1. Home
  2. National
  3. &
  4. International
  5. National
  6. News
  7. ಪಬ್ಲಿಕ್‌ನಲ್ಲಿ ಧಮ್ ಹೊಡೆದರೆ ಹುಷಾರ್‌ – ಜಿಪಿಎಸ್ ಆಧಾರಿತ ಆ್ಯಪ್‌ನಲ್ಲಿ ಟ್ರ್ಯಾಪ್‌ಗೆ ಸಿದ್ಧತೆ, ಎಚ್ಚರ ತಪ್ಪಿದರೆ ನಿಮ್ಮ ಫೋಟೋ ಖಾಕಿ ಪಡೆಗೆ..!!

ಪಬ್ಲಿಕ್‌ನಲ್ಲಿ ಧಮ್ ಹೊಡೆದರೆ ಹುಷಾರ್‌ – ಜಿಪಿಎಸ್ ಆಧಾರಿತ ಆ್ಯಪ್‌ನಲ್ಲಿ ಟ್ರ್ಯಾಪ್‌ಗೆ ಸಿದ್ಧತೆ, ಎಚ್ಚರ ತಪ್ಪಿದರೆ ನಿಮ್ಮ ಫೋಟೋ ಖಾಕಿ ಪಡೆಗೆ..!!

ಪಬ್ಲಿಕ್‌ನಲ್ಲಿ ಧಮ್ ಹೊಡೆದರೆ ಹುಷಾರ್‌ – ಜಿಪಿಎಸ್ ಆಧಾರಿತ ಆ್ಯಪ್‌ನಲ್ಲಿ ಟ್ರ್ಯಾಪ್‌ಗೆ ಸಿದ್ಧತೆ, ಎಚ್ಚರ ತಪ್ಪಿದರೆ ನಿಮ್ಮ ಫೋಟೋ ಖಾಕಿ ಪಡೆಗೆ..!!
0

ನ್ಯೂಸ್ ಆ್ಯರೋ : ಆರೋಗ್ಯ ಇಲಾಖೆ ‘ಸ್ಟಾಪ್ ಟೊಬ್ಯಾಕೋ’ ಆ್ಯಪ್‌ ಅನ್ನು ಸಿದ್ಧಪಡಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ. ಈ ಆಪ್ ಮೂಲಕ ಸಾರ್ವಜನಿಕವಾಗಿ ಬೀಡಿ, ಸಿಗರೇಟ್ ಸೇದುತ್ತಿರುವುದನ್ನು ಕಂಡರೆ ಜನರೇ ಫೋಟೋ ತೆಗೆದು ಆಪ್​ಗೆ ಅಪ್​ಲೋಡ್ ಮಾಡಬಹುದು. ಫೋಟೋವನ್ನು ನೋಡಿ ಅಧಿಕಾರಿಗಳು ದಂಡವನ್ನು ವಿಧಿಸುತ್ತಾರೆ. ಈ ನಿಯಮ ಶೀಘ್ರದಲ್ಲೇ ಜಾರಿಯಾಗಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮುನ್ನ ಎಚ್ಚರ ವಹಿಸುವುದು ಉತ್ತಮ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದ ಇತರರಿಗೆ ಕಿರಿಕಿರಿ ಆಗುವುದರ ಜತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಅದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ವರ್ಷಾಂತ್ಯದ ವೇಳೆಗೆ ಜಿಪಿಎಸ್ ಆಧಾರಿತ ಆ್ಯಪ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಆ್ಯಪ್ ಬಳಸುವುದು ಹೇಗೆ?

ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರು ಪ್ಲೇಸ್ಟೋರ್​ಗೆ ಹೋಗಿ ‘ಸ್ಟಾಪ್ ಟೊಬ್ಯಾಕೋ’ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದರೆ ಆ ಸ್ಥಳದ ಚಿತ್ರ ತೆಗೆದು ಆಪ್​ನಲ್ಲಿ ಅಪ್​ಲೋಡ್ ಮಾಡಬೇಕು. ನಂತರ ಕೇಳುವ ಜಿಲ್ಲೆ, ತಾಲೂಕು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳಿಗೆ ಉತ್ತರಿಸಿ ಫೋಟೋವನ್ನು ಅಪ್‌ಲೋಡ್‌ ಮಾಡಬೇಕು.

ತಂಬಾಕು ನಿಷೇಧ ಜಾಗೃತಿ:

ಆ್ಯಪ್‌ನಲ್ಲಿ ಅಪ್ಲೋಡ್‌ ಆಗುವ ಫೋಟೋ ಜಿಲ್ಲೆಯ ತಂಬಾಕು ನಿಯಂತ್ರಣಾ ಘಟಕಕ್ಕೆ ರವಾನೆಯಾಗಲಿದೆ. ಅಲ್ಲಿಂದ ಅದನ್ನು ತಾಲೂಕು ನಿಯಂತ್ರಣಾ ಘಟಕಕ್ಕೆ ಕಳುಹಿಸಲಾಗುವುದು. ಆ್ಯಪ್ ಜಿಪಿಎಸ್ ತಂತ್ರಜ್ಞಾನ ಹೊಂದಿರುವುದರಿಂದ ದೂರು ಬಂದಿರುವ ನಿರ್ದಿಷ್ಟ ಸ್ಥಳವನ್ನು ಮ್ಯಾಪ್ ಮೂಲಕ ತೋರಿಸಲಿದೆ. ಈ ಆ್ಯಪ್‌ನಲ್ಲಿ ತಂಬಾಕು ನಿಷೇಧದ ಪೋಸ್ಟರ್​ಗಳನ್ನು ಸಹ ಪ್ರದರ್ಶಿಸಲಿದೆ. ಅದನ್ನು ಡೌನ್​ಲೋಡ್ ಮಾಡಿ ಪ್ರಿಂಟ್ ತೆಗೆದು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬಹುದಾಗಿದೆ.

ಕೋಟ್ಪಾ ಕಾನೂನು ಶೀಘ್ರದಲ್ಲೇ ಜಾರಿಗೆ:

ಈ ಹಿಂದೆ 10 ಜಿಲ್ಲೆಗಳಲ್ಲಿ ಕೋಟ್ಪಾ ಕಾನೂನನ್ನು ಜಾರಿಗೊಳಿಸಲಾಗಿತ್ತು. ಕೋವಿಡ್​ನಿಂದಾಗಿ ಅದಕ್ಕೆ ಹಿನ್ನಡೆಯಾಯಿತು. ಆಗ ಇ-ಮೇಲ್ ಮೂಲಕ ಸಂದೇಶ ಕಳುಹಿಸಬೇಕಿತ್ತು. ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲೂ ಕೋಟ್ಪಾ ಕಾನೂನನ್ನು ಜಾರಿಗೆ ತರ ಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರ ಅನುಸಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಅಂತಹ ಸ್ಥಳದ ಛಾಯಾಚಿತ್ರ ತೆಗೆದು ‘ಸ್ಟಾಪ್ ಟೊಬ್ಯಾಕೋ’ ಆಪ್​ಗೆ ರವಾನಿಸಿದರೆ, ತಂಬಾಕು ನಿಯಂತ್ರಣಾ ಸ್ಕಾವಡ್ ನಿರ್ದಿಷ್ಟ ಸ್ಥಳಕ್ಕೆ ತೆರಳಿ, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಿದೆ. ಅಗತ್ಯಬಿದ್ದರೆ ಶಿಸ್ತು ಕ್ರಮವನ್ನೂ ಕೈಗೊಳ್ಳಲಿದೆ.

ಸ್ಕ್ವಾಡ್ ರಚನೆ: ಪ್ರತಿ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿ, ತಹಶೀಲ್ದಾರ್, ಸರ್ಕಲ್ ಇನ್​ಸ್ಪೆಕ್ಟರ್, ಹೆಲ್ತ್ ಇನ್​ಸ್ಪೆಕ್ಟರ್, ಪಿಡಿಒ ಹಾಗೂ ಇಬ್ಬರು ಪೊಲೀಸರನ್ನು ಒಳಗೊಂಡ ಸ್ಕಾವಡ್ ರಚಿಸಲಾಗಿದೆ. ಆ್ಯಪ್ ಮೂಲಕ ಬರುವ ಸಂದೇಶ ಆಧರಿಸಿ ನಿರ್ದಿಷ್ಟ ಸ್ಥಳಕ್ಕೆ ತೆರಳಿ ಕಟ್ಟು ನಿಟ್ಟಿನ ಕ್ರಮ ಕೈಗೊಳಲಾಗುವುದು.

ಅಂಗಡಿ ಮಾಲೀಕನ ಮೇಲೂ ಕ್ರಮ:

ಆ್ಯಪ್​ನ ದೂರಿನ ಅನುಸಾರ ಸ್ಥಳಕ್ಕೆ ತೆರಳಿ ಧೂಮಪಾನ ಮಾಡಿದ ವ್ಯಕ್ತಿಯ ಮೇಲೆ ಹಾಗೂ ಧೂಮಪಾನ ಮಾಡಲು ಅವಕಾಶ ನೀಡಿದ ಅಂಗಡಿ ಮಾಲೀಕನಿಗೂ ದಂಡ ವಿಧಿಸಲಿದೆ. ಪ್ರತಿ ವ್ಯಕ್ತಿಗೆ 200 ರೂ. ದಂಡ ವಿಧಿಸಲಾಗುವುದು. ದಂಡದ ರಶೀದಿ ನೀಡಲು ಎಲೆಕ್ಟ್ರಾನಿಕ್ ಬಿಲ್ಲಿಂಗ್ ಯಂತ್ರ ನೀಡಲು ನಿರ್ಧರಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರದಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಆಯಾ ದಿನದ ದಂಡ ವಸೂಲಿಯ ವಿವರ ಅಂದೇ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.