Praveen Nettar Murder Case : ಇಡೀ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13 ಕ್ಕೆ ಏರಿಕೆ, ತಲೆಮರೆಸಿಕೊಂಡವರ ಬಂಧನ ವಿಳಂಬ – ಇಂದಿನ ಮೂವರ ಬಂಧನದ ಬಗ್ಗೆ NIA ಹೇಳಿದ್ದೇನು..??

ನ್ಯೂಸ್ ಆ್ಯರೋ : ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಮೈಸೂರು, ದಕ್ಷಿಣ ಕನ್ನಡ ಮತ್ತು ಹುಬ್ಬಳ್ಳಿ ಜಿಲ್ಲೆಯಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್ ಇಕ್ಬಾಲ್, ಇಸ್ಮಾಯಿಲ್ ಶಾಫಿ, ಸುಳ್ಯ ಬಳಿಯ ನಾವೂರು ನಿವಾಸಿ ಇಬ್ರಾಹಿಂ ಪಾಷಾ ಅವರನ್ನು ಬಂಧಿಸಲಾಗಿದೆ. ಪಿಎಫ್ಐ ಸಂಘಟನೆಯ ಮೇಲೆ ಸಮಾಜದಲ್ಲಿ ಭಯ ಹುಟ್ಟಲಿ ಎಂಬ ಕಾರಣಕ್ಕೆ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಲಾಗಿದೆ ಎಂದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ.
ತನಿಖೆಯಲ್ಲಿ ಬಂಧಿತ ಆರೋಪಿಗಳು ಕೊಲೆಗೆ ಸಂಚು ನಡೆಸಿದ್ದು, ಕಾರ್ಯಾಚರಣೆಯಲ್ಲಿ ಡಿಜಿಟಲ್ ಸಾಕ್ಷ್ಯಗಳು, ದಾಖಲೆ ಪತ್ರಗಳು ಪತ್ತೆಯಾಗಿದ್ದು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಸ್ಮಾಯಿಲ್ ಶಾಫಿ ಮತ್ತು ಮಹಮ್ಮದ್ ಇಕ್ಬಾಲ್ ಸೋದರರಾಗಿದ್ದು, ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಶಾಫಿ ಎಸ್‌ಡಿಪಿಐ ಬೆಳ್ಳಾರೆ ರಾಜ್ಯ ಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದನು. ಮಹಮ್ಮದ್ ಇಕ್ಬಾಲ್ ಬೆಳ್ಳಾರೆ ಗ್ರಾಪಂನಲ್ಲಿ ಸದಸ್ಯನಾಗಿದ್ದು, ಎಸ್‌ಡಿಪಿಐ ಪಕ್ಷದಲ್ಲಿ ಜಿಲ್ಲಾ ಮುಖಂಡನಾಗಿ ಗುರುತಿಸಿಕೊಂಡಿದ್ದಾನೆ. ಇದೀಗ ಎನ್ಐಎ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅಲ್ಲದೆ ತಲೆಮರೆಸಿಕೊಂಡಿರುವ ನಾಲ್ವರ ಬಂಧನಕ್ಕಾಗಿ ಸುಳಿವು ಕೊಟ್ಟವರಿಗೆ ಎನ್ಐಎ 14 ಲಕ್ಷ ರೂಪಾಯಿ ಬಹುಮಾನವನ್ನೂ ಪ್ರಕಟಿಸಿದ್ದಾರೆ.
ಈ ಹಿಂದೆ ಒಟ್ಟು 10 ಮಂದಿ ಅರೆಸ್ಟ್, ಇದೀಗ ಬಂಧಿತರ ಸಂಖ್ಯೆ 13ಕ್ಕೆ ಏರಿಕೆ:
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಜುಲೈ 28ರಂದು ಬೆಳ್ಳಾರೆಯ ಶಫೀಕ್, ಸವಣೂರಿನ ಜಾಕೀರ್ ಹಾಗೂ ಆಗಸ್ಟ್ 1ರಂದು ಪಲ್ಲಿ ಮಜಲು ನಿವಾಸಿಗಳಾದ ಸದ್ದಾಂ ಮತ್ತು ಹ್ಯಾರಿಸ್ನನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಆಗಸ್ಟ್ 7ರಂದು ಸುಳ್ಯದ ನಾವೂರು ನಿವಾಸಿ ಅಬೀದ್ ಮತ್ತು ಬೆಳ್ಳಾರೆ ನಿವಾಸಿ ನೌಫಲ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆ ಆಗಸ್ಟ್ 8ರಂದು ಬೆಳ್ಳಾರೆ ಠಾಣೆ ಪೊಲೀಸರು ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್.ಸಿ.ಎ ಬಂಧಿಸಿದ್ದರು. ಇನ್ನೂ ಹತ್ಯೆ ನಡೆಸಿ ಕೇರಳಕ್ಕೆ ಪರಾರಿಯಾಗಿದ್ದ ಪ್ರಮುಖ ಆರೋಪಿಗಳಾದ ಶಿಯಾಬುದ್ದಿನ್ ಅಲಿ, ರಿಯಾಜ್ ಮತ್ತು ಬಶೀರ್ ಎಂಬುವವರನ್ನು ಆಗಸ್ಟ್ ತಿಂಗಳಿನಲ್ಲಿ ಪೊಲೀಸರು ಬಂದಿಸಿದ್ದರು. ಇದೀಗ ಎನ್ಐಎ ಅಧಿಕಾರಿಗಳು ಮೈಸೂರು, ದಕ್ಷಿಣ ಕನ್ನಡ ಮತ್ತು ಹುಬ್ಬಳ್ಳಿ ಜಿಲ್ಲೆಯ ಐದು ಕಡೆಗಳಲ್ಲಿ ದಾಳಿ ನಡೆಸಿ ಮೂವರನ್ನು ಅರೆಸ್ಟ್ ಮಾಡಿ, ತನಿಖೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ:
ಜುಲೈ 26ರಂದು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರು ಅವರನ್ನು ರಾತ್ರಿ 9ರ ಸುಮಾರಿಗೆ ನೆಟ್ಟಾರು ಬಳಿ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ತಮ್ಮ ಕೋಳಿ ಅಂಗಡಿಯ ದೈನಂದಿನ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗಲು ಬೈಕ್ ಏರುತ್ತಿದ್ದಾಗ ಮುಸುಕು ಹಾಕಿಕೊಂಡು ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ಏಕಾಏಕಿ ತಲ್ವಾರ್‌ನಿಂದ ದಾಳಿ ನಡೆಸಿ, ಸ್ಕೂಟರ್‌ನಲ್ಲಿ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರವೀಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಗಂಭೀರ ಗಾಯಗಳಿಂದ ಅವರು ಕೊನೆಯುಸಿರೆಳೆದರು.
ಮಸೂದ್ ಕೊಲೆಯಾ ಪ್ರತೀಕಾರವೇ?
ಇನ್ನೂ ಜುಲೈ 19ರಂದು ಬೆಳ್ಳಾರೆ ಗ್ರಾಮದಲ್ಲಿ ಮಸೂದ್ ಎಂಬಾತನನ್ನು 7 ಜನ ಯುವಕರು ದಾಳಿ ನಡೆಸಿ ಕೊಲೆ ಮಾಡಿದ್ದರು. ಅದರ ಪ್ರತೀಕಾರವಾಗಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಲಾಗಿದೆ ಎಂದು ಪ್ರವೀಣ್ ಆಪ್ತರು, ಬಿಜೆಪಿ ಕಾರ್ಯಕರ್ತರು ಆರೋಪಿಸಿದರು.
ಭಾರೀ ಸಂಚಲನ ಸೃಷ್ಟಿಸಿದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ:
ಇನ್ನೂ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಒಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇನ್ನೆಷ್ಟು ಹಿಂದೂ ಯುವಕರ ಪ್ರಾಣ ಬೇಕು ಎಂದು ರಾಜ್ಯದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದರಿಂದ ತನಿಖೆಯನ್ನು ಎನ್‌ಐಎಗೆ ವಹಿಸಲಾಯಿತು.