ಎಲಾನ್ ಮಸ್ಕ್ ಟ್ವಿಟರ್ ಮಾಲಕನಾದ ಒಂದೇ ವಾರದಲ್ಲಿ 7,500 ಸಿಬ್ಬಂದಿ ವಜಾ – ಭಾರತೀಯರೆಲ್ಲರಿಗೂ ಗೇಟ್ ಪಾಸ್, ಕೋರ್ಟ್ ಮೆಟ್ಟಿಲೇರಿದ ಸಿಬ್ಬಂದಿ…!!

ನ್ಯೂಸ್ ಆ್ಯರೋ: ‘ನೀವೇನಾದರೂ ಕಚೇರಿಯತ್ತ ಹೊರಟಿದ್ದರೆ, ಮನೆಗೆ ವಾಪಸ್ ಹೋಗಿ…’ ಎನ್ನುವ ಮೂಲಕ ಎಲಾನ್ ಮಸ್ಕ್ ನೇತೃತ್ವದ ಟ್ವಿಟರ್ ಸಂಸ್ಥೆ ಭಾರತ, ಅಮೆರಿಕ, ಯು.ಕೆ. ಸೇರಿದಂತೆ ಜಗತ್ತಿನ ವಿವಿಧ ಮೂಲೆಗಳಲ್ಲಿರುವ ತನ್ನ ಸಾವಿರಾರು ಸಿಬ್ಬಂದಿಗೆ ಸೂಚನೆ ನೀಡಿದ ಬೆನ್ನಲ್ಲೇ 7,500 ಸಿಬ್ಬಂದಿಯನ್ನು ಕಿತ್ತೆಸೆದಿದ್ದಾರೆ. ಈ ಸಂಬಂಧ ಇಮೇಲ್‌ಗೆ ಸಂದೇಶವನ್ನು ಕಳುಹಿಸಲಾಗುವುದು ಎಂದು ಸಿಬ್ಬಂದಿಗೆ ತಿಳಿಸಿಲಾಗಿದೆ. ಎಲಾನ್‌ನ ಈ ನಡೆಯಿಂದ ಟ್ವಿಟರ್ ಕಚೇರಿಯಲ್ಲಿ ಭಯ ಹಾಗೂ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಇನ್ನೂ ಎಲಾನ್ ಅವರು ತಾನು ಟ್ವಿಟರ್ ಹೊಸ ಮಾಲೀಕನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದ ಭಾರತ ಮೂಲದ ಮೂವರನ್ನು ವಜಾ ಮಾಡಿ ಖಡಕ್ ಸಂದೇಶವನ್ನು ರವಾನಿಸಿದ್ದರು. ಇದೀಗ ಭಾರತದಲ್ಲಿದ್ದ ಇಡೀ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗವನ್ನೇ ವಜಾ ಮಾಡಿದ್ದು, ಹಲವಾರು ಎಂಜಿನಿಯರ್‌ಗಳನ್ನೂ ಮನೆಗೆ ಕಳುಹಿಸಿದ್ದಾರೆ.
ಕೆಲಸಕ್ಕೆ ಹಾಜರಾದ ಸಿಬ್ಬಂದಿಗೆ ಶಾಕ್:
ಯಾವುದೇ ಮುನ್ಸೂಚನೆಯಿಲ್ಲದೆ ಮಸ್ಕ್ ಸರ್ವಾಧಿಕಾರಿ ನಿರ್ಧಾರವನ್ನು ಕೈಗೊಂಡಿರುವುದರಿಂದ ಬೆಳಗ್ಗಿನ ಜಾವ ಕೆಲಸಕ್ಕೆ ಹಾಜರಾದವರಿಗೆ ವಜಾಗೊಂಡ ಸಂದೇಶ ಬಂದಿದ್ದು ಬರ ಸಿಡಿಲು ಬಡಿದಂತಾಗಿದೆ. ಕೆಲಸದಿಂದ ವಜಾ ಮಾಡಿದವರಿಗೆ ವೈಯಕ್ತಿಕ ಇಮೇಲ್‌ನಲ್ಲಿ ಸಂದೇಶ ರವಾನೆಯಾಗಿದ್ದು, ಸಂಸ್ಥೆಯಲ್ಲಿ ಉಳಿದುಕೊಂಡವರಿಗೆ ಟ್ವಿಟರ್ ಇಮೇಲ್ ಮೂಲಕ ನೋಟಿಫಿಕೇಷನ್ ಕಳುಹಿಸಿದ್ದಾರೆ.
ಈ ನಿರ್ಧಾರದಿಂದ ನಿಮ್ಮ ಮೇಲೆ ಪರಿಣಾಮ ಉಂಟಾಗಲಿ ಅಥವಾ ಬೀರದಿರಲಿ ಇದು ನಮಗೆ ಸವಾಲಿನ ಅನುಭವವಾಗಿದೆ ಎಂದು ವಜಾ ಆಗಿರುವ ಸಿಬ್ಬಂದಿಗೆ ಕಳುಹಿಸಿದ ಇಮೇಲ್‌ನಲ್ಲಿ ಬರೆಯಲಾಗಿದೆ. ಅದಲ್ಲದೆ ಈ ಮಹತ್ವದ ನಿರ್ಧಾರಕ್ಕೆ ಕಾರಣರಾಗಿರುವ ಎಲಾನ್ ಮಸ್ಕ್ ಎಲ್ಲೂ ತಮ್ಮ ಹೆಸರನ್ನು ನಮೂದಿಸಿಲ್ಲ ಎಂಬುದು ಸಿಬ್ಬಂದಿಯ ಬೇಸರವಾಗಿದ್ದು, ಇದು ತುಂಬಾ ಕ್ರೂರವಾದ ನಡೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ ವಜಾಗೊಂಡ ಸಿಬ್ಬಂದಿ:
ಯಾವುದೇ ನೊಟೀಸ್ ಇಲ್ಲದೆ ಕೆಲಸದಿಂದ ವಜಾ ಮಾಡಿರುವುದನ್ನು ಪ್ರಶ್ನಿಸಿ ವಜಾಗೊಂಡ ಸಿಬ್ಬಂದಿ ಸ್ಯಾನ್‌ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಕ್ಯಾಲಿಫೋರ್ನಿಯಾ ಕಾನೂನು ಪ್ರಕಾರ, ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ 60 ದಿನಗಳ ಮುಂಚಿತವಾಗಿ ನೋಟಿಸ್ ನೀಡುವುದು ನಿಯಮ. ಈ ನಿಟ್ಟಿನಲ್ಲಿ ಟ್ವಿಟರ್ ಸಂಸ್ಥೆ ಕಾನೂನನ್ನು ಉಲ್ಲಂಘಿಸಿ ಏಕಾಏಕಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಭಾರತದಲ್ಲಿ ಶುಕ್ರವಾರ ಕೆಲಕಾಲ ಟ್ವಿಟರ್ ಡೌನ್:
ಟ್ವಿಟರ್ ಸಂಸ್ಥೆ ಮಹತ್ವದ ನಿರ್ಧಾರವನ್ನು ಕೈಗೊಂಡ ಶುಕ್ರವಾರದಂದು ಭಾರತದಲ್ಲಿ ಕೆಲಕಾಲ ಟ್ವಿಟರ್ ಖಾತೆಗಳಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಟ್ವಿಟರ್ ಖಾತೆ ಓಪನ್ ಮಾಡಿದ ಕೂಡಲೇ, ‘ಏನೋ ಲೋಪವಾಗಿದೆ. ಮತ್ತೊಮ್ಮೆ ಪ್ರಯತ್ನಿಸಿ’ ಎಂಬ ಸಂದೇಶ ಬರುತ್ತಿತ್ತು. ಇದಕ್ಕೆ ಬಳಕೆದಾರರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಹಣ ಪಾವತಿಸಿದರಷ್ಟೇ ಟ್ವಿಟರ್‌ನಲ್ಲಿ ನೀಲಿ ಚುಕ್ಕಿ:
ಟ್ವಿಟ್ಟರ್ ಪ್ರೊಫೈಲ್ ಹೆಸರಿನ ಪಕ್ಕದಲ್ಲಿ ನೀಲಿ ಟಿಕ್ ಮಾರ್ಕ್ ಬೇಕಂದ್ರೆ, ತಿಂಗಳಿಗೆ ಹಣ ಪಾವತಿಸುವ ಹೊಸ ಯೋಜನೆ ತರುವ ಬಗ್ಗೆ ಚಿಂತಿಸಿದ್ದು, ಇದು ಶೀಘ್ರದಲ್ಲೇ ಕಾರ್ಯಾಚರಿಸಲಿದೆ.
ಇನ್ನೂ ಈ ಸಂಬಂಧ ಪ್ರಕಟವಾದ ವರದಿಯಂತೆ, ಹೊಸ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಅಧಿಕೃತ ವಿವರಗಳು ಪ್ರಕಟವಾಗದಿದ್ದರೂ, ಈ ವಿಚಾರದ ಬಗ್ಗೆ ಎಲಾನ್ ಚರ್ಚಿಸಿರುವುದು ನಿಜಾಂಶದಿಂದ ಕೂಡಿದೆ. ಕಂಪನಿಯು ಶೀಘ್ರದಲ್ಲೇ ಬ್ಲೂ ಟಿಕ್‌ಗಾಗಿ ಬಳಕೆದಾರರಿಗೆ ಶುಲ್ಕ ವಿಧಿಸುತ್ತದೆ ಹೇಳಲಾಗುತ್ತಿದೆ.