1. Home
  2. News
  3. Arrow
  4. Special
  5. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಯಾಕೆ..? ಮಿಷನ್ 2047 ಗುರಿ ಹೊಂದಿದ್ದ ಪಿಎಫ್ಐ ನ ಕರಾಳತೆ ಅದೆಷ್ಟು ಭೀಭತ್ಸ ಗೊತ್ತಾ…!?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಯಾಕೆ..? ಮಿಷನ್ 2047 ಗುರಿ ಹೊಂದಿದ್ದ ಪಿಎಫ್ಐ ನ ಕರಾಳತೆ ಅದೆಷ್ಟು ಭೀಭತ್ಸ ಗೊತ್ತಾ…!?

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಯಾಕೆ..? ಮಿಷನ್ 2047 ಗುರಿ ಹೊಂದಿದ್ದ ಪಿಎಫ್ಐ ನ ಕರಾಳತೆ ಅದೆಷ್ಟು ಭೀಭತ್ಸ ಗೊತ್ತಾ…!?
0

ನ್ಯೂಸ್ ಆ್ಯರೋ : ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಬ್ಯಾನ್ ಮಾಡಿ ಕೇಂದ್ರ ಸರ್ಕಾರ ನಿನ್ನೆ ಆದೇಶ ನೀಡಿದೆ. ಪಿಎಫ್‌ಐ ಸಂಘಟನೆ ಮೇಲೆ ಎನ್‌ಐಎ ಮತ್ತು ಪೊಲೀಸರ ತಂಡಗಳಿಂದ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ 5 ವರ್ಷಗಳ ಕಾಲ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯನ್ನು ದೇಶಾದ್ಯಂತ ಬ್ಯಾನ್ ಮಾಡಿದೆ. ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ ಬ್ಯಾನ್ ಮಾಡಲಾಗಿದೆ.

ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಹತ್ತರ ನಿರ್ಧಾರ ಕೈಗೊಂಡಿದೆ. ಈ ಹಿಂದೆಯೇ ಪಿಎಫ್ಐ ನಿಷೇಧದ ಕೂಗು ಕೇಳಿ ಬಂದಿತ್ತು. ಇದೇ ಸೆಪ್ಟೆಂಬರ್ 22 ಮತ್ತು 27ರಂದು ಎರಡು ದಿನ ಎನ್‌ಐಎ ಮತ್ತು ಇಡಿ ಅಧಿಕಾರಿಗಳ ತಂಡಗಳು ದೇಶದ ವಿವಿಧೆಡೆ ದಾಳಿ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದವು. ಅವುಗಳ ಆಧಾರದ ಮೇಲೆ ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳಾದ ನ್ಯಾಷನಲ್ ಕಾನ್‌ಫೆಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್, ರಿಹಾಬ್ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಅನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿಲುವಿಗೆ ವಿಪಕ್ಷಗಳು ಬೆಂಬಲ ನೀಡಿವೆ.

2006ರಲ್ಲಿ ಕೇರಳದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು ಪಿಎಫ್ಐ ಸಂಘಟನೆ ರೂಪುಗೊಂಡಿತು. ಪಿಎಫ್ಐ ಸಂಘಟನೆ
ಹಿಂದುಳಿದ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಸಮುದಾಯದ ಜನರ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ ಎಂದು ಹೇಳಿಕೊಂಡಿದೆ. ಪಿಎಫ್ಐ 22 ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದೆ. ಸಂಘದ ಕಾರ್ಯಕರ್ತರಿಗೆ ಸಮವಸ್ತ್ರವಿದ್ದು ತರಬೇತಿ ನೀಡಲಾಗುತ್ತದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ, ಪದಾಧಿಕಾರಿಗಳನ್ನು ಆರಿಸಲಾಗುತ್ತದೆ.

ಮುಸ್ಲಿಮರಿಗಾಗಿ ಸಾಮಾಜಿಕ ಕೆಲಸ ಮಾಡುವುದಾಗಿ ಪಿಎಫ್ಐ ಸಂಘಟನೆ ಹೇಳುತ್ತದೆ. ಆದರೆ, ಸಂಸ್ಥೆಯು ಸದಸ್ಯತ್ವದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಅಲ್ಲದೆ, ಈ ಸಂಘಟನೆಯ ವಿರುದ್ಧ ಕೇರಳದಲ್ಲಿ ಕೊಲೆ, ಬೆದರಿಕೆ, ಗಲಭೆ ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಅನೇಕ ಪ್ರಕರಣಗಳು ದಾಖಲಾಗಿವೆ. ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಕೊಲೆ, ಹಿಂದೂ ಮುಖಂಡರ ಹತ್ಯೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡವಿರುವ ಬಗ್ಗೆ ಆರೋಪಗಳಿದ್ದು, ಪ್ರಕರಣ ದಾಖಲಾಗಿವೆ.

ಪಿಎಫ್ಐ ನಿಷೇಧ ಯಾಕೆ…?

ಪಿಎಫ್ಐ ಸಂಘಟನೆ ನಿಷೇಧದ ಕುರಿತು ಕೇಂದ್ರ ಗೃಹ ಇಲಾಖೆ ಕೆಲವು ಸ್ಪಷ್ಟ ಕಾರಣಗಳನ್ನು ನೀಡಿದೆ. ಪಿಎಫ್‌ಐ, ಮತ್ತದರ ಅಂಗ ಸಂಸ‌್ಥೆಗಳು ಸಾಮಾಜಿಕ-ಆರ್ಥಿಕ, ಶೈಕ್ಷಣಿಕ ಹಾಗು ರಾಜಕೀಯ ಸಂಘಟನೆಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದ್ರೆ ವಾಸ್ತವದಲ್ಲಿ ಈ ಸಂಘಟನೆಗಳು ದೇಶದ ಭದ್ರತೆಗೆ ಅಪಾಯ ತರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿತ್ತು. ಕೋಮುಸೌಹಾರ್ದ ಮತ್ತು ಶಾಂತಿಗೆ ಭಂಗ ತರುವುದಲ್ಲದೆ, ಉಗ್ರಗಾಮಿ ಸಂಘಟನೆಗಳ ಜೊತೆ ನಂಟು ಹೊಂದಿತ್ತು. ಪಿಎಫ್‌ಐನ ಸಂಸ್ಥಾಪಕರು ನಿಷೇಧಿತ ಸಿಮಿ ಉಗ್ರ ಸಂಘಟನೆಯ ನಾಯಕರಾಗಿದ್ದರು ಎಂದು ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಐಸಿಸ್ ಮುಂತಾದ ಜಾಗತಿಕ ಭಯೋತ್ಪಾದಕ ಸಂಘಟನೆಗಳ ಜೊತೆ ಪಿಎಫ್ಐ ಸಂಪರ್ಕದಲ್ಲಿದೆ. ದೇಶದಲ್ಲಿ ನಿರ್ದಿಷ್ಟ ಸಮುದಾಯವನ್ನು ಮತಾಂಧಗೊಳಿಸುವ ಮತ್ತು ಅಭದ್ರತೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಪಿಎಫ್‌ಐ ಕಾರ್ಯನಿರ್ವಹಿಸುತ್ತಿತ್ತು. ಈಗ ಈ ಸಂಘಟನೆಗಳನ್ನು ನಿಯಂತ್ರಣ ಮಾಡದಿದ್ದರೆ, ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರೆಸಲು ಅವಕಾಶ ನೀಡಿದಂತಾಗುತ್ತದೆ. ದೇಶದ ಹಿತ ಕಾಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಇನ್ನು, ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಅವರ ಹತ್ಯೆಗೆ ಪಿಎಫ್‌ಐ ಸಂಘಟನೆ ಸಂಚು ರೂಪಿಸಿರುವ ಸಂಗತಿ ಬೆಳಕಿಗೆ ಬಂದಿತ್ತು. ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತಿಭಟಿಸಲು ಪಿಎಫ್ಐ ಸಂಘಟನೆ ಪ್ರಚೋದನೆ ನೀಡಿತ್ತು. ಪೌರತ್ವ ವಿರೋಧಿ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಪ್ರತಿಭಟನೆಗೂ ಈ ಸಂಘಟನೆ ಕುಮ್ಮಕ್ಕು ನೀಡಿತ್ತು.

ಐಎನ್ಐ ದಾಳಿಯ ನಂತರ ಸಿಕ್ಕಿರುವ ಸಾಕ್ಷ್ಯಾಧಾರಗಳ ಪ್ರಕಾರ, ಲಷ್ಕರ್ ಎ ತಯಬಾ ಮತ್ತು ಇಸ್ಲಾಮಿಕ್ ಸ್ಟೇಟ್‌ನಂತಹ ಭಯೋತ್ಪಾದಕ ಸಂಘಟನೆಯನ್ನು ಸೇರುವಂತೆ ಯುವ ಜನರಿಗೆ ಪಿಎಫ್‌ಐ ಕುಮ್ಮಕ್ಕು ನೀಡಿದೆ. ಹಿಂಸಾತ್ಮಕ ಜಿಹಾದ್‌ನ ಭಾಗವಾಗಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುವ ಮೂಲಕ ದೇಶದಲ್ಲಿ ಇಸ್ಲಾಂ ಆಳ್ವಿಕೆ ಜಾರಿಗೆ ತರಲು ಪಿಎಫ್‌ಐ ಸಂಚು ರೂಪಿಸಿತ್ತು. ಸರ್ಕಾರದ ನೀತಿಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಮುಸ್ಮಿಂ ಸಮುದಾಯದ ಜನರಲ್ಲಿ ದೇಶದ ಬಗ್ಗೆ ದ್ವೇಷ ಹುಟ್ಟುವಂತೆ ಮಾಡಲು ಪಿಎಫ್ಐ ಪ್ರಯತ್ನಿಸುತ್ತಿತ್ತು ಎಂದು ಐಎನ್ಐ ಹೇಳಿದೆ.

ಇನ್ನು ಐಎನ್ಎ ದಾಳಿ ವೇಳೆ ಅಧಿಕಾರಿಗಳಿಗೆ ಮಿಷನ್ 2047 ಎಂಬ ಕಿರು ಪುಸ್ತಕವೊಂದು‌ ಸಿಕ್ಕಿರುವ ಬಗ್ಗೆ ‘ಓಪಿ ಇಂಡಿಯಾ ಡಾಟ್ ಕಾಮ್’ನಲ್ಲಿ‌ ತಿಳಿಸಲಾಗಿದೆ. ಈ ಪುಸ್ತಕದಲ್ಲಿ‌ ಪಿಎಫ್ಐ ಸಂಘಟನೆಯ ಹಿಡನ್ ಅಜೆಂಡಾ ಏನು‌ ಎಂಬುದು ಬಯಲಾಗಿದೆ.‌ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಮಾಡುವ ಗುರಿ ಹೊಂದಿತ್ತು.‌ ಅದಕ್ಕಾಗಿ ಬಾಂಬ್ ತಯಾರಿಸುವುದು ಹೇಗೆ ಎನ್ನುವ ಬಗ್ಗೆ ಆ ಪುಸ್ತಕದಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ.‌ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ, ಮುಸ್ಲಿಂ ರನ್ನು ಸಶಕ್ತಗೊಳಿಸಲು ಬಾಂಬ್ ತಯಾರಿಸುವುದನ್ನು ಮುಸ್ಲಿಂ ಯುವಜನರು ಕಲಿಯಬೇಕು ಎಂದು ಹೇಳಲಾಗಿದೆ.‌ ಮುಸ್ಲಿಮೇತರ ಸಮುದಾಯಗಳನ್ನು ಬಗ್ಗುಬಡಿಯಲು, ಆರ್ಥಿಕವಾಗಿ ಸಾಮಾಜಿಕವಾಗಿ ದುರ್ಬಲರನ್ನಾಗಿ‌ ಮಾಡಲು, ಭಯೋತ್ಪಾದನೆ ಬಗ್ಗೆ ಜನರಲ್ಲಿ‌ ಭೀತಿ ಹುಟ್ಟಿಸಲು ಬಾಂಬ್ ತಯಾರಿಕೆ ಬಗ್ಗೆ ಕಲಿಯಬೇಕು‌ ಎಂದು ಮಿಷನ್ 2047 ಪುಸ್ತಕದಲ್ಲಿ‌ ಹೇಳಲಾಗಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..