ಉಡುಪಿ : ಕ್ರೀಡಾಕೂಟದ ವೇದಿಕೆಯಲ್ಲಿ ಆಜಾನ್ ಗೆ ಹಿಂದೂ ವಿದ್ಯಾರ್ಥಿನಿಯರಿಂದ ನೃತ್ಯ – ಸಂಘಟನೆಗಳಿಂದ ವ್ಯಾಪಕ ಆಕ್ರೋಶ, ಕ್ಷಮೆ ಕೇಳಿದ ಶಾಲಾ ಆಡಳಿತ ಮಂಡಳಿ

ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಖಾಸಗಿ ಶಾಲೆಯ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಆಜಾನ್ ಗೆ ನೃತ್ಯ ಮಾಡಿದ್ದಕ್ಕೆ ಹಿಂದುಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಶಂಕರನಾರಾಯಣದ ಮದರ್ ಥೆರೇಸಾ ಮೆಮೋರಿಯಲ್ ಶಾಲೆ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟ ಆಯೋಜಿಸಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಾಗತ ನೃತ್ಯ ಚರ್ಚೆಗೆ ಕಾರಣವಾಗಿದೆ.
ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಹಾಡುಗಳಿಗೆ ವಿದ್ಯಾರ್ಥಿನಿಯರಿಂದ ನೃತ್ಯ ನಡೆದಿದೆ. ಅಲ್ಲಾಹು ಅಕ್ಬರ್ ( ಆಜಾನ್ ) ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತವಾಗಿದೆ. ವೇದಿಕೆಯಲ್ಲಿದ್ದ ಸ್ಥಳೀಯ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದ್ದೆ ಖಂಡನೆ ಮಾಡಿದರು.
ಆಜಾನ್ ಗೆ ವಿದ್ಯಾರ್ಥಿನಿಯರು ನೃತ್ಯ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳೀಯ ಹಿಂದೂ ಪರ ಸಂಘಟನೆಗಳು ಖಂಡಿಸಿದ್ದು, ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು. ಕ್ಷಮೆ ಯಾಚಿಸದಿದ್ದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಕೆಲಕಾಲ ಚರ್ಚೆ ನಡೆದು, ಶಾಲಾ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ.
ಸ್ವಾಗತ ನೃತ್ಯದಲ್ಲಿ 30 ಸೆಕೆಂಡ್ ಆಜಾನ್ ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು, ಆಮೇಲೆ ಕ್ರೈಸ್ತ ಧರ್ಮದ ಬೆಲ್ ಮತ್ತು ಶ್ಲೋಕಕ್ಕೆ ಹೆಜ್ಜೆ ಹಾಕಿದ್ದರು. ಹಿಂದೂ ಧಾರ್ಮಿಕ ಪದ್ಯಕ್ಕೂ ವಿದ್ಯಾರ್ಥಿಗಳು ಕುಣಿದಿದ್ದರು. ಆಜಾನ್ ಗೆ ಹೆಜ್ಜೆ ಹಾಕಿದ್ದರು. ಯಾರದ್ದೂ ಭಾವನೆಯನ್ನು ಘಾಸಿಗೊಳಿಸಲಾಗಿದೆ ಉದ್ದೇಶ ನಮ್ಮದಾಗಿರಲಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದರು.