1. Home
  2. National
  3. &
  4. International
  5. National
  6. News
  7. ಅನಂತ ಪದ್ಮನಾಭ ದೇಗುಲದ ದೇವರ ಮೊಸಳೆಯ ಬಗ್ಗೆ ನಿಮಗೆಷ್ಟು ಗೊತ್ತು? – ಬಬಿಯಾ ಇತಿಹಾಸ ಹೇಳೋದೇನು?

ಅನಂತ ಪದ್ಮನಾಭ ದೇಗುಲದ ದೇವರ ಮೊಸಳೆಯ ಬಗ್ಗೆ ನಿಮಗೆಷ್ಟು ಗೊತ್ತು? – ಬಬಿಯಾ ಇತಿಹಾಸ ಹೇಳೋದೇನು?

ಅನಂತ ಪದ್ಮನಾಭ ದೇಗುಲದ ದೇವರ ಮೊಸಳೆಯ ಬಗ್ಗೆ ನಿಮಗೆಷ್ಟು ಗೊತ್ತು? – ಬಬಿಯಾ ಇತಿಹಾಸ ಹೇಳೋದೇನು?
0

ನ್ಯೂಸ್ ಆ್ಯರೋ : ಮೊಸಳೆ… ಈ ಶಬ್ದ ಕಿವಿಗೆ ಬಿದ್ದ ತಕ್ಷಣ ನಮ್ಮ ಎದೆ ನಡುಗುತ್ತದೆ. ಅದೇ ಮೊಸಳೆ ಜನರಿದ್ದ ಜಮೀನಿಗೆ ಬಂದರಂತೂ ಎಲ್ಲರೂ ಓಡಿ ಮನೆ ಸೇರುತ್ತಾರೆ. ಹಾಗೂ ಹೀಗೂ ಕಷ್ಟಪಟ್ಟು ಅದನ್ನು ಹಿಡಿದು ಸಂಬಂಧಪಟ್ಟ ಇಲಾಖೆಗೆ ಒಪ್ಪಿಸುವ ತನಕ ಜನರ ಮನಸ್ಸಿನಲ್ಲಿ ನೆಮ್ಮದಿ ಮೂಡುವುದಿಲ್ಲ, ಆತಂಕ ದೂರವಾಗುವುದಿಲ್ಲ. ಜನರಲ್ಲಿ ಮೊಸಳೆ ಸೃಷ್ಟಿಸಿರುವ ಭಯ ಅಂತಹದ್ದು. ಒಮ್ಮೆ ಮೊಸಳೆಯ ಬಾಯಿಗೆ ಬಿದ್ದರೆ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮೊಸಳೆಯ ಕಾರಣದಿಂದಲೇ ಹಲವರು ಜೀವ ಕಳೆದುಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲ್ಲಿದೆ. ಆದರೆ, ಇಂತಹ ಆಕ್ರಮಣ ಪ್ರವೃತ್ತಿಯ ಈ ಮೊಸಳೆ ಶಾಂತಸ್ವರೂಪಿಯಾದರೆ, ಮಾಂಸಾಹಾರವನ್ನಷ್ಟೇ ಸೇವಿಸುವ ತನ್ನ ಸಹಜ ಗುಣವನ್ನು ತ್ಯಜಿಸಿ ಸಸ್ಯಾಹಾರಿಯಾದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಆದರೆ, ಇಂತಹ ವಿಶಿಷ್ಟಗಳಿದ್ದ ದೇವರ ಮೊಸಳೆ ಎಂದೇ ಪ್ರಸಿದ್ಧಿ ಪಡೆದಿದ್ದ ಬಬಿಯಾ ತನ್ನ ದೀರ್ಘ ಬದುಕಿಗೆ ವಿದಾಯ ಹೇಳಿದ್ದು, ಭಾನುವಾರ ತಡರಾತ್ರಿ ಇಹಲೋಕ ತ್ಯಜಿಸಿದೆ.

ಹೌದು.. ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ಮೊಸಳೆ ʼಬಬಿಯಾʼ ನಿಧನವಾಗಿದ್ದು, ಈ ಕ್ಷೇತ್ರದ ಪುಷ್ಕರಿಣಿಯ ಕೆರೆಯ ಮಧ್ಯೆ ಭಾಗದಲ್ಲಿ ವಾಸವಾಗಿದ್ದ ಬಬಿಯಾ “ದೇವರ ಮೊಸಳೆ” ಎಂದೇ ಪ್ರಸಿದ್ಧಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ.

ಆದರೆ ನಿನ್ನೆ ತಡರಾತ್ರಿ ಶ್ರೀ ಅನಂತಪುರಂ ಕ್ಷೇತ್ರದ ಅತಿ ದೊಡ್ಡ ವೈಶಿಷ್ಟ್ಯವಾದ ದೇವಸ್ವರೂಪಿ ‘ಬಬಿಯಾ’ ಮೊಸಳೆ ಕೊನೆಯುಸಿರೆಳೆದಿದ್ದು, ಬಬಿಯಾಗೆ ಸಂಬಂಧಪಟ್ಟ ಕೆಲ ಆಸಕ್ತಿದಾಯಕ ವಿಷಯ ಇಲ್ಲಿದೆ.

ದೇವರ ಮೊಸಳೆ ಎಂದು ಪ್ರಸಿದ್ಧಿ

ಭಾರತ ಅಪರೂಪ ಮತ್ತು ಕೆಲವೊಂದು ಅಸಾಧ್ಯ ಘಟನೆಗಳಿಗೆ ಸಾಕ್ಷಿಯಾದ ನೆಲ. ಸಮೃದ್ಧ ಪ್ರಾಚೀನ ಪರಂಪರೆಯನ್ನು ಹೊಂದಿರುವಂತಹ ಮಣ್ಣಿದು. ಈ ಭೂಮಿ ಅದೆಷ್ಟೋ ರಹಸ್ಯಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಇಂತಹ ಹಲವು ರಹಸ್ಯ ಮತ್ತು ಕೌತುಕಗಳಿಗೆ ಕೇರಳ ಕೂಡಾ ಸಾಕ್ಷಿಯಾಗಿದ್ದು, ಕೇರಳ ದೇವರ ನಾಡು ಎಂದೇ ಪ್ರಸಿದ್ಧಿ. ಇಂತಹ ಕೇರಳದಲ್ಲೊಂದು ಅಪೂರ್ವ ದೇಗುಲವಿದು, ಕರ್ನಾಟಕ, ಕೇರಳದ ಗಡಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆಯರುವ ಅನಂತಪುರ ಕ್ಷೇತ್ರ ಅಪಾರ ಭಕ್ತರನ್ನು ಹೊಂದಿರುವ ದೇವ ಸನ್ನಿಧಿ. ಅನಂತಪುರದ ಅನಂತಪದ್ಮನಾಭ ದೇಗುಲ ವಿಶಾಲ ಕೆರೆಯ ನಡುವೆ ನಿರ್ಮಾಣವಾಗಿದೆ. ಹೀಗಾಗಿಯೇ, ಇದನ್ನು ಸರೋವರ ಕ್ಷೇತ್ರ ಎಂದೂ ಕರೆಯಲಾಗುತ್ತದೆ.

ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರ ಇದು ಎಂಬ ನಂಬಿಕೆಯೂ ಇದೆ. ಇಂತಹ ಸನ್ನಿಧಿಯಲ್ಲಿಯೇ ಇದ್ದ ಅಪೂರ್ವ ಮೊಸಳೆಯೇ ‘ಬಬಿಯಾ’. ಹೆಚ್ಚಿನ ಸಂದರ್ಭಗಳಲ್ಲಿ ದೇವಾಲಯದ ಎಡಬದಿಯಲ್ಲಿರುವ ಗುಹೆಯಲ್ಲಿ ಇರುತ್ತಿತ್ತು. ಮಧ್ಯಾಹ್ನ ದೇವಾಲಯದ ನೈವೇದ್ಯವನ್ನು ಇಟ್ಟು ಮೊಸಳೆಯನ್ನು ಕರೆಯಲಾಗುತ್ತಿತ್ತು. ಈ ಮೊಸಳೆ ಎಷ್ಟು ವರ್ಷಗಳಿಂದ ಇಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ.

ಸಸ್ಯಹಾರಿ ಮೊಸಳೆ

ನೀರಿಗಿಳಿದ ಮನುಷ್ಯರನ್ನು ಬರಸೆಳೆದು ತಿಂದು ಬಿಡುವ ಗುಣ ಮೊಸಳೆಯದ್ದು. ಎಲ್ಲರಿಗೂ ಗೊತ್ತಿರುವಂತೆ ಮೊಸಳೆ ಮಾಂಸಹಾರಿ. ಇಂತಹ ಮೊಸಳೆ ಅನಂತಪದ್ಮನಾಭ ಕ್ಷೇತ್ರದಲ್ಲಿ ತನ್ನ ಸಹಜ ಗುಣವನ್ನೇ ಮರೆತಿತ್ತು. ಅಲ್ಲದೆ, ಇದು ಸಂಪೂರ್ಣ ಸಸ್ಯಹಾರಿಯಾಗಿತ್ತು. ಬಬಿಯಾ ಎಂದೂ ಭಕ್ತರಿಗೆ ತೊಂದರೆ ಕೊಟ್ಟಿಲ್ಲವಂತೆ. ಇದೇ ಕಾರಣದಿಂದ ಬಬಿಯಾನ ಬಗ್ಗೆ ಇಲ್ಲಿ ಎಲ್ಲರಿಗೂ ಭಕ್ತಿ ಇದೆ ಹೊರತು ಭಯವಿಲ್ಲ. ಅದೆಷ್ಟೋ ವರ್ಷಗಳಿಂದ ಈ ಕೆರೆಯಲ್ಲಿ ಮೊಸಳೆ ಕಾಣಿಸಿಕೊಳ್ಳದ ದಿನವೇ ಇಲ್ಲ.

ನೈವೇದ್ಯವೇ ಆಹಾರ

ಬಬಿಯಾ ದೇಗುಲವನ್ನು ಕಾಯುವ ದೈವಾಂಶ ಸಂಭೂತ ಮೊಸಳೆ ಎಂಬುದು ಭಕ್ತರ ನಂಬಿಕೆ. ಪ್ರತಿದಿನ ಮಧ್ಯಾಹ್ನದ ಮಹಾಪೂಜೆಯ ಬಳಿಕ ಅರ್ಚಕರು ಕೆರೆಯ ಪಕ್ಕ ಬಂದು ಬಬಿಯಾಗೆ ನೈವೇದ್ಯ ನೀಡುತ್ತಿದ್ದರು. ಅನ್ನ ಮತ್ತು ಬೆಲ್ಲದಿಂದ ಮಾಡಿದ ನೈವೇದ್ಯವನ್ನು ಈ ಮೊಸಳೆಗೆ ನೀಡಲಾಗುತ್ತಿತ್ತು. ಪ್ರಸಾದ ಸೇವಿಸಿದ ಬಳಿಕ ಬಬಿಯಾ ಬಳಿಕ ಯಥಾಪ್ರಕಾರ ನೀರಿನಲ್ಲಿ ಮರೆಯಾಗುತ್ತಿತ್ತು.

ಅನಂತಪದ್ಮನಾಭನಿಗೆ ಕಾವಲುಗಾರವಾಗಿದ್ದ ‘ಬಬಿಯಾ’

ದೇವಾಲಯದ ಸರೋವರದ ನಡುವಿನಲ್ಲಿ ನೆಲೆಸಿರುವ ಅನಂತಪದ್ಮನಾಭನನ್ನು ಮೊಸಳೆ ಬಬಿಯಾ ಕಾವಲು ಕಾಯುವ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಇತ್ತು. ಕೆಲವೊಮ್ಮೆ ಬಬಿಯಾ ಈ ಕೆರೆಯಿಂದ ಹೊರಬಂದು ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿತ್ತು. ಆದರೆ ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳಿಲ್ಲ. ಕೆಲ ವರ್ಷಗಳ ಹಿಂದೆ ಕೆರೆಯಿಂದ ಹೊರಬಂದು ದೇವಾಲಯದ ಒಳಗೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ಅರ್ಚಕರು ಇದನ್ನು ಮುಟ್ಟಿ, ಹಣಿಹಚ್ಚಿ ಪ್ರಸಾದ ನೀಡಿದ್ದರು ಎನ್ನಲಾಗಿದೆ.

ಏಳು ದಶಕದಿಂದ ವಾಸ

ಕಳೆದ 70 ವರ್ಷಗಳಿಂದ ಬಬಿಯಾ ಮೊಸಳೆ ಈ ದೇವಸ್ಥಾನದ ಕಲ್ಯಾಣಿಯಲ್ಲಿದೆ ಎಂದು ಹೇಳಲಾಗ್ತಿದ್ದು, ದೇವಸ್ಥಾನದಲ್ಲಿ ನಡೆಯುವ ಮಹಾಪೂಜೆಯ ವೇಳೆ ದೇಗುಲದ ಹತ್ತಿರ ಬರುತ್ತಿತ್ತು. ಪ್ರತಿದಿನ ಎರಡು ಬಾರಿ ಪೂಜೆಯ ನಂತರ ಅರ್ಚಕರು ಈ ಮೊಸಳೆಗೆ ದೇವರ ನೈವೇದ್ಯ ಹಾಕುತ್ತಿದ್ದರು. ದೇವರ ಮೊಸಳೆ ಎಂದೇ ಖ್ಯಾತಿ ಪಡೆದಿದ್ದ ಈ ಮೊಸಳೆ ದೇಗುಲಕ್ಕೆ ಬರುವ ಭಕ್ತರಿಗೆ ದರ್ಶನ ನೀಡುತ್ತಿತ್ತು. ಆದರೆ ಈ ಮೊಸಳೆ ಇಲ್ಲಿಗೆ ಹೇಗೆ ಬಂತು ಎಂಬುದು ಯಾರಿಗೂ ಗೊತ್ತಿಲ್ಲ.

ಪವಾಡ ಮೊಸಳೆ ‘ಬಬಿಯಾ’

ಇದೇ ಬಬಿಯಾ ಮೊಸಳೆ ಬಗೆಗೆ ಇನ್ನೊಂದು ಕತೆ ಇದೆ. ಅದೇನೆಂದರೆ ಸುಮಾರು 70 ವರ್ಷಗಳ ಹಿಂದೆ ಬ್ರಿಟಿಷ್ ಸೈನಿಕನೊಬ್ಬ ಅನಂತಪುರ ಸರೋವರ ದೇವಸ್ಥಾನದಲ್ಲಿ ಕಾವಲಿದ್ದ ಇದೇ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದನಂತೆ. ಆದರೆ, ಅಚ್ಚರಿಯೆಂಬಂತೆ ಮರುದಿನ ಯಥಾಪ್ರಕಾರ ಕೆರೆಯಲ್ಲಿ ಬೇರೊಂದು ಮೊಸಳೆ ಕಾಣಿಸಿಕೊಂಡಿತ್ತಂತೆ. ಜೊತೆಗೆ, ಮೊಸಳೆಗೆ ಗುಂಡಿಕ್ಕಿದ್ದ ಆ ಬ್ರಿಟಿಷ್ ಸೈನಿಕ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದನಂತೆ. ಸರ್ಪಗಳ ದೇವತೆ ಅನಂತಪದ್ಮನಾಭ ಸ್ವಾಮಿಯ ಕೋಪದ ಕಾರಣದಿಂದಲೇ ಈ ಸೈನಿಕ ಸಾವನ್ನಪ್ಪಿದ್ದ ಎಂಬುದು ಇಲ್ಲಿನ ಭಕ್ತರ ಬಲವಾದ ನಂಬಿಕೆ. ಹೀಗೆ ಈ ಸನ್ನಿಧಿಯಲ್ಲಿ ಬಬಿಯಾ ಕೂಡಾ ಭಕ್ತರನ್ನು ಸೆಳೆಯುತ್ತಿತ್ತು.

ಪೌರಾಣಿಕ ಹಿನ್ನಲೆ

ಕೆರೆಯಲ್ಲಿ ಮೊಸಳೆ ನೆಲೆಸಿರುವುದಕ್ಕೆ ಮತ್ತೊಂದು ಅದ್ಭುತ ಹಿನ್ನೆಲೆ ಇದೆ. ಇದು ಶ್ರೀಕೃಷ್ಣನಿಗೆ ಸಂಬಂಧಿಸಿದ ಕತೆ. ಶ್ರೀವಿಲ್ವಮಂಗಲತು ಸ್ವಾಮಿ ಭಗವಾನ್ ವಿಷ್ಣು ಅವರ ಪರಮ ಭಕ್ತರಾಗಿದ್ದರು. ಇವರು ವಿಷ್ಣುವನ್ನು ಧ್ಯಾನಿಸಿ ತಪಸ್ಸನ್ನು ಮಾಡುತ್ತಿದ್ದರಂತೆ. ಈ ವೇಳೆ, ಇವರನ್ನು ಪರೀಕ್ಷಿಸಲು ಶ್ರೀಕೃಷ್ಣ ಬಾಲಕನ ರೂಪದಲ್ಲಿ ಬಂದು ಇವರ ತಪಸ್ಸಿಗೆ ಭಂಗ ತಂದಿದ್ದು, ಇದರಿಂದ ಕುಪಿತಗೊಂಡ ಶ್ರೀವಿಲ್ವಮಂಗಲತು ಸ್ವಾಮಿಗಳು ಕೃಷ್ಣನನ್ನು ಪಕ್ಕದಲ್ಲೇ ಇದ್ದ ಕೆರೆಗೆ ತಳ್ಳಿದ್ದರಂತೆ. ಆದರೆ, ತಾನು ಮಾಡಿದ್ದು ತಪ್ಪೆಂದು ಸ್ವಾಮೀಜಿಗಳಿಗೆ ಅರಿವಾಗುವಷ್ಟರಲ್ಲಿ ಬಾಲಕ ಶ್ರೀಕೃಷ್ಣನು ಕೆರೆಯಲ್ಲಿದ್ದ ಗುಹೆಯೊಳಗೆ ಕಣ್ಮರೆಯಾಗಿದ್ದಾಗಿ ಕತೆ ಇದೆ. ಶ್ರೀಕೃಷ್ಣ ಅದೃಶ್ಯವಾದಾಗ ಉಂಟಾದ ಬಿರುಕು ದೇಗುಲದ ಒಳಗೆ ಎಲ್ಲೋ ಇದೆಯಂತೆ. ಈ ಪ್ರವೇಶದ್ವಾರವನ್ನು ಬಬಿಯಾ ರಕ್ಷಿಸುತ್ತಿದ್ದಾನಂತೆ.

ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರದಲ್ಲಿ, ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿ ಅನಂತಪುರ ದೇವಾಲಯವಿದೆ. ಇದು ಕೆರೆಯ ನಡುವಿನಲ್ಲಿದೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲಸ್ಥಾನವೆಂಬುದು ಪುರಾಣ ಕಥೆಗಳಲ್ಲಿದೆ. ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ದಂತಕಥೆ. ಇಲ್ಲಿನ ದೇವರ ಮೂರ್ತಿಯನ್ನು ಕಡುಶರ್ಕರ ಪಾಕದಿಂದ ಸಿದ್ಧಪಡಿಸಲಾಗಿದೆ. ಇಲ್ಲಿ ಎರಡು ಕೆರೆಗಳು, ಮಹಾಗಣಪತಿ, ಗೋಪಾಲಕೃಷ್ಣ, ರಕ್ತೇಶ್ವರಿ, ವನಶಾಸ್ತಾರ ಗುಡಿಗಳಿವೆ.

ವಿಡಿಯೋ ನೋಡಿ

ಬಬಿಯಾ ಇನ್ನಿಲ್ಲವಾದ ಸುದ್ದಿ ತಿಳಿಯುತ್ತಲೇ ಇಂದು ಬೆಳಗ್ಗೆಯಿಂದಲೇ ಭಕ್ತರು ಸಾಲು ಸಾಲಾಗಿ ಆಗಮಿಸಿ ಬಬಿಯಾಗೆ ಅಂತಿಮ ನಮನ ಸಲ್ಲಿಸಿದರು. ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ದಫನ ಕಾರ್ಯ ನಡೆಸಲು ಸಿದ್ಧತೆ ಮಾಡಲಾಗಿದೆ. ಇದಕ್ಕೂ ಮೊದಲು ವೈದಿಕರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆದಿದೆ. ಕುಂಟಾರು ರವೀಶ ತಂತ್ರಿಗಳು ಆಗಮಿಸಿದ್ದು, ಕ್ಷೇತ್ರದ ತಂತ್ರಿಗಳಾದ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಕಾಸರಗೋಡು ಜಿಲ್ಲೆಯ ಸಂಸದರು, ಶಾಸಕರು ಸಹಿತ ವಿವಿಧ ಗಣ್ಯರು ಆಗಮಿಸಿ ಅಂತಿಮ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..