ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಲಿಜ್ ಟ್ರಸ್ – ರಿಷಿ ಸುನಾಕ್ ಹೆಸರು ಮತ್ತೆ ಮುನ್ನೆಲೆಗೆ..!!

ನ್ಯೂಸ್ ಆ್ಯರೋ : ಬ್ರಿಟನ್‌ನ ನೂತನ ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ 44 ದಿನಕ್ಕೇ ಟ್ರಸ್ ರಾಜಿನಾಮೆ ನೀಡಿದ್ದಾರೆ.
ಆರ್ಥಿಕ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲರಾಗಿದ್ದರಿಂದ ರಾಜೀನಾಮೆ ನೀಡಿದ್ದಾಗಿ ಲಿಜ್ ಟ್ರಸ್ ಹೇಳಿದ್ದು, ಬ್ರಿಟನ್ ಪ್ರಧಾನಿ ಲಿಜ್ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಅವರ ನೇತೃತ್ವದ ಸರ್ಕಾರದಿಂದ ಒಬ್ಬೊಬ್ಬರೇ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ಕ್ವಾಸಿ ಕ್ವಾರ್ಟೆಂಗ್ ರಾಜೀನಾಮೆ ನೀಡಿದ್ದು, ಬುಧವಾರ ಕೂಡ ಗೃಹ ಸಚಿವೆ, ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್ ತಮ್ಮ ಸ್ಥಾನಕ್ಕೆ ಅಧಿಕಾರ ತ್ಯಜಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದ ಕುಗ್ಗಿದ ಲಿಜ್ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯ ಅರಾಜಕತೆ ತೀವ್ರಗೊಳ್ಳುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ನಂತರ ಅಧಿಕಾರ ವಹಿಸಿಕೊಂಡ ಕೇವಲ 45 ದಿನಗಳ ನಂತರ ಲಿಜ್ ಟ್ರಸ್ ಯುಕೆಯ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, 50 ದಿನಗಳಿಗಿಂತ ಕಡಿಮೆ ಅವಧಿಗೆ ಅಡಳಿತ ನಡೆಸುವ ಮೂಲಕ ಟ್ರಸ್ ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ. ಇನ್ನು ಮುಂದಿನ ವಾರದೊಳಗೆ ನಾಯಕತ್ವದ ಚುನಾವಣೆ ಪೂರ್ಣಗೊಳ್ಳಲಿದೆ.
“ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನೀಡಿದ ಜನಾದೇಶವನ್ನ ನಾನು ಪೂರೈಸಲು ಸಾಧ್ಯವಿಲ್ಲ ಎಂದು ನಾನು ಅರಿತುಕೊಂಡೆ. ನಾನು ಮಹಾರಾಜರೊಂದಿಗೆ ಮಾತನಾಡಿದೆ ಮತ್ತು ನನ್ನ ನಿರ್ಧಾರದ ಬಗ್ಗೆ ಅವರಿಗೆ ತಿಳಿಸಿದೆ. ಉತ್ತರಾಧಿಕಾರಿಯನ್ನ ಆಯ್ಕೆ ಮಾಡುವವರೆಗೂ ನಾನು ಪ್ರಧಾನಿಯಾಗಿಯೇ ಇರುತ್ತೇನೆ” ಎಂದು ಟ್ರಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನೂ ಈ ಹಿಂದೆ ಬಲಪಂಥೀಯ ಆರ್ಥಿಕತೆಯ ಕಾರ್ಯಸೂಚಿಯಿಂದ ಪ್ರಧಾನಿ ಟ್ರಸ್ ಹಿಂದೆ ಸರಿಯುತ್ತಿದ್ದಂತೆಯೇ ಅವರು ಕೂಡ ಅಧಿಕಾರದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗಿತ್ತು. ಅದರಂತೆಯೇ ಟ್ರಸ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬ್ರಿಟನ್‌ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇತ್ತ ಅಧಿಕಾರಕ್ಕೆ ಏರಿದ ಕೆಲ ದಿನದಲ್ಲೇ ತಮ್ಮ ಪಕ್ಷದ ಸಂಸದರ ವಿಶ್ವಾಸವನ್ನು ಕಳೆದುಕೊಂಡಿರುವ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ರಿಷಿ ಸುನಾಕ್ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಮಾಜಿ ಹಣಕಾಸು ಸಚಿವ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.