67ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಕನ್ನಡಿಗರು – ಮೈಸೂರು ರಾಜ್ಯ ಕರ್ನಾಟಕವಾಗಿದ್ದು ಯಾಕೆ ಗೊತ್ತಾ?

ನ್ಯೂಸ್ ಆ್ಯರೋ: ಪ್ರತಿ ಕನ್ನಡಿಗ ಹೆಮ್ಮೆಯ ಹಬ್ಬ ಕರ್ನಾಟಕ ರಾಜ್ಯೋತ್ಸವ. ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ನಡೆಯುತ್ತಿರುವ 67ನೇ ವರ್ಷದ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ನಡೆದ ‘ಕನ್ನಡದ ಕೋಟಿ ಕಂಠ ಗಾಯನ’ ಕಾರ್ಯಕ್ರಮ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ರಾಜ್ಯ ಅಂದರೆ ಆಗಿನ ಮೈಸೂರನ್ನು 1956 ನವೆಂಬರ್ 1 ರಂದು ರಾಜ್ಯವನ್ನಾಗಿ ನಿರ್ಮಾಣ ಮಾಡಲಾಯಿತು. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರ ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಈ ದಿನದಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ವಿಧಾನಸೌಧದಲ್ಲಿ ರಾಜ್ಯೋತ್ಸವ ದಿನದಂದು ಅಪ್ರತಿಮ ಸಾಧನೆ ಮಾಡಿದ ಗಣ್ಯರಿಗೆ, ಸಂಘ–ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು.
ಕರ್ನಾಟಕ ಹೆಸರಿನ ಹಿಂದೆ ಇರುವ ಅರ್ಥ:
ಕರ್ನಾಟಕ ಪದದ ಹೆಸರಿನ ಮೂಲದ ಬಗ್ಗೆ ತಿಳಿಯುವುದಾದರೆ “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದಲ್ಲಿ ಕರುನಾಡು ಎಂಬ ಪದ ಉಗಮವಾಗಿದೆ ಎಂದು ಚಿಂತಕರು ಅವರ ಅರ್ಥದಲ್ಲಿ ಬಣ್ಣಿಸಿದ್ದಾರೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಉಗಮವಾಗಿದೆ ಎಂದು ಹೇಳಲಾಗುತ್ತದೆ. ಇನ್ನೂ ಕರ್ನಾಟಕ ಪದದವನ್ನು ನಾನಾ ಬಗೆಯಿಂದ ಜನರು ಅರ್ಥೈಸಿಕೊಳ್ಳುತ್ತಾರೆ.
ಏಕತೆ ಅಡಗಿದೆ ಕನ್ನಡದ ಬಾವುಟದಲ್ಲಿ:

ಕನ್ನಡದ ಹೋರಾಟಗಾರ ಎಂ. ರಾಮಮೂರ್ತಿ ಅವರು ಕನ್ನಡದ ಹೆಮ್ಮೆಯ ಬಾವುಟವನ್ನು ತಯಾರಿಸಿದ್ದು, ಇದು ಹಳದಿ ಹಾಗೂ ಕೆಂಪು ಬಣ್ಣವನ್ನು ಒಳಗೊಂಡಿದೆ. ಮೂಲತಃ ಹಳದಿ ಬಣ್ಣವು ಕನ್ನಡಾಂಬೆಯ ಆರಿಶಿನ ಮತ್ತು ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಇದರ ಅರ್ಥ ಕನ್ನಡಿಗರು ಶಾಂತಿಗೆ ಬದ್ಧ, ಯುದ್ಧಕ್ಕೂ ಸಿದ್ಧ ಎಂಬ ಸಂದೇಶವನ್ನು ಸಾರುತ್ತದೆ.
ರಾಜ್ಯೋತ್ಸವವನ್ನು ಯಾವುದೇ ಜಾತಿ–ಧರ್ಮಬೇಧವಿಲ್ಲದೆ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹೆಮ್ಮೆಯಿಂದ ಆಚರಿಸಿಕೊಳ್ಳುತ್ತಾರೆ. ಇನ್ನೂ ಈ ದಿನದಂದ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತದೆ. ವಾಹನಗಳಲ್ಲಿ ಕೆಳದಿ, ಕೆಂಪು ಬಾವುಟಗಳು ಮತ್ತಷ್ಟು ಮೆರುಗು ನೀಡುತ್ತದೆ.
ಮೆರುಗು ನೀಡಿದ ಕೋಟಿ ಕಂಠ ಗಾಯನ:

67ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಜ್ಯದಾದ್ಯಂತ ನಡೆದ ಕೋಟಿ ಕಂಠ ಗಾಯನ ಬಾನಲ್ಲೂ, ಭುವಿಯಲ್ಲೂ ಕನ್ನಡದ ಕಂಪನ್ನು ಪಸರಿಸಿತು. ನಾಡಿನ ಜನಪ್ರಿಯ ಗಾಯಕರು, ಮಕ್ಕಳು ಕನ್ನಡ ಬಾವುಟ ಹಿಡಿದು, ಕೇಸರಿ ಕೆಂಪು ಉಡುಗೆ, ಬಾವುಟ ಹಿಡಿದು ಹಾಡಿ ರಂಜಿಸಿದರು.