ಮಂಗಳೂರು : ಅಡಿಕೆ ವ್ಯಾಪಾರಿಯ ಹತ್ತು ಲಕ್ಷ ಹಣ ಕುಡುಕನ ಪಾಲು – ಕುಡುಕನ ಕೈಯ್ಯಿಂದ ಪೋಲಿಸರಿಗೆ ಸಿಕ್ಕಿದ್ದು ಬರೇ 49 ಸಾವಿರವಂತೆ…!! ಮಂಗಮಾಯವಾಯ್ತು ಲಕ್ಷ ಲಕ್ಷ ಹಣ…

ನ್ಯೂಸ್ ಆ್ಯರೋ : ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಪಂಪ್ ವೆಲ್ ನ ಬಾರ್ ಒಂದರ ಬಳಿ ಶಿವರಾಜ್ ಹೆಸರಿನ ವ್ಯಕ್ತಿಗೆ ನೋಟಿನ ಕಟ್ಟುಗಳಿದ್ದ ಒಂದು ಪೆಟ್ಟಿಗೆ ಸಿಕ್ಕಿದೆ. ಮದ್ಯ ವ್ಯಸನಿಯಾಗಿರುವ ಶಿವರಾಜ್ ಆ ಹಣ ಸಿಕ್ಕ ಖುಷಿಯಲ್ಲಿ ಪೆಟ್ಟಿಗೆಯಿಂದ ಒಂದು ಸಾವಿರ ಹಣ ಎತ್ತಿಕೊಂಡು ಗೆಳೆಯನೊಂದಿಗೆ ಬಾರ್ ಗೆ ಹೋಗಿ ಕುಡಿದಿದ್ದಾರೆ. ಆದರೆ ಸಿಕ್ಕಿದ ಹಣ ಅರ್ಧ ಗಂಟೆಯಲ್ಲಿಯೇ ಪೊಲೀಸರ ಪಾಲಾಗಿದೆ.

ಹೌದು, ಕನ್ಯಾಕುಮಾರಿ ಮೂಲದ ಶಿವರಾಜ್ ಎಂಬಾತ ಬೋಂದೆಲ್‌ನ ಕೃಷ್ಣನಗರದ ನಿವಾಸಿ ಆಗಿದ್ದು, ಮೆಕ್ಯಾನಿಕ್ ಆಗಿದ್ದ. ಆತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ.
ಕಳೆದ ನವೆಂಬರ್ 27ರಂದು ಪಂಪ್‌ವೆಲ್ ಮೇಲ್ಸೇತುವೆ ಸಮೀಪದ ವೈನ್ ಶಾಪ್‌ನಲ್ಲಿ ಕುಡಿದು ಹೊರ ಬರುವಾಗ ಪಾರ್ಕಿಂಗ್ ಜಾಗದಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿಗಳ ಬಂಡಲ್ ಸಿಕ್ಕಿತ್ತು. ಹಣ ಕಂಡ ಕೂಡಲೇ ಆತ ಕುಡಿದ ಮತ್ತಿನಲ್ಲಿ ಪೆಟ್ಟಿಗೆಯಿಂದ ನೋಟ್ ಗಳ ಒಂದು ಕಟ್ಟು ತೆಗೆದು ತನ್ನ ಸ್ನೇಹಿತನಿಗೆ ದಾನ ಮಾಡಿದ್ದಾರೆ. ಬಳಿಕ ಇಬ್ಬರು ಮದ್ಯ ಸೇವಿಸಲು ತೆರಳಿದ್ದಾರೆ. ಅಷ್ಟರಲ್ಲಿ ಶಿವರಾಜ್ ಗೆ ಹಣ ಸಿಕ್ಕ ಸುಳಿವು ಪೊಲೀಸರಿಗೆ ಸಿಕ್ಕು ಅವರನ್ನು ಠಾಣೆಗೆ ಕರೆದೊಯ್ದು ಪೆಟ್ಟಿಗೆ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದನ್ನು ಶಿವರಾಜ್ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ. ಇದೀಗ ವಾರಸುದಾರರಿಲ್ಲದೇ ಹಣ ಕಂಕನಾಡಿ ಠಾಣೆಯಲ್ಲಿಯೇ ಉಳಿದಿದೆ.
ಮೂಲಗಳ ಮಾಹಿತಿಯ ಪ್ರಕಾರ ಈ ಹಣ ಅಡಿಕೆ ವ್ಯಾಪಾರಸ್ಥರಿಗೆ ಸೇರಿದ್ದಾಗಿದ್ದು, ಹಣ ಕಳೆದುಹೋದ ದಿನದಂದೇ ಕಂಕನಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದರೆ ಪೊಲೀಸರು ಇದು ನಿಮ್ಮ ಹಣ ಅಲ್ಲ ಅಂತಾ ಹಿಂದೆ ಅವರನ್ನು ಕಳುಹಿಸಿದ್ದರು. ಹತ್ತು ಲಕ್ಷ ರೂಪಾಯಿ ಇರಲಿಲ್ಲ, ಇದ್ದದ್ದು 49 ಸಾವಿರ ರೂಪಾಯಿ ಮಾತ್ರ ಅನ್ನುವುದು ಪೊಲೀಸರ ವಾದವಾಗಿದೆ. ಆದರೂ ಈ ಬಗ್ಗೆ ದೂರು ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ ಅನ್ನುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.