ಗುಜರಾತ್ ತೂಗು ಸೇತುವೆ ದುರಂತಕ್ಕೆ 141 ಬಲಿ, ಹಲವರು ಕಣ್ಮರೆ – ಪ್ರವಾಸಿಗರ ಹುಚ್ಚಾಟವೇ ದುರ್ಘಟನೆಗೆ ಕಾರಣವಾಯಿತೇ..?

ನ್ಯೂಸ್ ಆ್ಯರೋ : ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆ ದುರಂತದಲ್ಲಿ ಇದೀಗ ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. 177 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನು ಹಲವು ಮಂದಿ ನಾಪತ್ತೆಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 19 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ದುರಂತದಲ್ಲಿ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರ ಕುಟುಂಬದ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ.
230 ಮೀಟರ್ ಉದ್ದದ ಈ ಸೇತುವೆಯನ್ನು 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ನವೀಕರಣ ಕಾರ್ಯದ ಹಿನ್ನೆಲೆ ಈ ಸೇತುವೆಗೆ ಆರು ತಿಂಗಳು ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್ 26) ಇದು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗಿದ್ದು, ಇದೀಗ ದೊಡ್ಡ ಅವಘಡ ಸಂಭವಿಸಿದೆ.

ಗುಜರಾತ್ ಸಚಿವ ಬ್ರಿಜೇಶ್ ಮೆರ್ಜಾ ಈ ಸಂಬಂಧ ಪ್ರತಿಕ್ರಿಯಿಸಿ,, ‘ಸೇತುವೆ ನವೀಕರಣಗೊಂಡು ಕೆಲವೇ ದಿನಗಳಲ್ಲಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ತನಿಖೆ ಮಾಡಲಾಗುತ್ತಿದ್ದು, ಈ ಅವಘಡದ ಸಂಪೂರ್ಣ ಹೊಣೆಯನ್ನು ಸರ್ಕಾರದ ಮೇಲಿದೆ’ ಎಂದಿದ್ದಾರೆ.
ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ರಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ ₹50 ಪರಿಹಾರವನ್ನು ಘೋಷಣೆ ಮಾಡಿದೆ. ಅದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಪ್ರವಾಸಿಗರ ಹುಚ್ಚಾಟವೇ ದುರ್ಘಟನೆಗೆ ಕಾರಣ:
ತೂಗು ಸೇತುವೆ ದುರಂತಕ್ಕೆ ಪ್ರವಾಸಿಗರ ಉಡಾಫೆ ವರ್ತನೆ ಹಾಗೂ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕುಟುಂಬ ಸಮೇತರಾಗಿ ತೂಗು ಸೇತುವೆ ಬಳಿ ಬಂದ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, ಪ್ರವಾಸಿಗರು ತೂಗು ಸೇತುವೆಯನ್ನು ಅಲ್ಲಾಡಿಸಿದ್ದರಿಂದ ಈ ದುರ್ಘಟನೆ ನಡೆದಿದೆ. ಮೋರ್ಬಿಯ ತೂಗುಸೇವೆ ನೋಡಲು ನಾವು ಕುಟುಂಬ ಸಮೇತರಾಗಿ ತೆರಳಿದ್ದೆವು. ಸೇತುವೆಯ ಮೇಲೆ ನಿಂತಿದ್ದ ಕೆಲ ಯುವಕರು ಅದನ್ನು ಅಲ್ಲಾಡಿಸುತ್ತಿದ್ದರು. ಭಯದಿಂದ ನಾವು ಸೇತುವೆಯಲ್ಲಿ ಮುಂದೆ ಸಾಗದೆ ವಾಪಾಸ್ ಬಂದೆವು. ನಾವು ಮರಳಿದ ಕೆಲ ಗಂಟೆಗಳಲ್ಲೇ ಈ ಘಟನೆ ನಡೆದಿದೆ ಎಂದಿದ್ದಾರೆ.