ಟೆರ್ರರ್ ಟ್ರೈನಿಂಗ್ ಸೆಂಟರ್ ಮಿತ್ತೂರಿನ ಫ್ರೀಡಂ ಕಮ್ಯನಿಟಿ ಹಾಲ್ ಗೆ ಬಿತ್ತು ಬೀಗ – ಅಡ್ನಾಡಿ ಬುದ್ಧಿ ತೋರಿದ್ದ ಆಯೂಬ್ ಅಗ್ನಾಡಿ ಬಾಯ್ಬಿಟ್ಟ ಅಸಲಿ ಸತ್ಯ…!!

ನ್ಯೂಸ್ ಆ್ಯರೋ : ಕಳೆದ ವರ್ಷ ನಡೆದ ಬೆಂಗಳೂರಿನ ಡಿಜೆ ಹಳ್ಳಿ ಕೆಜೆಹಳ್ಳಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನೇತೃತ್ವದ ಪೊಲೀಸರ ತಂಡದಿಂದ ಬಂಧಿತರಾಗಿರುವ ಆರೋಪಿಗಳ ಪೈಕಿ ಉಪ್ಪಿನಂಗಡಿ ನಿವಾಸಿ ಆಯೂಬ್ ಅಗ್ನಾಡಿ ಎಂಬಾತನನ್ನು ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಇಂದು ಕರೆತಂದು ಸ್ಥಳ ಮಹಜರು ನಡೆಸಿದೆ.
ಬೆಂಗಳೂರಿನ ಕೆ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಕೆಲವರ ಸಹಿತ ರಾಜ್ಯದ ಹಲವರನ್ನು ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಬಂಧಿಸಿತ್ತು. ಬಂಧಿತರ ಪೈಕಿ ಉಪ್ಪಿನಂಗಡಿ ಸಮೀಪ ನಿವಾಸಿಯಾಗಿರುವ ಆಯೂಬ್ ಅಗ್ನಾಡಿ ಎಂಬಾತನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದಾಗ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರವ ಫ್ರೀಡಂ ಕಮ್ಯೂನಿಟಿ ಹಾಲ್ ನ ಬಗ್ಗೆ ಹಾಗೂ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದನೆನ್ನಲಾಗಿದೆ.
ಈ ಕಮ್ಯುನಿಟಿ ಹಾಲ್ ನಲ್ಲಿ ನಡೆಯುತ್ತಿರುವ ಚಟುವಟಿಕೆಗೂ ಆಯೂಬ್ ಅಗ್ನಾಡಿಗೂ ಹತ್ತಿರದ ಸಂಬಂಧವಿರುವ ನಿಟ್ಟಿನಲ್ಲಿ ಆತನನ್ನು ಸ್ಥಳಕ್ಕೆ ಕರೆತಂದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರವರ ನೇತೃತ್ವದ ಪೊಲೀಸರ ತಂಡ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಮಹಜರು ನಡೆಸಿದ್ದಾರೆ. ಈ ವೇಳೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಬಂದೋಬಸ್ತ್ ನೀಡಿತ್ತು.
ಜಿಲ್ಲಾಧಿಕಾರಿಯ ಆದೇಶದಂತೆ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೀಗ..!!
ದೇಶದಲ್ಲಿ ಪಿಎಫ್ಐ ಸಹಿತ ಅದರ ಎಂಟು ಅಂಗ ಸಂಸ್ಥೆಗಳನ್ನು ಐದು ವರ್ಷದ ಅವಧಿಗೆ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಬೀಗಜಡಿಯಲಾಗಿದೆ.
ಪಿಎಫ್ ಐ ಸಂಘಟನೆಯ ಕಾರ್ಯಕರ್ತರಿಗೆ ಈ ಕಮ್ಯೂನಿಟಿ ಹಾಲ್ ನಲ್ಲಿ ತರಬೇತಿ ನೀಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿರುವ ಹಾಗೂ ಕೆ.ಜೆ.ಹಳ್ಳಿ ಪೊಲೀಸರಿಂದ ಬಂದಿಸಲ್ಪಟ್ಟ ಆರೋಪಿಗಳು ನೀಡಿದ ಮಾಹಿತಿಯಂತೆ ಈ ಹಾಲ್ ಗೆ ಬೀಗ ಜಡಿಯಲಾಗಿದೆ ಎನ್ನಲಾಗಿದೆ.
ವಿಟ್ಲ ನಾಡಕಚೇರಿಯಲ್ಲಿರುವ ಉಪತಹಶೀಲ್ದಾರ್ ವಿಜಯವಿಕ್ರಮ, ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ಹಾಗೂ ಎಸ್.ಐ. ಸಂದೀಪ್ ಸೇರಿದಂತೆ ವಿಟ್ಲ ಠಾಣಾ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.