ಮಂಗಳೂರು : ಮಸೀದಿಯ ರಚನೆ, ಕೆತ್ತನೆಯ ಹಿಂದೆ ಹಿಂದೂ ದೇಗುಲದ ಕುರುಹು – ವಿವಾದಕ್ಕೀಡಾಗಿದ್ದ ಮಳಲಿ ಮಸೀದಿಯ ತೀರ್ಪು ಇಂದು

ನ್ಯೂಸ್ ಆ್ಯರೋ : ತೀವ್ರ ವಿವಾದ, ಅಷ್ಟೇ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾದ ಮಂಗಳೂರು ಹೊರವಲಯದ ಮಳಲಿಪೇಟೆ ಮಸೀದಿ ಪ್ರಕರಣ ಸಂಬಂಧ ತೀರ್ಪು ಕಾಯ್ದಿರಿಸಿದ್ದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಇಂದು ತೀರ್ಪು ನೀಡುವ ಸಾಧ್ಯತೆ ಇದೆ.

ಮಳಲಿಪೇಟೆ ಮಸೀದಿಯ ನವೀಕರಣ ಸಂದರ್ಭದಲ್ಲಿ ಅದರ ರಚನೆ ಮತ್ತು ಕೆತ್ತನೆಗಳನ್ನು ಕಂಡು ದೇವಸ್ಥಾನ ಎಂದು ಆರೋಪಿಸಿ ಸ್ಥಳೀಯರಾದ ಧನಂಜಯ ಮತ್ತು ಐದು ಮಂದಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಕೊಕದ್ದಮೆ ದಾಖಲಿಸಿ ಮಸೀದಿಯ ನವೀಕರಣಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು.
ಈ ಸಂಬಂಧ ವಿಚಾರಣೆಯನ್ನು ಕೈಗೆತ್ತಿಕೊಂಡ ಮೂರನೇ ಹೆಚ್ಚುವರಿ ನ್ಯಾಯಾಲಯ ಎರಡೂ ಕಡೆಯ ಕಕ್ಷಿದಾರರ ಪರವಾದ ವಕೀಲರ ವಾದ -ವಿವಾದಗಳನ್ನು ಆಲಿಸಿತ್ತು. ಈ ವೇಳೆ ಮಸೀದಿ ವಕ್ಫ್ ಆಸ್ತಿಯಾಗಿರುವ ಕಾರಣ ಈ ಪ್ರಕರಣವನ್ನು ಮುನ್ನಡೆಸುವ ಕಾರ್ಯವ್ಯಾಪ್ತಿ ಸಿವಿಲ್ ನ್ಯಾಯಾಲಯಕ್ಕಿಲ್ಲ. ಇದಕ್ಕಾಗಿಯೇ ವಕ್ಫ್‌ಗೆ ಸಂಬಂಧಿಸಿ ನ್ಯಾಯಾಲಯಗಳಿವೆ. ಆದ್ದರಿಂದ ಈ ಪ್ರಕರಣವನ್ನು ವಜಾಗೊಳಿಸಬೇಕೆಂದು ವಾದಿಸಿದ್ದರು.
ಈ ಹಿನ್ನೆಲೆಯಲ್ಲಿ ವಾದ-ವಿವಾದಗಳನ್ನು ಆಲಿಸಿದ್ದ ನ್ಯಾಯಾಯಲವು ಪ್ರಕರಣ ಸಿವಿಲ್ ವ್ಯಾಪ್ತಿಗೆ ಬರುತ್ತದೆಯೇ? ಇಲ್ಲವೇ? ಎಂಬ ಬಗ್ಗೆ ಪ್ರಥಮ ಹಂತದ ತೀರ್ಪು ನೀಡುವುಗಾಗಿ ತಿಳಿಸಿ ತೀರ್ಪು ನೀಡುವ ದಿನಾಂಕವನ್ನು ಪ್ರಕಟಿಸಿತ್ತು. ಈ ಮಧ್ಯೆ ಮಸೀದಿ ನವೀಕರಣಕ್ಕೆ ಆಕ್ಷೇಪಿಸಿದ್ದ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಮೊರೆಹೋಗಿ ಮಳಲಿಪೇಟೆ ಮಸೀದಿಗೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯದಲ್ಲಿ ಯಾವುದೇ ತೀರ್ಪು ನೀಡದಂತೆ ಸೂಚಿಸಬೇಕೆಂದು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಯನ್ನು ನಡೆಸಿದ ಹೈಕೋರ್ಟ್, “ಆಕ್ಷೇಪಣೆ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡುವವರೆಗೆ ಕೆಳನ್ಯಾಯಾಲಯ ಪ್ರಕರಣ ಸಂಬಂಧ ಯಾವುದೇ ತೀರ್ಪುಗಳನ್ನು ನೀಡಬಾರದು” ಎಂದು ಸೂಚನೆ ನೀಡಿತ್ತು. ಹೀಗಾಗಿ ಮಂಗಳೂರು ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟನೆಗೆ ದಿನಾಂಕಗಳನ್ನು ನೀಡುತ್ತಾ ತೀರ್ಪು ನೀಡುವುದನ್ನು ಮುಂದೂಡುತ್ತಿತ್ತು. ಬಳಿಕ ಮಸೀದಿ ನವೀಕರಣಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಅರ್ಜಿದಾರರ ಅರ್ಜಿಯನ್ನು ಹೈಕೋರ್ಟ್ ವಜಾ ಗೊಳಿಸಿತ್ತು. ಆ ನಡುವೆ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆಯಾಗಿತ್ತು.
ನಂತರ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಹೊಸ ನ್ಯಾಯಪೀಠ, ಪ್ರಕರಣವು ಸಿವಿಲ್‌ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆಯೇ? ಇಲ್ಲವೇ ಎಂಬ ಕುರಿತಾಗಿ ತೀರ್ಪು ಕಾಯ್ದಿರಿಸಿ ವಕಾಲತ್ತನ್ನು ಮುಂದೂಡಿತ್ತು. ಈಗಾಗಲೇ ಸತತ 5 ಬಾರಿ ವಕಾಲತ್ತನ್ನು ಮುಂದೂಡಿರುವ ನ್ಯಾಯಾಲಯ ನವೆಂಬರ್ 9ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಹಾಗಾಗಿ ಸಿವಿಲ್ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಅರ್ಜಿದಾರರು ಮತ್ತು ಅರ್ಜಿದಾರರ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.