ಇನ್ಮುಂದೆ ದುಡ್ಡು ಕೊಟ್ರೂ ವರ್ಷಕ್ಕೆ 15ಕ್ಕಿಂತ ಹೆಚ್ಚು ಮನೆಬಳಕೆಯ ಸಿಲಿಂಡರ್ ಸಿಗಲ್ಲ..!! – ಮಿತಿ ಹೇರಲು ತೈಲ ಕಂಪನಿಗಳು ಸಜ್ಜು, ಸಾರ್ವಜನಿಕರ ವ್ಯಾಪಕ ಆಕ್ರೋಶ..

ನ್ಯೂಸ್ ಆ್ಯರೋ : ಮೊದಲೇ ಬೆಲೆಯೇರಿಕೆ ಬಿಸಿಯಿಂದ ಬೆಳಲಿ ಬೆಂಡಾದ ಜನರಿಗೆ ತೈಲ ಕಂಪನಿಗಳು ಈಗ ಮತ್ತೊಂದು ಶಾಕ್ ನೀಡಲು ಮುಂದಾಗಿವೆ. ಸಬ್ಸಿಡಿ ರಹಿತ ಗೃಹ ಬಳಕೆ ಸಿಲಿಂಡರ್ ಗಳ ಖರೀದಿಗೆ ಮಿತಿ ಹೇರಲು ಮುಂದಾಗಿದ್ದು, ಈ ನಿಯಮ ಜಾರಿಗೆ ಬಂದರೆ ವಾರ್ಷಿಕ ಕೇವಲ 15 ಸಿಲಿಂಡರ್ ಗಳನ್ನಷ್ಟೇ ಇನ್ನು ಮುಂದೆ ಖರೀದಿಸುವ ಹಕ್ಕಿರಲಿದೆ…!!
ಈಗಾಗಲೇ ಸಬ್ಸಿಡಿ ರಹಿತ ಗೃಹ ಬಳಕೆ ಸಿಲಿಂಡರ್ ಗಳು ದುರ್ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಈ ಕ್ರಮಕ್ಕೆ ಮುಂದಾಗಿದ್ದು, ತಿಂಗಳಿಗೆ ಗರಿಷ್ಠ ಎರಡು ಸಿಲಿಂಡರ್ ಹಾಗೂ ವಾರ್ಷಿಕ 15 ಸಿಲಿಂಡರ್ ಗಳನ್ನಷ್ಟೇ ಖರೀದಿಸಲು ಮಿತಿ ನಿಗದಿಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಮೊದಲು ಸಬ್ಸಿಡಿ ರಹಿತ ಎಷ್ಟು ಬೇಕಾದರೂ ಅಷ್ಟು ಗೃಹ ಬಳಕೆ ಸಿಲಿಂಡರ್ ಗಳನ್ನು ಗ್ರಾಹಕರು ಮಾರುಕಟ್ಟೆ ದರ ನೀಡಿ ಖರೀದಿಸಬಹುದಾಗಿತ್ತು. ಅಲ್ಲದೆ ಸಬ್ಸಿಡಿ ಸಿಲಿಂಡರ್ ಗಳನ್ನು ವರ್ಷಕ್ಕೆ 12 ಮಾತ್ರ ಖರೀದಿಸಬಹುದಾಗಿತ್ತು.
ತೈಲ ಕಂಪನಿಗಳು ಈ ನಿಯಮ ಜಾರಿಗೆ ತರಲು ಮುಂದಾಗಿವೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಬ್ಸಿಡಿ ನೀಡುವುದನ್ನು ನಿಲ್ಲಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆ ದರದಲ್ಲಿಯೇ ನಾವುಗಳು ಗೃಹಬಳಕೆ ಸಿಲಿಂಡರ್ ಗಳನ್ನು ಖರೀದಿಸುತ್ತಿದ್ದೇವೆ. ಇದರ ಮೇಲೆ ಮಿತಿ ನಿಗದಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಆದರೆ ಸಿಲಿಂಡರ್ ಗೆ ಮಿತಿ ಪ್ಲ್ಯಾನ್ ಅನುಸರಿಸಿದರೆ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಅನಿವಾರ್ಯವಾಗಿ ಹಾಲ್ ನತ್ತ ಮುಖ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶಭರಿತರಾಗಿ ನುಡಿದಿದ್ದಾರೆ.