1. Home
  2. Mangaluru
  3. ಬೆಳ್ತಂಗಡಿ : ಕುತ್ಲೂರಿನ ಭಟ್ಟರ ಮನೆಗೆ ನುಗ್ಗಿ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದ ಪ್ರಕರಣ – ಮರುತನಿಖೆಯ ಬಳಿಕವೂ ಸಾಕ್ಷಿ ಒದಗಿಸಲು ಪೋಲಿಸರು ವಿಫಲ, ನಕ್ಸಲ್ ಚಿನ್ನಿ ರಮೇಶ್ ದೋಷಮುಕ್ತ

ಬೆಳ್ತಂಗಡಿ : ಕುತ್ಲೂರಿನ ಭಟ್ಟರ ಮನೆಗೆ ನುಗ್ಗಿ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದ ಪ್ರಕರಣ – ಮರುತನಿಖೆಯ ಬಳಿಕವೂ ಸಾಕ್ಷಿ ಒದಗಿಸಲು ಪೋಲಿಸರು ವಿಫಲ, ನಕ್ಸಲ್ ಚಿನ್ನಿ ರಮೇಶ್ ದೋಷಮುಕ್ತ

ಬೆಳ್ತಂಗಡಿ : ಕುತ್ಲೂರಿನ ಭಟ್ಟರ ಮನೆಗೆ ನುಗ್ಗಿ ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದ ಪ್ರಕರಣ – ಮರುತನಿಖೆಯ ಬಳಿಕವೂ ಸಾಕ್ಷಿ ಒದಗಿಸಲು ಪೋಲಿಸರು ವಿಫಲ, ನಕ್ಸಲ್ ಚಿನ್ನಿ ರಮೇಶ್ ದೋಷಮುಕ್ತ
0

ನ್ಯೂಸ್ ಆ್ಯರೋ‌ : ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ಎಂಬಲ್ಲಿನ ನಿವಾಸಿ ರಾಮಚಂದ್ರ ಭಟ್ ಎಂಬವರ ಮನೆಗೆ ನಿಷೇಧಿತ ಮಾವೋವಾದಿ ನಕ್ಸಲ್ ತಂಡದವರು ನುಗ್ಗಿ ವಾಹನಗಳಿಗೆ ಬೆಂಕಿ ಹಾಕಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಆರೋಪಿಯನ್ನು ಇದೀಗ ಮಂಗಳೂರು ನ್ಯಾಯಲಯವು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.

ಮಾವೋವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ ನನ್ನು ಬಂಧಿಸಿದ ಪೊಲೀಸರು ಈತನು ತನ್ನ ಸಹಚರರೊಂದಿಗೆ ರಾಮಚಂದ್ರ ಭಟ್ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದರು ಎಂದು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿದ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಆರೋಪಿ ಚಿನ್ನಿ ರಮೇಶ್ ನನ್ನು ದೋಷಮುಕ್ತ ಗೊಳಿಸಿ ಆದೇಶ ನೀಡಿದೆ.

2013ರ ನವೆಂಬರ್ 9 ರಂದು ಬೆಳಗ್ಗಿನ ಜಾವ ಕುತ್ಲೂರು ನಿವಾಸಿ ರಾಮಚಂದ್ರ ಭಟ್ ಅವರ ಮನೆಗೆ ನುಗ್ಗಿದ ಮಾವೋ ವಾದಿ ನಕ್ಸಲರದೆನ್ನಲಾದ ತಂಡ ಅವರನ್ನು ಮನೆಯಿಂದ ಹೊರಗೆ ಕರೆದಿದ್ದು ಅವರು ಬಾರದಿದ್ದಾಗ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಕಾರಿಗೆ ಬೆಂಕಿ ಹಚ್ಚಿ ನಾಶಗೊಳಿಸಿದ್ದಾರೆ, ನಕ್ಸಲರನ್ನು ಬರಂಬಲಿಸುವ ಕರಪತ್ರಗಳನ್ನು ಹಚ್ಚಿ ಹೋಗಿದ್ದರು ಎಂದು ಆರೋಪಿಸಿ ರಾಮಚಂದ್ರ ಭಟ್ ಅವರು ನೀಡಿದ ದೂರಿನಂತೆ ಪೊಲೀಸರು ಆರೋಪಿಗಳಾದ ಚಿನ್ನಿ ರಮೇಶ್, ವಿಕ್ರಂಗೌಡ, ಸಾವಿತ್ರಿ, ಸುಂದರಿ, ವಿಜಯ್, ಜಯಣ್ಣ ಮತ್ತು ಇತರರ ವಿರುದ್ದ ಯು.ಎ.ಪಿ.ಎ ಸಶಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

2017ರಲ್ಲಿ ಆರೋಪಿಗಳ ಬಗ್ಗೆ ಯಾ ವುದೇ ಮಾಹಿತಿಗಳು ಇಲ್ಲದ ಹಿನ್ನಲೆಯಲ್ಲಿ ಇದೊಂದು ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಇದಾದ ಬಳಿಕ ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಚಿನ್ನಿ ರಮೇಶ್ ನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಅಣ್ಣಾ ಮಲೈ ಅವರು ಈತ ಪ್ರಕರಣದ ಆರೋಪಿ ಎಂದು ಗುರುತಿಸಿದ ಬಳಿಕ ಈ ಪ್ರಕರಣದ ಮರು ತನಿಖೆಗೆ ನ್ಯಾಯಾಲಯದಿಂದ ಆದೇಶ ನೀಡಿತ್ತು.

ಅದರಂತೆ ಮರು ತನಿಖೆ ನಡೆಸಿದ ಡಿವೈಎಸ್.ಪಿ. ರವೀಶ್ ಸಿ.ಆರ್ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಕುದುರೇಮುಖ ರಾಷ್ಟ್ರೀಯ ಉದ್ಯಾನವನದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದ ಸಂದರ್ಭದಲ್ಲಿ ರಾಮಚಂದ್ರ ಭಟ್ ಅವರು ಒಕ್ಕಲೆಬ್ಬಿಸುವುದಕ್ಕೆ ಬೆಂಬಲ ನೀಡುತ್ತಿದ್ದರು ಇದರಿಂದಾಗಿ ನಕ್ಸಲರು ದಾಳಿ ನಡೆಸಿ ಈ ಕೃತ್ಯ ಎಸಗಿದ್ದರು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಇದೀಗ ಚಿನ್ನಿ ರಮೇಶ್ ಅವರನ್ನು ದೋಷಮುಕ್ತ ಗೊಳಿಸಿ ಆದೇಶ ಹೊರಡಿಸಿದೆ. ಉಳಿದ ಆರೋಪಿಗಳನ್ನು ತಲೆ ಮರೆಸಿಕೊಂಡ ಆರೋಪಿಗಳು ಎಂದು ದಾಖಲಿಸಲಾಗಿದೆ.

ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ವಾದ ಮಂಡಿಸಿದ್ದರು. ಇದೀಗ ಈ ಪ್ರಕರಣದಲ್ಲಿ ರಮೇಶ್ ಬಿಡುಗಡೆಗೊಂಡಿದ್ದರೂ ಬೇರೆ ಪ್ರಕರಣಗಳ ವಿಚಾರಣೆ ಎದುರಿಸುತ್ತಿದ್ದು ಬೆಂಗಳೂರಿನ ಜೈಲಿನಲ್ಲಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..