ಮಂಗಳೂರು : ಎನ್ಐಎ ದಾಳಿ ವಿರೋಧಿಸಿ ಜಿಲ್ಲಾದ್ಯಂತ ಪ್ರತಿಭಟನೆಗೆ ಹುನ್ನಾರ ಆರೋಪ – ಪಿಎಫ್ಐ 10 ಮುಖಂಡರ ಬಂಧನ

ನ್ಯೂಸ್ ಆ್ಯರೋ : ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಾಹಿತಿ ಹಾಗೂ ನಿರ್ದೇಶನದ ಮೇರೆಗೆ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ 10 ಮಂದಿ ಪಿಎಫ್ಐ ಮುಖಂಡರನ್ನು ಪೋಲೀಸರು ಬಂಧಿಸಿದ್ದಾರೆ. ಒಬ್ಬ ಆರೋಪಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಸ್ಚಾರ್ಜ್ ಬಳಿಕ ಆತನನ್ನು ವಶಕ್ಕೆ ಪಡೆಯುವುದಾಗಿ ಕಮೀಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಬಂಧಿತರನ್ನು ಪಾಂಡೇಶ್ವರದ ಮೊಹಮ್ಮದ್ ಶರೀಫ್, ಮುಝೈರ್ ಕುದ್ರೋಳಿ, ಮಹಮ್ಮದ್ ನೌಫಲ್ ಕುದ್ರೋಳಿ, ಶಬೀರ್ ಅಹಮ್ಮದ್ ತಲಪಾಡಿ, ನವಾಝ್ ಉಳ್ಳಾಲ, ಮೊಹಮ್ಮದ್ ಇಕ್ಬಾಲ್ ಉಲಾಯಿಬೆಟ್ಟು, ದಾವೂದ್ ನೌಶಾದ್ ಕಾಟಿಪಳ್ಳ, ಮೊಹಮ್ಮದ್ ನಝೀರ್ ಕಿನ್ನಿಪದವು, ಇಸ್ಮಾಯಿಲ್ ಇಂಜಿನಿಯರ್ ಕಿನ್ನಿಪದವು ಬಜ್ಜೆ ಮತ್ತು ಇಬ್ರಾಹಿಂ ಪುತ್ತಿಗೆ ಎಂದು ಗುರುತಿಸಲಾಗಿದೆ.
ಭಾರತೀಯ ದಂಡ ಸಂಹಿತೆ ಸಿಆರ್‌ಪಿಸಿ 107 ಮತ್ತು 151ರಡಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಬಂಧಿತರನ್ನು ಠಾಣಾ ವ್ಯಾಪ್ತಿಯ ತಾಲೂಕು ದಂಡಾಧಿಕಾರಿಗಳು ಅಥವಾ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಗಿದ್ದು, 7ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಕೊಡಿಯಾಲ್ ಬೈಲ್ ಬಳಿಯ ಮಂಗಳೂರು ಜಿಲ್ಲಾ ಕಾರಾಗೃಹ ಜೈಲಿಗೆ ರವಾನಿಸಲಾಗಿದೆ.
ಮಂಗಳೂರಿನ ಉಳ್ಳಾಲ, ಕಾವೂರು, ಸುರತ್ಕಲ್, ಬಜಪೆ ಹಾಗೂ ಮೂಡುಬಿದಿರೆ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಮೊದಲ ಎನ್‌ಐಎ ದಾಳಿಯನ್ನು ಖಂಡಿಸಿ ಜಿಲ್ಲೆಯಾದ್ಯಂತ ದೊಡ್ಡ ಪ್ರತಿಭಟನೆ ಮಾಡುವ ಯೋಜನೆಯನ್ನು ಈ ಆರೋಪಿಗಳು ರೂಪಿಸಿಕೊಂಡಿದ್ದರು ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸ್ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.