ರಾಜೀವ್ ಗಾಂಧಿ ಹತ್ಯೆ ಪ್ರಕರಣದ 6 ಮಂದಿ ಬಿಡುಗಡೆ – ಗಾಂಧಿ ಕುಟುಂಬಕ್ಕೆ ಕ್ಷಮೆ ಕೇಳಿದ ನಳಿನಿ : ಬಿಡುಗಡೆಯ ಹಿಂದೆ ಸೋನಿಯಾ ಕೈವಾಡ..!!

ನ್ಯೂಸ್ ಆ್ಯರೋ : ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 32 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ನಳಿನಿ ಶ್ರೀಹರನ್ ಸೇರಿ 6 ಮಂದಿಯನ್ನು ಜೈಲಿನಿಂದ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ನಳಿನಿ ಅವರು ರಾಜೀವ್ ಗಾಂಧಿ ಕುಟುಂಬದ ಬಳಿ ಕ್ಷಮೆ ಕೇಳಿ ಅವರಿಗೆ ನೋವು ಮರೆಯುವ ಶಕ್ತಿಯನ್ನು ಆ ದೇವರು ನೀಡಲಿ. ಗಾಂಧಿ ಕುಟುಂಬದವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ, ಒಂದಲ್ಲಾ ಒಂದು ದಿನ ಈ ನೋವಿನಿಂದ ಹೊರಬರುತ್ತಾರೆ ಎಂದಿದ್ದಾರೆ.
ನಾನು ಜೈಲಿನಿಂದ ಬಿಡುಗಡೆಯಾಗಲು ಜಯಲಲಿತಾ ಅವರು ಮೊದಲು ಮುಂದಾಗಿದ್ದರು. ನನ್ನನ್ನು ಬೆಂಬಲಿಸಿದ ತಮಿಳುನಾಡಿನ ಜನತೆಗೆ ನಾನು ಕೃತಜ್ಞಳಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡಕ್ಕೂ ಅಭಾರಿಯಾಗಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಗಾಂಧಿ ಕುಟುಂಬವನ್ನು ಭೇಟಿಯಾಗುವ ಯಾವುದೇ ಯೋಜನೆಯಿಲ್ಲ. ನನ್ನ ಬಿಡುಗಡೆಗಾಗಿ ಕುಟುಂಬ ಕಾಯುತ್ತಿದ್ದು, ಮುಂದಿನ ದಿನಗಳನ್ನು ಪತಿ ಹಾಗೂ ಕುಟುಂಬದೊಂದಿಗೆ ಬದುಕಲು ಇಚ್ಛಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನು ಶನಿವಾರ ಸಂಜೆ ತಮಿಳುನಾಡಿನ ವಿವಿಧ ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ನಳಿನಿ ಶ್ರೀಹರನ್, ಅವರ ಪತಿ ವಿ ಶ್ರೀಹರನ್, ಜೊತೆಗೆ ಸಂತನ್, ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ರವಿಚಂದ್ರನ್ ಸೇರಿದ್ದಾರೆ. ಅವರಲ್ಲಿ ಶ್ರೀಹರನ್ ಮತ್ತು ಸಂತನ್ ಶ್ರೀಲಂಕಾದ ಪ್ರಜೆಗಳು. ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿ,. ದಾಖಲೆ ಪತ್ರಗಳ ಕೆಲಸ ಮುಗಿಸಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರ್‌ನಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ ಈ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ 6 ಮಂದಿಯನ್ನು ಬಂಧಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಜೀವಾವಧಿ ಶಿಕ್ಷೆಯಾಗಿ ತಗ್ಗಿಸಿದ ಸೋನಿಯಾ ಗಾಂಧಿ :
ರಾಜೀವ್ ಗಾಂಧಿ ಅವರ ಪತ್ನಿ, ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಧ್ಯಪ್ರವೇಶದಲ್ಲಿ ನಳಿನಿ ಶ್ರೀಹರನ್‌ಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ 2000ರಲ್ಲಿ ತಗ್ಗಿಸಿದ್ದರು. ರಾಜೀವ್ ಅವರ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ, 2008ರಲ್ಲಿ ವೆಲ್ಲೋರ್ ಜೈಲಿನಲ್ಲಿ ನಳಿನಿಯನ್ನು ಭೇಟಿ ಮಾಡಿದ್ದರು.