ರಾಜ್ಯಾದ್ಯಂತ ವಿವಾದದ ಕಿಚ್ಚು ಹಚ್ಚಿದ್ದ ಹಿಜಾಬ್ ಗಲಾಟೆಗೆ ನಾಳೆ ಮುಕ್ತಿ ಸಾಧ್ಯತೆ – ನಾಳೆಯೇ ಸುಪ್ರೀಂ ಕೋರ್ಟ್ ನಿಂದ ಹೊರಬೀಳಲಿದೆ ತೀರ್ಪು

ನ್ಯೂಸ್ ಆ್ಯರೋ : ರಾಜ್ಯಾದ್ಯಂತ ವಿವಾದ ಎಬ್ಬಿಸಿದ್ದ ಹಿಜಾಬ್ ನಿಷೇಧ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಗುರುವಾರ (ಅಕ್ಟೋಬರ್ 13) ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಕರಣದ ಸಂಬಂಧ ಹಿಜಾಬ್ ವಿವಾದದ ಬಗ್ಗೆ ಸುದೀರ್ಘವಾಗಿ ವಾದ , ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ನಾಳೆ ಬೆಳಗ್ಗೆ 10:30 ಕ್ಕೆ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ಸರ್ಕಾರ ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಬಳಿಕ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಸುಪ್ರೀಂ ಕೋರ್ಟ್ ಎರಡೂ ಪಕ್ಷದವರ ವಾದ – ಪ್ರತಿವಾದ ಆಲಿಸಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈ ವಾರವೇ ತೀರ್ಪು ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಇದೀಗ ತೀರ್ಪು ಗುರುವಾರವೇ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹಾಗೂ ನ್ಯಾಯಮೂರ್ತಿ ಸುಧಾಂಶು ಧೂಲಿಯಾ ಅವರನ್ನು ಒಳಗೊಂಡ ನ್ಯಾಯ ಪೀಠವು ಹಿಜಾಬ್ ನಿಷೇಧ ವಿಚಾರದ ಕುರಿತಾಗಿ 10 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಬಳಿಕ ಸೆಪ್ಟೆಂಬರ್ 22 ರಂದು ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ದ್ವಿ ಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಅಕ್ಟೋಬರ್ 16 ರಂದು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ಈ ವಾರವೇ ಹಿಜಾಬ್ ತೀರ್ಪು ಹೊರ ಬೀಳುವ ನಿರೀಕ್ಷೆ ಇತ್ತು. ಇದೀಗ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಅಕ್ಟೋಬರ್ 13 ಗುರುವಾರವೇ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.