ನ್ಯೂಸ್ ಆ್ಯರೋ : ಯಕ್ಷಗಾನ ನಡೆಯುತ್ತಿದ್ದ ವೇಳೆಯೇ ರಂಗಸ್ಥಳದಲ್ಲಿ ಕುಸಿದು ಬಿದ್ದು ಕಲಾವಿದ ಗುರುವಪ್ಪ ಬಾಯಾರು ಅವರು ಮೃತಪಟ್ಟ ಘಟನೆ ಕಟೀಲಿನಲ್ಲಿ ನಡೆದಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಗುರುವಪ್ಪ ಬಾಯಾರು ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ.
ಕಟೀಲಿನ ಕ್ಷೇತ್ರದ ಸರಸ್ವತೀ ಸದನದಲ್ಲಿ ಗುರುವಾರ ತ್ರಿಜನ್ಮ ಮೋಕ್ಷ ಯಕ್ಷಗಾನ ನಡೆಯುತ್ತಿತ್ತು. ಈ ಸಂದರ್ಭ ಶಿಶುಪಾಲನ ಪಾತ್ರಧಾರಿಯಾಗಿದ್ದ ಗುರುವಪ್ಪ ಬಾಯರು ರಂಗಸ್ಥಳದಲ್ಲೇ ಇದ್ದರು. ಇನ್ನೊಬ್ಬ ಪಾತ್ರಧಾರಿ ಕುಣಿಯುತ್ತಿದ್ದಾಗ ಅಲ್ಲೇ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಯಾಘಾತವಾಗಿ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.
ʼತ್ರಿಜನ್ಮ ಮೋಕ್ಷʼ ಯಕ್ಷಗಾನ ಪ್ರದರ್ಶನದಲ್ಲಿ ಶಿಶುಪಾಲನ ಪಾತ್ರ ನಿರ್ವಹಣೆ ಮಾಡುತ್ತಿದ್ದ ಗುರುವಪ್ಪ ಬಾಯಾರು ರಂಗದಲ್ಲೇ ಮೋಕ್ಷ ಪಡೆದಿದ್ದು ದುರಂತ. ಅವರ ಕೊನೆ ಕ್ಷಣದ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..