ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ – ಘಟನಾ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ, ಡಿಜಿಪಿ ಪ್ರವೀಣ್ ಸೂದ್ ಭೇಟಿ ; ಹಿರಿಯ ಅಧಿಕಾರಿಗಳು ಸಾಥ್

ನ್ಯೂಸ್ ಆ್ಯರೋ : ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗುರಿ ಗರಡಿ ಬಳಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಇಂದು ಬೆಳಿಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪಶ್ಚಿಮ ವಲಯ ನೂತನ ಐಜಿಪಿ ಚಂದ್ರಗುಪ್ತ, ಡಿಜಿಪಿ ಪ್ರವೀಣ್ ಸೂದ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚುರುಕುಗೊಂಡ ತನಿಖೆ:
ಸ್ಫೋಟ ಪ್ರಕರಣದಲ್ಲಿ ಆರೋಪಿ ಶಾರೀಕ್‌ನೊಂದಿಗೆ ಮತ್ತಷ್ಟು ಯುವಕರು ಕೈಜೋಡಿಸಿರಬಹುದು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಪೋಟದ ಹಿಂದೆ ದೊಡ್ಡ ಜಾಲ ಇರುವ ಅನುಮಾನ ಪೊಲೀಸರಿಗೆ ಮೂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಗಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಪೊಲೀಸ್ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಎರಡು ದಿನಗಳಿಂದ ಪೊಲೀಸರು ತೀವ್ರ ತನಿಖೆಯನ್ನು ನಡೆಸುತ್ತಿದ್ದಾರೆ.
ಆರೋಪಿಗೆ ಚಿಕಿತ್ಸೆ:
ಸ್ಫೋಟಕ್ಕೆ ಕಾರಣನಾದ ಆರೋಪಿ ಶಾರೀಕ್‌ಗೆ ಪೊಲೀಸ್ ಭದ್ರತೆಯೊಂದಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈತ ಗುಣಮುಖನಾದ ಬಳಿಕ ಆತನನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಲಿದೆ.
ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್:
2020ರ ನವೆಂಬರ್ ತಿಂಗಳ ಲಷ್ಕರ್-ಎ-ತೊಯ್ಬ ಉಗ್ರ ಸಂಘಟನೆ ಪರವಾಗಿ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ. ಈ ಸಂಬಂಧ ಪೊಲೀಸರು ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್, ಆತನ ಸಹವರ್ತಿ ಇಂಜಿನಿಯರಿಂಗ್ ವಿದ್ಯಾರ್ಥಿ ಮಾಜ್ ಮುನೀರ್ ಅಹಮ್ಮದ್ ಎಂಬಾತನನ್ನು ಬಂಧಿಸಿದ್ದರು. ಇವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳು ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದ್ದು, ಆರೋಪಿಗಳಿಗೆ ಜಾಮೀನು ಲಭಿಸಿತ್ತು. ಸದ್ಯ ಆರೋಪಿ ಶಾಕೀರ್ ಚಿಕಿತ್ಸೆಗಾಗಿ ಫಾದರ್ ಮುಲ್ಲರ್ಸ್ ನಲ್ಲಿ ದಾಖಲಾಗಿದ್ದು, ಪೋಲಿಸರು ಶೀಘ್ರವೇ ಆತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.