ಹಿಜಾಬ್ ಧರಿಸದ್ದಕ್ಕೆ ಹಿಂಸಿಸಿ ಕೊಲೆ, ಯುವತಿ ಸಾವಿನ ವಿರುದ್ಧದ ಪ್ರತಿಭಟನೆಗೆ ಮೆಲೆಕ್ ಮೊಸ್ಸೊ ಬೆಂಬಲ – ಸ್ಟೇಜ್‌ನಲ್ಲಿ ಕೂದಲು ಕತ್ತರಿಸಿದ ಟರ್ಕಿಶ್ ಸಿಂಗರ್, ವಿಡಿಯೋ ವೈರಲ್

ನ್ಯೂಸ್ ಆ್ಯರೋ : ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ. ಇರಾನ್‌ನ 22 ವರ್ಷದ ಮಹಿಳೆ ಮಹ್ಸಾ ಅಮಿನಿ ಹಿಜಾಬ್ ಧರಿಸದ ಹಿನ್ನೆಲೆ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಬಳಿಕ ಇರಾನ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಮಹಿಳೆಯರು ಹಿಬಾಬ್ ಸುಟ್ಟು ಹಾಕುವ ಹಾಗೂ ತಲೆ ಕೂದಲನ್ನು ಕತ್ತರಿಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ. ಇದೀಗ ಟರ್ಕಿಶ್ ಸಿಂಗರ್ ಮೆಲೆಕ್ ಮೊಸ್ಸೊ ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಬೆಂಬಲಿಸಿದ್ದಾರೆ.
ಸಿಂಗರ್ ಮೆಲೆಕ್ ಮೊಸ್ಸೊ ಸ್ಟೇಜ್’ನಲ್ಲಿ ತಲೆ ಕೂದಲು ಕತ್ತರಿಸುವ ಮೂಲಕ ಇರಾನ್‌ನಲ್ಲಿ ಹಿಜಾಬ್ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ. ಮೆಲೆಕ್ ಮೊಸ್ಸೊ ಕೂದಲು ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಿಜಾಬ್ ವಿರುದ್ಧ ಮೆಲೆಕ್ ಮೊಸ್ಸೊ ನಡೆಯನ್ನು ನೆಟ್ಟಿಗರು ಪ್ರಶಂಸಿದ್ದಾರೆ.
ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಕೂದಲನ್ನು ಮತ್ತು ಮುಖವನ್ನು ಮುಚ್ಚಬೇಕು. ಜುಲೈ 5 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಿಜಾಬ್ ಕಾನೂನನ್ನು ಜಾರಿಗೊಳಿಸಲು ಆದೇಶಿಸಿದ ನಂತರ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂದು ನಿಯಮ ರೂಪಿಸಲಾಗಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ಅಪರಾಧಿಗಳೆಂದು ಪರಿಗಣಿಸಿ ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸಬೇಕಾಗುತ್ತದೆ.
ಇರಾನ್‌ನಲ್ಲಿ 22 ವರ್ಷದ ಮಹ್ಸಾ ಅಮಿನಿ ಸಾರ್ವಜನಿಕವಾಗಿ ಹಿಜಾಬ್ ಧರಿಸದಿದ್ದಕ್ಕಾಗಿ ಆಕೆಯನ್ನು ಇರಾನ್‌ನ ನೈತಿಕತೆ ಪೋಲೀಸರು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದಾಗ ತೀವ್ರ ಹಿಂಸೆ ನೀಡಿದ್ದರು. ಕೋಮಾಕ್ಕೆ ಹೋಗಿದ್ದ ಅಮಿನಿ ಬಳಿಕ ಸಾವನ್ನಪ್ಪಿದ್ದರು. ಈ ಘಟನೆ ಇರಾನ್ ದೇಶಾದ್ಯಂತ ಆಕ್ರೋಶಕ್ಕೆ ತಿರುಗಿದೆ. ಸಾವಿರಾರು ಇರಾನಿನ ಮಹಿಳೆಯರು ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕುರ್ದಿಸ್ತಾನ್ ಪ್ರದೇಶದ ಆಕೆಯ ಹುಟ್ಟೂರಾದ ಸಾಕೆಜ್‌ನಲ್ಲಿ ಅಮಿನಿಯ ಅಂತ್ಯಕ್ರಿಯೆಯಲ್ಲೂ ಪ್ರತಿಭಟನೆಗಳು ಭುಗಿಲೆದ್ದಿದ್ದವು.
ಇರಾನ್‌ನ 46 ನಗರಗಳು ಸೇರಿದಂತೆ ಹಳ್ಳಿಹಳ್ಳಿಯಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಯಲ್ಲಿ 75 ಜನರು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇತ್ತಿಚೆಗೆ ಪ್ರತಿಭಟನೆ ವೇಳೆ ಸಾವನ್ನಪ್ಪಿದ ವ್ಯಕ್ತಿ ಸಮಾಧಿ ಮೇಲೆ ಆತನ ಸಹೋದರಿ ತನ್ನ ಕೂದಲು ಕತ್ತರಿಸಿ ಹಾಕುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಟರ್ಕಿಶ್ ಸಿಂಗರ್ ಮೆಲೆಕ್ ಮೊಸ್ಸೊ ಹಿಜಾಬ್ ವಿರುದ್ಧದ ಪ್ರತಿಭಟನೆಗೆ ಬೆಂಬಲಿಸಿ ಕೂದಲು ಕತ್ತರಿಸಿದ್ದು, ಭಾರೀ ವೈರಲ್ ಆಗಿದೆ.