ಕಾಪು : ಅಕ್ರಮ ಕಸಾಯಿಖಾನೆಗೆ ಶಿರ್ವ ಪೋಲಿಸರ ದಾಳಿ – ದನ ಕದ್ದು ಮಾಂಸ ಮಾಡುತ್ತಿದ್ದ ಮೂವರ ಬಂಧನ, 3 ಬೈಕ್, ಗೋಮಾಂಸ ಸಹಿತ ಸೊತ್ತು ವಶಕ್ಕೆ

ನ್ಯೂಸ್ ಆ್ಯರೋ : ಕಾಪು ತಾಲೂಕಿನ ಬೆಳಪು ಗ್ರಾಮದ ಹಾಜಿಗೇಟ್ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಅವರ ತಂಡ ದಾಳಿ ನಡೆಸಿ ಒಂದು ಗಂಡು ಕರುವನ್ನು ರಕ್ಷಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಪು ಗ್ರಾಮದ ಹಾಜಿ ಗೇಟ್ ಬಳಿಯ ದಿ. ಸುಲ್ತಾನ್ ಅಹಮ್ಮದ್ ಅವರ ಮಗ ತಬ್ರೇಸ್ (30), ಮಲ್ಲಾರು ಗ್ರಾಮದ ಅಮಾನುಲ್ಲಾ ಅಸೈನ್ ಅವರ ಮಗ ಮೊಹಮ್ಮದ್ ಅಜೀಮ್ (39), ಬೆಳಪು ಗ್ರಾಮದ ಮಧುರಾ ಸ್ಟೋರ್ ಬಳಿಯ ನಿವಾಸಿ ಮಕ್ಬುಲ್ ಹುಸೇನ್ ಅವರ ಮಗ ಮೊಹಮ್ಮದ್ ವಲೀದ್ (20) ಬಂಧಿತ ಆರೋಪಿಗಳು.
ಬೆಳಪು ಗ್ರಾಮದ ಹಾಜಿಗೇಟ್ ನಿವಾಸಿ ತಬ್ರೇಸ್ ಎಂಬವರ ಮನೆಯ ಸಮೀಪದ ಜಾಗದಲ್ಲಿ ತಗಡು ಶೀಟ್ ಅಳವಡಿಸಿದ ಶೆಡ್‌ನಲ್ಲಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ದನವನ್ನು ಕಡಿಯುತ್ತಿರುವುದು ಪತ್ತೆಯಾಗಿದೆ.
ಬಂಧಿತ ಮೂವರು ಆರೋಪಿಗಳು ಸ್ವಂತ ಲಾಭಕ್ಕಾಗಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಅ. 7 ರಂದು ಬೆಳಪು ಜಾರಂದಾಯ ಕೆರೆಯ ಹತ್ತಿರದಿಂದ ಎರಡು ದನಗಳನ್ನು ಹಾಗೂ ಪುಂಚಲಕಾಡು ಬಾರ್ ಎದುರಿನ ಹಾಡಿಯ ಹತ್ತಿರದಿಂದ ಎರಡು ದನಗಳನ್ನು ಕಳವು ಮಾಡಿ ತಂದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರೆಂದು ತನಿಖೆಯ ವೇಳೆ ಆರೋಪಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ 30,000 ರೂ ಮೌಲ್ಯದ 3 ಬೈಕ್, 2 ದನವನ್ನು ಕಡಿದು ಮಾಂಸ ಮಾರಾಟ ಮಾಡಿ ಉಳಿದ 10 ಕೆಜಿ ಮಾಂಸ, ಸುಮಾರು 30 ಕೆ.ಜಿ. ಕಪ್ಪು ಬಣ್ಣದ ದನವನ್ನು ಕಡಿದು ಚರ್ಮವನ್ನು ತೆಗೆದಿಟ್ಟಿರುವುದು, ಮಾಂಸ ಮಾಡಲು ಉಪಯೋಗಿಸಿದ ಒಂದು ಮರದ ತುಂಡು, ಎರಡು ಕತ್ತಿಗಳು, ಮೂರು ಚಾಕುಗಳು, 1,000 ರೂ ಮೌಲ್ಯದ ತೂಕದ ಇಲೆಕ್ಟ್ರಾನಿಕ್ ಯಂತ್ರ ಮತ್ತು 5 ಹಗ್ಗವನ್ನು ವಶಕ್ಕೆ ಪಡೆಯಲಾಗಿದೆ.
ಶಿರ್ವ ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ತನಿಖೆ ಉಪನಿರೀಕ್ಷಕರಾದ ಸುರೇಶ್ ಜೆ.ಕೆ, ಸಿಬ್ಬಂದಿಯವರಾದ ರಘು, ಅಂದಪ್ಪ, ರಾಮರಾಜಪ್ಪ ನಾಯ್ಕ್, ಅಖಿಲ್ ಮತ್ತು ಪಂಚರಾದ ಆನಂದ, ಹರೀಶ್ ಆಚಾರ್ಯ, ಚಾಲಕ ಪ್ರಸಾದ್ ಭಾಗಿಯಾಗಿದ್ದರು.