
ನ್ಯೂಸ್ ಆ್ಯರೋ : ಮಾಹೆಯ 30ನೇ ಘಟಿಕೋತ್ಸವ ಇದೇ ನವೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅನೇಕ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯಲಿವೆ. ಅಲ್ಲದೆ ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹೆ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ತಿಳಿಸಿದ್ದಾರೆ.
ಘಟಿಕೋತ್ಸವದ ಮೊದಲ ದಿನ ನವೆಂಬರ್ 18 ರಂದು ರಾಜನಾಥ್ ಸಿಂಗ್ ಗೌರವಾನ್ವಿತ ರಕ್ಷಣಾ ಸಚಿವರು, ಭಾರತ ಸರ್ಕಾರ – ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆ. ಎಂಐಟಿ ಕಾಲೇಜಿನ ಸಿವಿಲ್ ಆರ್ಕಿಟೆಕ್ಚರ್ ಕಟ್ಟಡವನ್ನು ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್, PVSM, AVSM (Retd), ವೈಸ್ ಚಾನ್ಸೆಲರ್, MUHS, ನಾಸಿಕ್ ಅವರು ಗೌರವಾನ್ವಿತ ಅತಿಥಿಗಳಾಗಿರುತ್ತಾರೆ.
ನವೆಂಬರ್ 19 ರಂದು ಭಾರತ ಸರ್ಕಾರದ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾದ ಡಾ. ಜಿ. ಸತೀಶ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅದೇ ರೀತಿ ಮೂರನೇ ದಿನವಾದ ನವೆಂಬರ್ 20ರಂದು ನಡೆಯುವ ಕಾರ್ಯಕ್ರಮದಲ್ಲಿ ಆಕ್ಸಿಸ್ ಬ್ಯಾಂಕ್ ನ ಎಂ.ಡಿ. ಹಾಗೂ ಸಿಇಒ ಆಗಿರುವ ಶ್ರೀ ಅಮಿತಾಬ್ ಚೌಧರಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಈ ಸಂದರ್ಭದಲ್ಲಿ ಮಾಹೆಯು ತನ್ನ ವಿಶಾಲವಾದ ಹಿನ್ನೆಲೆಯೊಂದಿಗೆ ಹೊಸ ಆವಿಷ್ಕಾರಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಪರಿಕಲ್ಪನೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ಅದರ ನಿರೀಕ್ಷಿತ ಫಲಿತಾಂಶಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.
ಈಗಾಗಲೇ ಮಾಹೆಗೆ ನ್ಯಾಕ್ ನಿಂದ A++ ಗ್ರೇಡ್ ಲಭ್ಯವಾಗಿದೆ. ಅಲ್ಲದೆ ಸಂಸ್ಥೆಯ ಅನೇಕ ತಾಂತ್ರಿಕ ಯೋಜನೆಗಳನ್ನು ಎನ್ ಬಿಎ ಅಂಗೀಕರಿಸಿದೆ. ಮಾಹೆಯು ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಧಿಸಲು ನಡೆಸುತ್ತಿರುವ ಪ್ರಯತ್ನಗಳ ಕುರಿತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗಿವೆ. ಭಾರತ ಸರ್ಕಾರದ ಶೈಕ್ಷಣಿಕ ಸಚಿವಾಲಯದ National Institutional Rankings Framework (NIRF)-2022 ರ ಪ್ರಕಾರ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮಾಹೆಗೆ ಏಳನೇ ಸ್ಥಾನ ದೊರೆತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಶ್ರೇಯಾಂಕ ಪಡೆಯಲು ಮಾಹೆಯು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.
“ನಮ್ಮ ಸಂಸ್ಥಾಪಕರಾದ ಡಾ. ಟಿ.ಎಂ.ಎ ಪೈ ಅವರು ದೂರದೃಷ್ಟಿ ಉಳ್ಳವರಾಗಿದ್ದರು. ಅವರು ವೈದ್ಯರು, ಬ್ಯಾಂಕರ್ ಮತ್ತು ಶಿಕ್ಷಣತಜ್ಞರಾಗಿದ್ದರು. ಅವರು 1942 ರಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅನ್ನು 1860 ರ ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್ ಅಡಿಯಲ್ಲಿ ಸ್ಥಾಪಿಸಿದರು ಮತ್ತು ಆಸಕ್ತರಿಗೆ ತಾಂತ್ರಿಕ ಮತ್ತು ವಾಣಿಜ್ಯ ಶಿಕ್ಷಣ ಲಭ್ಯವಾಗುವಂತೆ ಮಾಡಿದರು.
ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಗೆ ಕೌಶಲ ತರಬೇತಿಯನ್ನು ನೀಡುವ ಉದ್ದೇಶದಿಂದ ಅವರು, ಮರದ ಕೆಲಸ, ಪ್ಲಂಬಿಂಗ್, ಎಲೆಕ್ಟ್ರಿಷಿಯನ್, ಮೇಸ್ತ್ರಿ ಕೆಲಸಗಳನ್ನು ಕಲಿಸಲು ವ್ಯವಸ್ಥೆ ಮಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆಯಲು ಬೇಕಾದ ವೃತ್ತಿಪರ ಕಾಲೇಜುಗಳನ್ನು ಆರಂಭಿಸಿದರು.
ದೇಶದ ಮೊತ್ತ ಮೊದಲ ಸ್ವಯಂ ಹಣಕಾಸು ಹೂಡಿಕೆ ಮಾಡಿದ ಖಾಸಗಿ ವೈದ್ಯಕೀಯ ಕಾಲೇಜನ್ನು 1953ರಲ್ಲಿ ಆರಂಭಿಸಿದರು. ಅವರ ಈ ಪ್ರಯತ್ನಕ್ಕೆ ಅವರದ್ದೇ ಸ್ನೇಹಿತರು ಸೇರಿದಂತೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅವರು ತಮ್ಮ ಉದ್ದೇಶದ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಇದೇ ವೇಳೆಗೆ ಅವರು ಎಂಜಿನಿಯರಿಂಗ್ ಡೆಂಟಿಸ್ಟ್ರಿ, ಫಾರ್ಮಸಿ, ಆರ್ಕಿಟೆಕ್ಟ್, ಕಾನೂನು, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಕಲಿಕೆಯ ಮ್ಯಾನೇಜ್ ಮೆಂಟ್ ಕಾಲೇಜುಗಳನ್ನು ಆರಂಭಿಸಿದರು.
ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಾಹೆಯ ಪ್ರಮುಖ ಸಂಸ್ಥೆಯಾಗಿದೆ. 1953 ರಲ್ಲಿ ಸಂಸ್ಥಾಪಕ ದಿವಂಗತ ಡಾ ಟಿಎಂಎ ಪೈ ಅವರು ಪ್ರಾರಂಭಿಸಿದ ಮೊದಲ ಸ್ವ- ಹಣಕಾಸು ಹೂಡಿಕೆಯ ವೈದ್ಯಕೀಯ ಕಾಲೇಜು ಇದಾಗಿದ್ದು ದೇಶದಲ್ಲಿ ಇದು 29ನೇ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ.
ಪ್ರಸ್ತುತ ದೇಶದಲ್ಲಿ 600 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದು, ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದೇಶದ ಅಗ್ರ 10 ವೈದ್ಯಕೀಯ ಕಾಲೇಜುಗಳಲ್ಲಿ ಕೆಎಂಸಿಯು ಸ್ಥಾನ ಪಡೆದಿದೆ ಎಂದು ಹೇಳಲು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಡಾ ಟಿಎಂಎ ಪೈ ಅವರ ಕನಸು ಅವರ ಜೀವಿತಾವಧಿಯಲ್ಲಿ ನನಸಾಗಲಿಲ್ಲ, ಅವರ ಪ್ರೀತಿಯ ಮಗ, ಪ್ರಸ್ತುತ ಮಾಹೆಯ ಕುಲಪತಿ ಡಾ. ರಾಮದಾಸ್ ಎಂ ಪೈ ಅವರು 1979 ರಲ್ಲಿ ಅಧಿಕಾರ ವಹಿಸಿಕೊಂಡರು ಮತ್ತು ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ ಯನ್ನು (ಮಾಹೆ) ಸ್ಥಾಪಿಸಿದರು.
1993 ರಲ್ಲಿ ಯುಜಿಸಿ ಕಾಯಿದೆ 1956 ರ ಸೆಕ್ಷನ್ 3 ರ ಅಡಿಯಲ್ಲಿ ಭಾರತ ಸರ್ಕಾರವು ಡೀಮ್ಡ್ ವಿಶ್ವವಿದ್ಯಾನಿಲಯ ಸ್ಥಾನಮಾನವನ್ನು ನೀಡುವುದರೊಂದಿಗೆ ಡಾ. ರಾಮದಾಸ್ ಎಂ ಪೈ ಅವರು ಮಣಿಪಾಲವನ್ನು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯ ಟೌನ್‌ಶಿಪ್ ಮಾಡಿದರು ಮತ್ತು ಮೊದಲ ಬಾರಿಗೆ ಭಾರತೀಯ ಉನ್ನತ ಶಿಕ್ಷಣವನ್ನು ವಿದೇಶಕ್ಕೆ ತೆಗೆದುಕೊಂಡರು.
‘ಏನೇ ಆಗಲಿ ಸಮಗ್ರತೆ ಮುಖ್ಯ ಎಂಬ ಅವರ ಅಚಲ ವಿಶ್ವಾಸವು ಇಂದಿನ ಮಣಿಪಾಲವನ್ನು ನಿರ್ಮಿಸಿದ ತಳಪಾಯದ ಸೂತ್ರವಾಗಿದೆ ಎಂದರು. ಮಾಹೆಯು ವಿದ್ಯಾರ್ಥಿಗಳಿಗೆ ಆಧುನಿಕ ಬೋಧನಾ ತತ್ವಗಳನ್ನು ಸಂಯೋಜಿಸುವ ಸಾಧನಗಳೊಂದಿಗೆ ವಿಶ್ವವಿದ್ಯಾನಿಲಯದ ಅನುಭವವನ್ನು ಒದಗಿಸುವ ತನ್ನ ಯೋಜನೆಗಳನ್ನು ಕ್ಷಿಪ್ರವಾಗಿ ಜಾರಿಗೊಳಿಸುತ್ತಿದೆ.
ಪ್ರಸ್ತುತ ಪ್ರಪಂಚದ ವೇಗದ ಗತಿಯ, ನಾವೀನ್ಯತೆಗೆ ಆದ್ಯತೆ ನೀಡಿ, ಶೈಕ್ಷಣಿಕ ದೃಷ್ಟಿಕೋನವನ್ನು ಪುನರುಜ್ಜೀವನಗೊಳಿಸಲು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ಹೇಳಿದರು.