ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಕೆಂಗಣ್ಣು ಹಾವಳಿ – ದಿನವೊಂದಕ್ಕೆ ನೂರಾರು ಮಂದಿಗೆ ಹರಡುತ್ತಿದೆ ‘ಮದ್ರಾಸ್ ಐ’, ತಡೆಯೋದು ಹೇಗೆ?

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಗಣ್ಣು ಕಾಯಿಲೆಯ ಹಾವಳಿ ಜೋರಾಗಿದೆ. ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಈ ರೋಗದಿಂದ ಕರಾವಳಿ ಜನ ಹೈರಾಣಾಗಿದ್ದಾರೆ. ಹಲವು ದಿನಗಳಿಂದ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಮಂಗಳೂರು ನಗರ ಹೊರವಲಯದ ಬಜಪೆ, ಎಕ್ಕಾರು ಸೇರಿದಂತೆ ಬಂಟ್ವಾಳ, ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಸೋಂಕಿನಿಂದ ಬಳಲುತ್ತಾ ಕಪ್ಪು ಕನ್ನಡಕ ಧರಿಸಿ ಓಡಾಡುತ್ತಿರುವವರ ಸಂಖ್ಯೆ ಏರುತ್ತಿದೆ. ಅದರಲ್ಲೂ ಶಾಲೆಗಳಲ್ಲಿ, ಹಾಸ್ಟೆಲ್‌ಗಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ, ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಜನ ಕೆಂಗಣ್ಣಿಗೆ ತುತ್ತಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿನೈದು ದಿನಗಳ ಅಂತರದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಈ ವೈರಸ್‌ನಿಂದ ಬಳಲುತ್ತಿದ್ದಾರೆ. ಈ ರೋಗ ಬಾಧೆಯಿಂದಾಗಿ ಬೆಳ್ತಂಗಡಿಯ ಖಾಸಗಿ ಶಾಲೆಯೊಂದಕ್ಕೆ ರಜೆ ಕೂಡ ನೀಡಲಾಗಿದೆ.
ಏನಿದು ಕೆಂಗಣ್ಣ?:
‘ಮದ್ರಾಸ್ ಐ’ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಉದಿಕೊಳ್ಳುವುದು ಇದರ ಲಕ್ಷಣವಾಗಿದೆ.
ಮದ್ರಾಸ್ ಐ ಸಾಮಾನ್ಯವಾಗಿ ಮಾನ್ಸೂನ್ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ, ಈಗ ಬಿಟ್ಟು ಬರುವ ಮಳೆಯ ಜತೆಗೆ ಚಳಿಯ ಪ್ರವೇಶ ಎರಡು ಜತೆಗೂಡಿದಾಗ ಈ ವೈರಸ್ ಹರಡುತ್ತಿದೆ ಎನ್ನುವುದು ಆರೋಗ್ಯ ತಜ್ಞರ ಮಾತು.
ರೋಗದ ಲಕ್ಷಣಗಳೇನು?
ಇದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಉಂಟಾಗುತ್ತದೆ. ತುರಿಕೆ ಸಂವೇದನೆ, ಕಣ್ಣುಗಳ ಕೆಂಪು, ತೀವ್ರ ಕಿರಿಕಿರಿಯೊಂದಿಗೆ ಕಣ್ಣಿನ ಕೆಂಪು, ಕಣ್ಣಿನ ಬಿಳಿ ಭಾಗದ ಕೆಂಪು, ಬೆಳಕಿಗೆ ಒಡ್ಡಿಕೊಂಡಾಗ ಕಣ್ಣು ಕುಟುಕುವುದು, ಕಣ್ಣಿನಿಂದ ಕೊಳಕು ಹೊರಸೂಸುವುದು, ಕೆಲವು ರೋಗಿಗಳು ಕಣ್ಣಿನ ಊತವನ್ನು ಅನುಭವಿಸುತ್ತಾರೆ. ಈ ಸೋಂಕು ದೃಷ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ವೈದ್ಯರ ಚೀಟಿ ಇಲ್ಲದೆ ಯಾವುದೇ ಡ್ರಾಪ್ಸ್ ಅಥವಾ ಔಷಧ ಬಳಕೆಯನ್ನು ಮಾಡುವುದು ಬಹಳ ಅಪಾಯಕಾರಿ.
ಸೋಂಕು ತಡೆಯುವುದು ಹೇಗೆ?
- ಸೋಂಕಿತ ಕಣ್ಣನ್ನು ಮುಟ್ಟುವುದು ಅಥವಾ ಉಜ್ಜುವುದನ್ನು ತಪ್ಪಿಸಿ
- ದಿನಕ್ಕೆ ಹಲವಾರು ಬಾರಿ ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯಿರಿ
- ಬೇರೆಯವರ ಟವೆಲ್, ಕರವಸ್ತ್ರ, ದಿಂಬು, ಹಾಸಿಗೆ ಇತ್ಯಾದಿಗಳನ್ನು ಬಳಸುವುದನ್ನು ತಪ್ಪಿಸಿ
- ದ್ವಿಚಕ್ರ ವಾಹನ ಸವಾರಿ ಮಾಡುವಾಗ ಯಾವಾಗಲೂ ಸನ್ ಗ್ಲಾಸ್ ಧರಿಸಿ
- ಯಾವಾಗಲೂ ಕನ್ನಡಕ ಹಾಕಿಕೊಂಡಿರಿ
- ಈಗಾಗಲೇ ಈ ಕಾಯಿಲೆಯಿಂದ ಬಳಲುತ್ತಿರುವವರಿಂದ ದೂರವಿರಿ.
ಈ ರೋಗವು ವೈರಾಣು ಅಥವಾ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಇದು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕು. ಒಂದು ವಾರದೊಳಗೆ ತನ್ನಷ್ಟಕ್ಕೆ ತಾನೇ ಅದು ಗುಣಮುಖವಾಗುತ್ತದೆ. ಕೆಲವೊಂದು ಬಾರಿ ಕಣ್ಣಿನ ಕಪ್ಪು ಗುಡ್ಡೆ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದ್ದು, ಹೀಗಾಗಿ, ಕೆಂಗಣ್ಣು ರೋಗ ಬಂದಾಗ ಕಣ್ಣನ್ನು ಮುಟ್ಟಿಕೊಳ್ಳಬಾರದು, ಆಗಾಗ ಕೈ ಸ್ವಚ್ಚಗೊಳಿಸುತ್ತಿರುವುದು, ವೈರಸ್‌ಗೆ ತುತ್ತಾದವರಿಂದ ದೂರವಿರುವುದರಿಂದ ರೋಗ ಹರಡದಂತೆ ತಡೆಯಬಹುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಹೇಳಿದ್ದಾರೆ.
ಫಾದರ್ ಮುಲ್ಲರ್ಸ್ ಆಸ್ಪತ್ರೆ ಹಾಗೂ ನೇತ್ರಾ ಜ್ಯೋತಿ ರೆಟಿನಾ ಸೆಂಟರ್‌ನ ವೈದ್ಯ ಡಾ.ಶ್ರೀಪತಿ ಕಾಮತ್ ಹೇಳುವಂತೆ, ‘ಈ ಸಮಸ್ಯೆ ಕಣ್ಣಿನ ಸರ್ಜರಿ ಆಗಿರುವವರು ಹಾಗೂ ಮಧುಮೇಹಿಗಳ ವಿಚಾರದಲ್ಲಿ ಕೊಂಚ ಜಾಗ್ರತೆ ಅಗತ್ಯ. ಉಳಿದಂತೆ ಇದಕ್ಕೆ ಬೇಕಿರುವ ಡ್ರಾಪ್ಸ್ ಹಾಕಿದರೆ ಐದು ದಿನಗಳಲ್ಲಿ ಸರಿ ಹೋಗುತ್ತದೆ. ಮುಖ್ಯವಾಗಿ ಕಣ್ಣಿನ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಕೆಲವೊಂದು ಪ್ರಕರಣಗಳಲ್ಲಿ ಕಣ್ಣಿನ ಬಿಳಿ ಭಾಗದಿಂದ ಕಾರ್ನಿಯಾದ ಕಡೆಗೂ ವೈರಸ್ ದಾಳಿ ನಡೆಸುತ್ತದೆ. ಇಂತಹ ಸಮಸ್ಯೆಗಳು ಇದ್ದಾಗ ತಕ್ಷಣವೇ ವೈದ್ಯರ ಬಳಿಗೆ ಹೋಗಬೇಕು’ ಎನ್ನುತ್ತಾರೆ ಅವರು.
ಐದು ದಿನ ರಜೆ:
ಕೆಂಗಣ್ಣು ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಐದು ರಜೆ ನೀಡುವಂತೆ ಶಾಲೆಗಳ ಮುಖ್ಯಸ್ಥರಿಗೆ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ.