ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ವೈರಲ್ ಪ್ರಕರಣ – ಲವರ್ ಗಾಗಿ ವಿಡಿಯೋ ಮಾಡುತ್ತಿದ್ದಳಾ ಆರೋಪಿತ ವಿದ್ಯಾರ್ಥಿನಿ? ಫ್ಲೊರೆನ್ಸಿಕ್ ವರದಿಯತ್ತ ಎಲ್ಲರ ಚಿತ್ತ…!!

ನ್ಯೂಸ್ ಆ್ಯರೋ : ಚಂಡೀಗಢ ಯೂನಿವರ್ಸಿಟಿಯ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶದಲ್ಲಿ ಯೋಧನೊಬ್ಬನನ್ನು ಬಂಧಿಸಲಾಗಿದೆ.

ಬಂಧಿತ ಯೋಧನನ್ನು ಸಂಜೀವ್ ಸಿಂಗ್ ಎಂದು ಗುರುತಿಸಲಾಗಿದೆ.
ರಹಸ್ಯವಾಗಿ ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಆರೋಪದಲ್ಲಿ ಈಗಾಗಲೇ ಬಂಧನವಾಗಿರುವ ಆರೋಪಿ ವಿದ್ಯಾರ್ಥಿನಿಯ ಲವರ್ ಎಂದು ತಿಳಿದುಬಂದಿದೆ. ಆರೋಪಿ ವಿದ್ಯಾರ್ಥಿನಿ ಜೊತೆ ತನಗಿರುವ ಸಂಬಂಧ ಏನು ಎಂಬುದನ್ನು ಆರೋಪಿ ಸಿಂಗ್ ಮೊಹಾಲಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಯೋಧ ಸಿಂಗ್ ಮತ್ತು ಆರೋಪಿ ವಿದ್ಯಾರ್ಥಿನಿ ಇಬ್ಬರು ಸಾಮಾಜಿಕ ಜಾಲತಾಣ ಮೂಲಕ ಮೊದಲು ಪರಿಚಿತರಾದರು. ಬಳಿಕ ಇಬ್ಬರು ತಂತಮ್ಮ ಮೊಬೈಲ್ ನಂಬರ್ಗಳನ್ನು ವಿನಿಮಯ ಮಾಡಿಕೊಂಡರು. ಅಶ್ಲೀಲ ವಿಡಿಯೋಗಳನ್ನು ಸಿಂಗ್ ಜೊತೆಗೂ ಆರೋಪಿ ವಿದ್ಯಾರ್ಥಿನಿ ಹಂಚಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇನ್ನು ತಿಳಿದುಬಂದಿಲ್ಲ. ಸದ್ಯ ಪೊಲೀಸರು ಸಿಂಗ್ ಬಳಿಯಿದ್ದ ಎರಡು ಮೊಬೈಲ್ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಇದರ ಮಧ್ಯೆ ಇಂದಿಗೆ ಆರೋಪಿ ವಿದ್ಯಾರ್ಥಿನಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತ ರಂಕಜ್ನ ಪೊಲೀಸ್ ರಿಮ್ಯಾಂಡ್ ಮುಗಿಯಲಿದೆ. ಮೊಬೈಲ್ ಫೋನ್‌ಗಳು ಮತ್ತು ಆರೋಪಿ ವಿದ್ಯಾರ್ಥಿನಿಯ ಲ್ಯಾಪ್‌ಟಾಪ್‌ನ ಫೊರೆನ್ಸಿಕ್ ವರದಿಗಾಗಿ ಪೊಲೀಸರು ಕುತೂಹಲದಿಂದ ಕಾಯುತ್ತಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿರ್ದೇಶನದ ಮೇರೆಗೆ, ಪ್ರಕರಣದ ತನಿಖೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ವಿಶ್ವವಿದ್ಯಾನಿಲಯವು ಸಹ ಒಂಬತ್ತು ಸದಸ್ಯರ ಸಮಿತಿಯನ್ನು ಸಹ ರಚಿಸಿದೆ. ಇಡೀ ಪ್ರಕರಣಕ್ಕೆ ಫ್ಲೊರೆನ್ಸಿಕ್ ವರದಿ ಪ್ರಮುಖ ತಿರುವನ್ನು ನೀಡಲಿದೆ. ವಿದ್ಯಾರ್ಥಿನಿ ವಿಡಿಯೋಗಳನ್ನು ಚಿತ್ರೀಕರಣ ಮಾಡಿದ್ದಾಳೋ? ಇಲ್ಲವೋ? ಎಂಬುದು ಬಯಲಾಗಲಿದೆ.