಅಳವಡಿಸಲು ಉದ್ದೇಶಿಸಿದ್ದ. ಆದರೆ ಆಟೋ ರಿಕ್ಷಾದಲ್ಲೇ ಸ್ಫೋಟಗೊಂಡಿದೆ. ವಿಧಿವಿಜ್ಞಾನ ತಂಡ ತನಿಖೆ ಪ್ರಾರಂಭಿಸಿದ್ದು, ಪ್ರೆಷರ್ ಕುಕ್ಕರ್ ನ ಒಳಗೆ ಸರ್ಕ್ಯೂಟ್ ಮತ್ತು ಟೈಮರ್ ಪತ್ತೆಯಾಗಿತ್ತು ಎನ್ನಲಾಗಿದೆ.

ಶಾರೀಕ್ ಶಂಕಿತ ಉಗ್ರ ಎನ್ನಲಾಗಿದ್ದು, ಸೂಸೈಡ್ ಬಾಂಬರ್ ಆಗಿದ್ದನಾ ಎಂಬ ಬಗ್ಗೆ ಅನುಮಾನ ಮೂಡಿದೆ. ಅಲ್ಲದೇ ಗಾಯಗೊಂಡ ಶಾರೀಕ್ ನ ಮುಖ ಊದಿಕೊಂಡಿರುವ ಹಿನ್ನೆಲೆಯಲ್ಲಿ ಸ್ಪಷ್ಟವಾಗಿ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಶಾರೀಕ್ ಪೋಷಕರನ್ನು ಮಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಪೋಷಕರು ಶಾರೀಕ್ ನನ್ನು ಗುರುತಿಸಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಒಂದು ವೇಳೆ ಪೋಷಕರು ಗುರುತು ಹಿಡಿಯದಿದ್ರೆ ಡಿಎನ್ಎ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ.

ಶಂಕಿತ ಉಗ್ರ ಶಾರೀಕ್ ಯಾರು?
ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. 2019ರ ಸೆಪ್ಟೆಂಬರ್ನಲ್ಲಿ ಕದ್ರಿ ಪೊಲೀಸ್ ಠಾಣೆ ಬಳಿಯ ಅಪಾರ್ಟ್ಮೆಂಟ್‌ವೊಂದರಲ್ಲಿ ಉಗ್ರರ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿದ್ದು, ಇದರಲ್ಲಿ ಮಾಝ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ಸಹಕಾರ ನೀಡಿದ ಸಾದಾತ್ ಎಂಬಾತನನ್ನು ಈ ಹಿಂದೆಯೇ ಬಂಧಿಸಲಾಗಿದೆ. ಆರೋಪಿ ಶಾರೀಕ್ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು‌. ಇದೀಗ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಎಂದು ಹೇಳಲಾಗುತ್ತಿದೆ. ಶಾರೀಕ್ ಪೋಷಕರು ಈಗಾಗಲೇ ಮಂಗಳೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಗುರುತು ಪತ್ತೆಯ ಬಳಿಕ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..