ಸಿಬಿಐಗೆ ನನ್ನ ಮೇಲೆ ಲವ್ ಆಗಿದೆ – ಸಿಬಿಐ ಸತತ ದಾಳಿ ಬಗ್ಗೆ ಡಿಕೆಶಿ ವ್ಯಂಗ್ಯ

ನ್ಯೂಸ್ ಆ್ಯರೋ : ಸಿಬಿಐಗೆ ನನ್ನ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ಅದಕ್ಕಾಗಿ ಆಗಾಗ್ಗೆ ನೋಡಲು ಬರುತ್ತಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ನಿನ್ನೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳ ತಂಡ, ಕನಕಪುರ ತಹಶೀಲ್ದಾರ್ ಜೊತೆ ಡಿಕೆಶಿ ನಿವಾಸಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡಿಕೆಶಿ ಅವರ ಕನಕಪುರ, ದೊಡ್ಡಾಲಹಳ್ಳಿ, ಸಂತೆ ಕೋಡಿಯಲ್ಲಿರುವ ಮನೆಗಳಿಗೆ ರೈಡ್ ಮಾಡಿದ ಸಿಬಿಐ ಅಧಿಕಾರಿಗಳ ತಂಡ ಆಸ್ತಿ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ನನ್ನ ವಿರುದ್ಧ ಮಾತ್ರ ಸಿಬಿಐ ತನಿಖೆ ಯಾಕೆ? ಎಲ್ಲಾ ರೀತಿಯಲ್ಲಿ ಸ್ಪಂದಿಸಿದರೂ, ದಾಖಲೆ ನೀಡಿದರೂ ಸಿಬಿಐ ಅಧಿಕಾರಿಗಳು ನನ್ನನ್ನು ಮಾತ್ರ ಗುರಿಯಾಗಿಸಿದ್ದಾರೆ. ಲೋಕಾಯುಕ್ತ ಇಲಾಖೆ, ಚುನಾವಣಾ ಆಯೋಗ ನನ್ನ ಆಸ್ತಿ ಬಗ್ಗೆ ಪ್ರಶ್ನೆ ಮಾಡಿದ್ದರೆ ಬೇರೆ ವಿಚಾರ. ನನ್ನ ವಿಚಾರದಲ್ಲಿ ವಿಶೇಷವಾಗಿ ಸಿಬಿಐ ವಿಚಾರಣೆ ಯಾಕೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ನಾನು ಈಗಾಗಲೇ ಎಲ್ಲಾ ದಾಖಲೆಗಳನ್ನು ಸಿಬಿಐಗೆ ನೀಡಿದ್ದೇನೆ. ಆದರೂ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳ ತಂಡ ಕನಕಪುರದ ತಹಶೀಲ್ದಾರ್ ಜೊತೆ ಊರಿನಲ್ಲಿರುವ ನನ್ನ ಆಸ್ತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ನನಗೆ ಬೇರೆಯೇ ಮಾಹಿತಿಯಿದೆ. ಮುಂದೆ ಮಾತನಾಡುತ್ತೇನೆ. ನನ್ನನ್ನು ವಿಚಲಿತಗೊಳಿಸಲು ಪ್ರಯತ್ನ ನಡೆಯುತ್ತಿದೆ. ಆ ಬಗ್ಗೆ ನನಗೂ ನೋವಿದೆ. ಆದ್ರೆ ನಾನು ಧೈರ್ಯಗೆಡುವುದಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.
ನನಗೆ ಊರಿನಲ್ಲಿ ಆಸ್ತಿ ಇರುವ ಬಗ್ಗೆ ಚುನಾವಣಾ ಆಯೋಗ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಎಲ್ಲ ಇಲಾಖೆಗಳಿಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಆದ್ರೆ ನನ್ನ ಮೇಲೆ ಮಾತ್ರ ಸಿಬಿಐ ತನಿಖೆ ಯಾಕೆ? ಬೇರೆಯವರ ವಿರುದ್ಧ ಅಕ್ರಮ ಆಸ್ತಿ ಆರೋಪ ಇದ್ದರೂ ಎಸಿಬಿ ರೈಡ್ ನಡೆಯುತ್ತೆ. ನಾನು ಈವರೆಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ.
ಈಗ ಚುನಾವಣಾ ಸಮಯದಲ್ಲಿ ನಾನು ಸ್ವಲ್ಪ ಬ್ಯುಸಿ ಇದ್ದೇನೆ ಎಂದು ಬೆಂಗಳೂರು ಹಾಗೂ ದೆಹಲಿ ಕಚೇರಿಗೆ ಪತ್ರ ಬರೆದು ತಿಳಿಸಿದ್ದೆ. ಆದರೂ ತರಾತುರಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.