ಮಾಜಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ‘ಫೋನ್ ಸೆಕ್ಸ್’ ಆಡಿಯೋ ಲೀಕ್ – ಛೀ ಛೀ ತೀರಾ ಇಂತಹ ಕೆಳಮಟ್ಟದ ಪದ ಬಳಕೆ ಮಾಡಿದ್ರಾ ಇಮ್ರಾನ್..?

ನ್ಯೂಸ್ ಆ್ಯರೋ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಹೊಸ ವಿವಾದಕ್ಕೆ ಸಿಲುಕಿದ್ದಾರೆ. ಮಹಿಳೆಯೊಂದಿಗೆ ಇಮ್ರಾನ್ ಖಾನ್ ನಡೆಸಿದ್ದಾರೆ ಎಂದು ಹೇಳಲಾದ ಸೆಕ್ಸ್ ಸಂಭಾಷಣೆಯ ಆಡಿಯೋ ಸೋರಿಕೆಯಾಗಿದ್ದು, ಪಾಕಿಸ್ತಾನ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಆದರೆ, ಈ ಆರೋಪವನ್ನು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಲ್ಲಗಳೆದಿದೆ.
ಇಮ್ರಾನ್ ಖಾನ್ ಮತ್ತು ಮಹಿಳೆಯೊಬ್ಬರು ಫೋನ್ನಲ್ಲಿ ತುಂಬ ಅಶ್ಲೀಲವಾಗಿ, ಲೈಂಗಿಕ ಪ್ರಚೋದಕವಾಗಿ ಮಾತಾಡಿಕೊಂಡ ಆಡಿಯೊಗಳು ಇವಾಗಿವೆ. ಆ ಮಹಿಳೆ ತನ್ನ ಖಾಸಗಿ ಅಂಗಗಳು, ತನ್ನ ಲೈಂಗಿಕ ಬದುಕಿನ ಬಗ್ಗೆ ಮಾತಾಡಿದ್ದೂ ಆಡಿಯೋದಲ್ಲಿ ಕೇಳುತ್ತದೆ ಎನ್ನಲಾಗಿದೆ. ಆ ಮಹಿಳೆ ಯಾರು ಗೊತ್ತಿಲ್ಲ. ಆದರೆ ಅದರಲ್ಲಿದ್ದ ಪುರುಷನ ಧ್ವನಿ ಇಮ್ರಾನ್ ಖಾನ್ ಅವರದ್ದು ಎಂದು ಪಾಕಿಸ್ತಾನಿ ಪತ್ರಕರ್ತರು, ಮಾಧ್ಯಮಗಳು ಪ್ರತಿಪಾದಿಸಿವೆ.
ಈ ಆಡಿಯೊಗಳನ್ನು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮೊದಲು ಶೇರ್ ಮಾಡಿಕೊಂಡಿದ್ದು ಪಾಕಿಸ್ತಾನದ ಪತ್ರಕರ್ತ ಸೈಯದ್ ಅಲಿ ಹೈದರ್ ಎಂಬುವರು. ಆದರೆ ಮೊದಲು ಈ ಆಡಿಯೊ ವೈರಲ್ ಮಾಡಿದ್ದು ಯಾರು ಎಂಬುದು ಖಚಿತವಾಗಿಲ್ಲ. ಪಾಕಿಸ್ತಾನದ ಪ್ರಧಾನಿ ಕಚೇರಿ ಮಾಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದರೆ, ಆ ಆಡಿಯೊದಲ್ಲಿ ಧ್ವನಿ ಕೇಳುತ್ತಿರುವ ಮಹಿಳೆಯೇ ಮೊದಲು ಇದನ್ನು ವೈರಲ್ ಮಾಡಿದ್ದು ಎಂದು ಇನ್ನೂ ಕೆಲವು ಮೀಡಿಯಾಗಳು ಹೇಳಿವೆ.
ಇನ್ನು ಪಾಕಿಸ್ತಾನದ ಒಂದಷ್ಟು ಜರ್ನಲಿಸ್ಟ್ಗಳಂತೂ ಇಮ್ರಾನ್ ಖಾನ್ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ‘ಇದು ಇಮ್ರಾನ್ ಖಾನ್ ವೈಯಕ್ತಿಕ ಬದುಕು. ಅವರು ಏನಾದರೂ ಮಾಡಿಕೊಳ್ಳಲಿ. ಆದರೆ ಅವರು ಇನ್ನಾದರೂ ತಾನು ಸಭ್ಯ, ಮುಸ್ಲಿಂ ಸಮುದಾಯದ ಪ್ರಬಲ ನಾಯಕ ಎಂದು ಬಿಂಬಿಸಿಕೊಳ್ಳುವುದನ್ನು ಬಿಡಲಿ’ ಎಂದು ಪತ್ರಕರ್ತೆ ಜಮ್ಜಾ ಅಜರ್ ಹೇಳಿದ್ದಾರೆ. ಹಾಗೇ ಇನ್ನೊಬ್ಬಳು ಪತ್ರಕರ್ತೆ ಇಮ್ರಾನ್ ಖಾನ್ರನ್ನು ಭಾರತದ ಬಾಲಿವುಡ್ ನಟ ಇಮ್ರಾನ್ ಹಶ್ಮಿಗೆ ಹೋಲಿಸಿದ್ದಾರೆ. ಇಮ್ರಾನ್ ಹಶ್ಮಿ ಸಿನಿಮಾಗಳಲ್ಲಿ ಹೆಚ್ಚೇ ಎನ್ನಿಸುವಷ್ಟು ಬೋಲ್ಡ್, ಕಿಸ್ಸಿಂಗ್ ದೃಶ್ಯಗಳು ಇರುವುದರಿಂದ ಆಕೆ ಹೀಗೆ ಹೇಳಿ ವ್ಯಂಗ್ಯ ಮಾಡಿದ್ದಾಳೆ.
ಫೇಕ್ ಆಡಿಯೊ ಎಂದ ಇಮ್ರಾನ್ ಪಕ್ಷ
ಈ ಮಧ್ಯೆ ಇಮ್ರಾನ್ ಖಾನ್ ಪಕ್ಷ ಪಿಟಿಐ ಆಡಿಯೊ ಫೇಕ್ ಎಂದು ಹೇಳಿದೆ. ಇದರಲ್ಲಿನ ಧ್ವನಿ ಇಮ್ರಾನ್ ಖಾನ್ ಅವರದ್ದಲ್ಲ. ಅವರ ರಾಜಕೀಯ ದ್ವೇಷಿಗಳು ಈ ತುಚ್ಛ ಕೆಲಸ ಮಾಡಿದ್ದಾರೆ. ಇಮ್ರಾನ್ ಖಾನ್ ಇಂಥ ಕೆಲಸ ಮಾಡುವವರು ಅಲ್ಲ ಎಂದು ಪಿಟಿಐ ನಾಯಕ ಡಾ.ಅರ್ಸ್ಲಾನ್ ಖಾಲೀದ್ ತಿಳಿಸಿದ್ದಾರೆ.
ಇತ್ತೀಚಿನದು ಎಂದು ಹೇಳಲಾದ ಎರಡನೇ ಕ್ಲಿಪ್‌ನಲ್ಲಿ ಇಮ್ರಾನ್ ಖಾನ್ ಮಹಿಳೆಯನ್ನು ತನ್ನ ಬಳಿಗೆ ಬರಲು ಆಹ್ವಾನಿಸುತ್ತಾನೆ. ಆದರೆ, ಆಕೆ ನಿರಾಕರಿಸುತ್ತಾಳೆ. ಈ ವೇಳೆ ಇಮ್ರಾನ್ ಒತ್ತಾಯ ಮಾಡುತ್ತಿರುವುದು ಆಡಿಯೋದಲ್ಲಿದೆ. ಇದರ ವಿರುದ್ಧ ಇತರೆ ಪಕ್ಷಗಳು ಮುಗಿಬಿದ್ದಿದ್ದರೆ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಪವಾದವನ್ನು ನಿರಾಕರಿಸಿದ್ದು, ಇದು ಫೇಕ್ ಎಂದು ಸಾರಿದೆ.