ಕೊನೆಗೂ ನಿಜವಾಯ್ತು ಅನುಮಾನ, ರಿವೆಂಜ್ ಮರ್ಡರ್ ಗೆ ಪ್ರವೀಣ್ ನೆಟ್ಟಾರ್ ಬಲಿ – PFI ನಾಯಕರು, ಕಾರ್ಯಕರ್ತರೇ ಹಾಕಿದ್ದರು ಸ್ಕೆಚ್, NIA ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ನ್ಯೂಸ್ ಆ್ಯರೋ : ತನ್ನ ಅಂಗಡಿ ಮುಂದೆಯೇ ಭೀಕರವಾಗಿ ಕೊಲೆಯಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬೆಳ್ಳಾರೆಯಲ್ಲಿ ನಡೆದ ಮಸೂದ್ ಹತ್ಯೆಗೆ ಪ್ರತೀಕಾರವಾಗಿಯೇ ಪಿಎಫ್ ಐ ಸಂಚು ನಡೆಸಿ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದೆ ಎಂಬ ಸ್ಪೋಟಕ ಮಾಹಿತಿ ಎನ್ಐಎ ತನಿಖೆಯಲ್ಲಿ ಬಯಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜೆನ್ಸಿ, ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ವಿಚಾರಣೆಯಲ್ಲಿ ಮಸೂದ್ ಹತ್ಯೆ ಬಳಿಕ ಅದಕ್ಕೆ ಪ್ರತೀಕಾರವಾಗಿ ಮತ್ತೊಂದು ಕೊಲೆ ನಡೆಸಿ ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಪಿಎಫ್ಐ ಹೊಂದಿತ್ತು. ಕೆಲವೇ ದಿನಗಳಲ್ಲಿ ಪಿಎಫ್ಐ ನಾಯಕರು ಮತ್ತು ಕಾರ್ಯಕರ್ತರು ಸಂಚು ರೂಪಿಸಿ ಪ್ರವೀಣ್ ನೆಟ್ಟಾರು ಟಾರ್ಗೆಟ್ ಮಾಡಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರವೀಣ್ ನೆಟ್ಟಾರು ಪ್ರಕರಣ ಸಂಬಂಧ ಎನ್ಐಎ ಶಹೀದ್ ಬೆಳ್ಳಾರೆಯನ್ನು ಈಗಾಗಲೇ ಬಂಧಿಸಿದೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಕಳೆದ ಜುಲೈ 26ರಂದು ರಾತ್ರಿ 8:30 ಗಂಟೆಗೆ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿ ನಡೆದಿತ್ತು. ಮೂವರು ಅಪರಿಚಿತರ ಗುಂಪು ಬೈಕಿನಲ್ಲಿ ಬಂದು ಪ್ರವೀಣ್ ನೆಟ್ಟಾರು ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಾಯಗೊಂಡಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತ ಹೊಂದಿದ್ದರು.