ಯುದ್ಧಪಿಪಾಸು ರಷ್ಯಾದಿಂದ ದೂರವಾಗುತ್ತಿರುವ ಕಾರು ಕಂಪೆನಿಗಳು – ರೆನಾಲ್ಟ್, ನಿಸ್ಸಾನ್ ಬಳಿಕ ಇದೀಗ ಬೆಂಝ್ ಸರದಿ

ನ್ಯೂಸ್ ಆ್ಯರೋ : ಈಗಾಗಲೇ ಕಾರು ಕಂಪೆನಿಗಳಾದ ರೆನಾಲ್ಟ್, ನಿಸ್ಸಾನ್ ರಷ್ಯಾವನ್ನು ತೊರೆದಿದ್ದು, ಇದೀಗ ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪೆನಿಯಾದ ‘ಮರ್ಸಿಡಿಸ್ ಬೆಂಝ್’ ರಷ್ಯಾದಲ್ಲಿ ತನ್ನ ವ್ಯಾಪಾರ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಅಧಿಕೃತವಾಗಿ ತಿಳಿಸಿದ್ದು, ಈ ಬೆಳವಣಿಗೆ ಅಚ್ಚರಿಯನ್ನು ಮೂಡಿಸಿದೆ.
ಸದ್ಯದ ಮಾಹಿತಿ ಪ್ರಕಾರ ಕಳೆದ ವರ್ಷಕ್ಕಿಂತಲೂ ಈ ವರ್ಷ ವ್ಯಾಪಾರದಲ್ಲಿ ಕಂಪೆನಿಯು ಭಾರೀ ಹಿನ್ನಡೆ ಅನುಭವಿಸಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮರ್ಸಿಡಿಸ್-ಬೆಂಝ್ ಸ್ಥಳೀಯ ಹೂಡಿಕೆದಾರರಿಗೆ ಮಾಸ್ಕೋ ಬಳಿಯ ಕಂಪೆನಿಯ ಕಾರ್ಖಾನೆ ಸೇರಿದಂತೆ ರಷ್ಯಾದಲ್ಲಿ ತನ್ನ ಆಸ್ತಿಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದ್ದು, ಕಂಪೆನಿ ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಸುಮಾರು 2 ಬಿಲಿಯನ್ ಯೂರೋ ನಷ್ಟವನ್ನು ಎದುರಿಸಬಹುದು ಎನ್ನಲಾಗಿದೆ.
ರಷ್ಯಾದ ಸ್ಥಾವರದಲ್ಲಿ ಬೆಂಝ್ ಈ-ಕ್ಲಾಸ್ ಸೆಡಾನ್ ಅನ್ನು ಉತ್ಪಾದಿಸುತ್ತಿದ್ದು, 1,000 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಾರ್ಚ್‌ನಿಂದ ಕಂಪೆನಿಯ ಉತ್ಪಾದನೆ ಸಂಪೂರ್ಣವಾಗಿ ನಿಲ್ಲಿಸಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.
ಮಾರಾಟದಲ್ಲಿ ತೀವ್ರ ಕುಸಿತದಿಂದಾಗಿ ರಷ್ಯಾದಲ್ಲಿ ಜನವರಿಯಿಂದ ಸೆಪ್ಟೆಂಬರ್ 2022 ರವರೆಗೆ ರಷ್ಯಾದಲ್ಲಿ ಕೇವಲ 9,558 ಯುನಿಟ್‌ಗಳನ್ನು ಮಾತ್ರ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ಮಾರಾಟವು ಶೇಕಡಾ 70 ರಷ್ಟು ಕಡಿಮೆಯಾಗಿದೆ ಎಂದು ಕಂಪೆನಿಯು ಬಹಿರಂಗಪಡಿಸಿದೆ.
ಮುಂದಿನ ದಿನಗಳಲ್ಲಿ ಈ ಮಾರಾಟ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಆತಂಕದಲ್ಲಿ ರಷ್ಯಾದಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಇದೀಗ ಸ್ಥಳೀಯ ಅಂಗಸಂಸ್ಥೆಯಾದ ಏವೋಡಮ್‌ಗೆ ಮಾರಾಟ ಮಾಡುವುದಾಗಿ ಹೇಳಿದೆ.
ರಷ್ಯಾದ ಕೆಲ ಗ್ರಾಹಕರಿಗೆ ಮರ್ಸಿಡಿಸ್– ಬೆಂಝ್ ಕಾರು ಬೇಕಾಗಿದ್ದು, ಆ ಗ್ರಾಹಕರಿಗಾಗಿ ಮುಂದುವರಿಸಿದರೆ ಕಂಪನಿಗೆ ಭಾರೀ ನಷ್ಟವಾಗಲಿದೆ ಎಂದು ಹೇಳಿದೆ. ಮರ್ಸಿಡಿಸ್-ಬೆಂಝ್ ಪ್ರಸ್ತುತ ರಷ್ಯಾದ ಟ್ರಕ್ ಕಂಪೆನಿ ಕಮಾಜ್ ನಲ್ಲಿ 15% ಪಾಲನ್ನು ಹೊಂದಿದ್ದು, ಮುಂದಿನ ವರ್ಷ ಡೈಮ್ಲರ್ ಟ್ರಕ್ಸ್‌ಗೆ ಮಾರಾಟವಾಗುವ ನಿರೀಕ್ಷೆಯಿದೆ. ವಿಶ್ವ ಮಾರುಕಟ್ಟೆಯಲ್ಲಿ ಬಹಳ ಪ್ರಸಿದ್ಧವಾಗಿರುವ ಈ ಕಂಪೆನಿಯಿಂದ ಈ ಹಿಂದೆ ರಷ್ಯಾದಲ್ಲಿ ಉತ್ತಮ ಮಾರಾಟವನ್ನು ಹೊಂದಿದ್ದವು.
ರಷ್ಯಾ-ಉಕ್ರೇನ್ ಯುದ್ಧದಿಂದ ಭಾರೀ ನಷ್ಟ:
ರಷ್ಯಾ-ಉಕ್ರೇನ್ ನಡುವಿನ ಯುದ್ಧದ ನಂತರ ಕಂಪೆನಿಗೆ ಭಾರೀ ನಷ್ಟವನ್ನು ಅನುಭವಿಸಿತು. ಯುದ್ಧದ ಪ್ರಭಾವ ರಷ್ಯಾದಲ್ಲಿನ ಎಲ್ಲಾ ವಲಯಗಳಿಗೂ ಆಘಾತ ನೀಡಿದೆ. ಅಲ್ಲಿನ ಬಹುತೇಕ ಎಲ್ಲಾ ರಂಗಗಳು ಸ್ಥಗಿತಗೊಂಡು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದವು.
ಈ ತಿಂಗಳ ಪ್ರಾರಂಭದಲ್ಲಿ ರೆನಾಲ್ಟ್ ಕಂಪೆನಿಯು ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಂಡು, ತನ್ನ ಸಂಪೂರ್ಣ ರಷ್ಯಾದ ವ್ಯವಹಾರವನ್ನು ಸರ್ಕಾರಿ ಸ್ವಾಮ್ಯದ NAMI ಗೆ ಮಾರಾಟ ಮಾಡಿತ್ತು.
ಈ ಹಿಂದೆ ಕೇವಲ 1 ಯೂರೋ ($0.97)ಗೆ NAMI ಗೆ ನಿಸ್ಸಾನ್ ಕಂಪನಿ ಕೂಡ ತನ್ನ ಎಲ್ಲಾ ವ್ಯವಹಾರಗಳನ್ನು ಮಾರಾಟ ಮಾಡುತ್ತಿರುವುದಾಗಿ ಘೋಷಿಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿತ್ತು. ಏಕೆಂದರೆ ಅದು ಅಷ್ಟೊತ್ತಿಗೆ ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು. ರಷ್ಯಾದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದರೆ ಕಂಪನಿಯು ಸುಮಾರು $ 687 ಮಿಲಿಯನ್ ನಷ್ಟವನ್ನು ಎದುರಿಸಬೇಕಾಗುತ್ತದೆ. ಇದರಿಂದ ಅಲ್ಲಿನ ನೌಕರರ ಮೇಲೂ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಕಂಪನಿ ರಷ್ಯಾ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕಂಪೆನಿಯ 2,000 ಉದ್ಯೋಗಿಗಳಿಗೆ 12 ತಿಂಗಳ ಉದ್ಯೋಗ ಭದ್ರತೆಯನ್ನು ನೀಡುತ್ತದೆ. ಸದ್ಯಕ್ಕೆ ಕಾರ್ಮಿಕರನ್ನು ಸರ್ಕಾರ ಕೈಹಿಡಿದರೂ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಕಾಡುವುದು ಖಚಿತವಾಗಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯದ ಪ್ರಕಾರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪ್ರಾರಂಭವಾದ ತಕ್ಷಣ ಮರ್ಸಿಡಿಸ್-ಬೆಂಝ್ ಕಂಪನಿಯು ರಷ್ಯಾದಲ್ಲಿ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಆದರೆ ಇದೀಗ ತನ್ನ ಎಲ್ಲ ವ್ಯವಹಾರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಿದ್ಧವಾಗಿದೆ. ಕಂಪನಿಗಳ ಅನುಕ್ರಮವಾಗಿ ರಷ್ಯಾದಲ್ಲಿ ತಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸುವುದರಿಂದ ಕಾರ್ಮಿಕರು ಹೆಚ್ಚು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಸುಧಾರಿಸುತ್ತದೆಯೇ ಎಂಬುವುದನ್ನು ನಿರೀಕ್ಷಿಸಲಾಗಿದೆ.