
ನ್ಯೂಸ್ ಆ್ಯರೋ : ಮನೆಯ ಮಂದಿಯೆಲ್ಲ ಮದುವೆ ಮನೆಯಲ್ಲಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಆ ಮನೆಯ ಅಡುಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯ ಗಾದ್ರೆಜ್‌ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ಅರಂಬೋಡಿ ಕಾಂತರಬೆಟ್ಟು ನಿವಾಸಿ ಪ್ರಸಾದ್ (34) ಹಾಗೂ ಕಲ್ಯಾ ಗ್ರಾಮ ನಿವಾಸಿ ಶಿಬಾ (39) ಎಂದು ಗುರುತಿಸಲಾಗಿದೆ.
ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಕಂಗಿತ್ತುವಿನ ಉಷಾ ಜಗದೀಶ್ ಆಂಚನ್ ಅವರ ಮನೆಯಲ್ಲಿ ಕಳೆದ ಡಿಸೆಂಬರ್ 3ರಂದು ಕಳ್ಳತನ ನಡೆದಿತ್ತು. ಅಂದು ಮನೆಯ ಗಾದ್ರೆಜ್‌ನಲ್ಲಿ ಇರಿಸಿದ್ದ ಸುಮಾರು 4.50 ಲಕ್ಷ ರೂ. ಮೌಲ್ಯದ ಸುಮಾರು 156 ಗ್ರಾಂ ತೂಕದ ಬಂಗಾರದ ಒಡವೆ ಸಹಿತ 9,75,000 ರೂ. ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪೈಕಿ ಪ್ರಸಾದ್ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡುಬಿದಿರೆ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಮತ್ತು ಮೂಡುಬಿದಿರೆ ಠಾಣೆಯಲ್ಲಿ ಸುದರ್ಶನ ಜೈನ್ ಅವರ ಕೊಲೆ ಹಾಗೂ ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.