1. Home
  2. Political
  3. News
  4. ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ತಾತ್ಕಾಲಿಕ ಬ್ಲಾಕ್‌ಗೆ ಕೋರ್ಟ್‌ ಆದೇಶ – ಅನಧಿಕೃತವಾಗಿ ಕೆಜಿಎಫ್‌–2 ಸಂಗೀತ ಬಳಸಿ ಎಡವಟ್ಟು

ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ತಾತ್ಕಾಲಿಕ ಬ್ಲಾಕ್‌ಗೆ ಕೋರ್ಟ್‌ ಆದೇಶ – ಅನಧಿಕೃತವಾಗಿ ಕೆಜಿಎಫ್‌–2 ಸಂಗೀತ ಬಳಸಿ ಎಡವಟ್ಟು

ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ತಾತ್ಕಾಲಿಕ ಬ್ಲಾಕ್‌ಗೆ ಕೋರ್ಟ್‌ ಆದೇಶ – ಅನಧಿಕೃತವಾಗಿ ಕೆಜಿಎಫ್‌–2 ಸಂಗೀತ ಬಳಸಿ ಎಡವಟ್ಟು
0

ನ್ಯೂಸ್ ಆ್ಯರೋ : ಕೆಜಿಎಫ್‌–2ನ ಸಂಗೀತ ಬಳಸಿ ಕಾಪಿರೈಟ್‌ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಟ್ವಿಟ್ಟರ್‌ ಕಂಪನಿಗೆ ಆದೇಶ ನೀಡಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯ ಪ್ರಚಾರದಲ್ಲಿ ಕೆಜಿಎಫ್‌ ಚಾಪ್ಟರ್‌-2 ಸಿನಿಮಾದ ಆಡಿಯೋವನ್ನು ಬಳಸಲಾಗಿತ್ತು. ಇದರ ವಿರುದ್ಧ ಕೆಜಿಎಫ್ ಚಾಪ್ಟರ್ -2 ಚಿತ್ರದ ಸಂಗೀತದ ಹಕ್ಕುಸ್ವಾಮ್ಯ ಪಡೆದುಕೊಂಡಿರುವ ಎಂಆರ್‌ಟಿ ಮ್ಯೂಸಿಕ್ ಕಂಪನಿ ನ್ಯಾಯಾಲಯದ ಮೆಟ್ಟಿಲೇರಿತ್ತು.

‘ನಮ್ಮ ಸಂಗೀತವನ್ನು ಕಾನೂನುಬಾಹಿರವಾಗಿ ಬಳಸಿ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌, ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌ ಖಾತೆಯ ಎಲೆಕ್ಟ್ರಾನಿಕ್ ಆಡಿಟ್ ಅನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸುವುದು ಅಗತ್ಯ’ ಎಂದು ಎಂಆರ್‌ಟಿ ಪರ ವಕೀಲರು ವಾದ ಮಂಡಿಸಿದರು.

ಪ್ರಸ್ತುತ ಲಭ್ಯವಿರುವ ದಾಖಲೆಗಳ ಪ್ರಕಾರ ಭಾರತ್ ಜೋಡೋ ಯಾತ್ರೆ ವೇಳೆ ಅರ್ಜಿದಾರರು ಹಕ್ಕು ಸ್ವಾಮ್ಯ ಹೊಂದಿರುವ ಕೆಜಿಎಫ್ ಚಾಪ್ಟರ್ -2 ಚಿತ್ರದ ಸಂಗೀತವವನ್ನು ಅಧಿಕೃತವಾಗಿ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನು ತಡೆಯದೇ ಹೋದರೆ ಅರ್ಜಿದಾರಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ ಮತ್ತು ಪೈರಸಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಸಂಗೀತವನ್ನು ಅನಧಿಕೃತವಾಗಿ ಬಳಸಿಕೊಂಡ ವಿಚಾರದಲ್ಲಿ ವಿದ್ಯುನ್ಮಾನ ಪರಿಶೋಧನೆ ಮಾಡಬೇಕಿದೆ. ಹೀಗಾಗಿ ಐಎನ್‌ಸಿಇಂಡಿಯಾದ ಟ್ವಿಟ್ಟರ್, ಭಾರತ್‌ ಜೋಡೋ ಯಾತ್ರೆಯ ಟ್ವಿಟರ್, ಫೇಸ್‌ಬುಕ್, ಯೂಟೂಬ್, ಇನ್‌ಸ್ಟ್ರಾಗ್ರಾಂ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿರುವ ‘ಹಕ್ಕು ಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು’ ಸಂಬಂಧಿಸಿದ ಸಾಮಗ್ರಿಗಳನ್ನು ವಿದ್ಯುನ್ಮಾನ ಪರಿಶೋಧನೆ ನಡೆಸಲು ವಾಣಿಜ್ಯ ನ್ಯಾಯಾಲಯದ ಕಂಪೂಟರ್ ವಿಭಾಗದ ಜಿಲ್ಲಾ ಸಿಸ್ಟೆಮ್ ಆಡಳಿತಾಧಿಕಾರಿ ಆಗಿರುವ ಎಸ್.ಎನ್. ವೆಂಕಟೇಶ ಮೂರ್ತಿ ಅವರನ್ನು ಸ್ಥಳೀಯ ಕಮಿಷನರ್ ಆಗಿ ನೇಮಕ ಮಾಡಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೋಟ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಕೆಜಿಎಫ್‌–2 ಹಾಡುಗಳನ್ನು ಯಾತ್ರೆಯಲ್ಲಿ ಬಳಸಿಕೊಂಡಿತ್ತು. ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವ ಎಂಆರ್‌ಟಿ ಸಂಸ್ಥೆಯು ರಾಹುಲ್ ಗಾಂಧಿ, ಕಾಂಗ್ರೆಸ್‌ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ಜೈರಾಂ ರಮೇಶ್ ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..