ವಿವಾಹಿತರಿರಲಿ, ಅವಿವಾಹಿತರಿರಲಿ ಎಲ್ಲರೂ ಗರ್ಭಪಾತಕ್ಕೆ ಅರ್ಹರು – ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ನ್ಯೂಸ್ ಆ್ಯರೋ : ದೇಶದ ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯ ವೈವಾಹಿಕ ಸ್ಥಿತಿಯು ಅನಗತ್ಯ ಗರ್ಭಧಾರಣೆಯನ್ನು ಸ್ಥಗಿತಗೊಳಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ ಮತ್ತು ನಿಯಮಗಳ ಅಡಿಯಲ್ಲಿ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು 24 ವಾರಗಳವರೆಗೂ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ತಾರತಮ್ಯವನ್ನು ತೊಡೆದುಹಾಕುವ ಉದ್ದೇಶದಿಂದ 24 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡುವ ನಿಯಮಗಳಿಗೆ ಸಂಬಂಧಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು, ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸವು ಕೃತಕ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಗರ್ಭದಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ್ದು, ಈ ಮಹತ್ವದ ತೀರ್ಪನ್ನು ನೀಡಿದೆ. ಮದುವೆಯಾಗದ ಮಹಿಳೆಯರು ಸುರಕ್ಷಿತ ಮತ್ತು ವೈದ್ಯಕೀಯವಾಗಿ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಡಿಯಲ್ಲಿ ಹಕ್ಕು ಹೊಂದಿದ್ದು, ಮದುವೆ ಆದವರು, ಮತ್ತು ಆಗದವರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಸದ್ಯ ಅವಿವಾಹಿತ ಮಹಿಳೆಯರೂ 24 ವಾರಗಳವರೆಗೆ ಗರ್ಭಪಾತ ಮಾಡಿಸಿ ಕೊಳ್ಳುವ ಹಕ್ಕನ್ನು ಪಡೆದಿದ್ದು, ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳಿಗಿಂತ ಹೆಚ್ಚು ಮತ್ತು 24 ವಾರಗಳಿಗಿಂತ ಕಡಿಮೆ ಅವಧಿಯ ಗರ್ಭಪಾತದ ಹಕ್ಕು ಇವರೆಗೆ ವಿವಾಹಿತ ಮಹಿಳೆಯರಿಗೆ ಮಾತ್ರ ಇತ್ತು. ಆದರೀಗ ಭಾರತದಲ್ಲಿ ಗರ್ಭಪಾತ ಕಾನೂನಿನ ಅಡಿಯಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸುಪ್ರೀಂ ತಿಳಿಸಿದ್ದು, ಒಂಟಿ ಅಥವಾ ಅವಿವಾಹಿತ ಗರ್ಭಿಣಿಯರು ಗರ್ಭಪಾತದಿಂದ 20-24 ವಾರಗಳ ನಡುವೆ ಗರ್ಭಪಾತ ಮಾಡುವುದನ್ನು ನಿಷೇಧಿಸುವುದು, ಅಂತಹ ಪರಿಸ್ಥಿತಿಯಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ನೀಡುವುದು ಸಂವಿಧಾನದ 14 ನೇ ಪರಿಚ್ಛೇದದ ಮನೋಭಾವವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.