ಬ್ಯಾರಿ ಭಾಷೆಗೆ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ನಿರಾಕರಣೆ ಸರಿಯಲ್ಲ – ಟ್ವಿಟರ್’ನಲ್ಲಿ ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ಹೆಚ್‌ಡಿಕೆ ಕಿಡಿ

ನ್ಯೂಸ್ ಆ್ಯರೋ : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಕವಿಗೋಷ್ಟಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಲಾಗಿದೆ. ರಾಜ್ಯ ಸರಕಾರ ಮತ್ತು ದಸರಾ ಸಮಿತಿಯ ಈ ನಡೆಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್.ಡಿ. ಕುಮಾರಸ್ವಾಮಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಣೆ ಸಮ್ಮತವಲ್ಲ ಎಂದಿದ್ದಾರೆ.
ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದ್ರೆ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ರಾಜ್ಯ ಬಿಜೆಪಿ ಸರಕಾರದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಕನ್ನಡದ ನೆರಳಿನಲ್ಲಿ ಅರಳಿರುವ ಭಾಷೆಯನ್ನು ಹೀಗೆ ಕಡೆಗಣಿಸುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಬ್ಯಾರಿ ಭಾಷೆ ಮಾತಾಡುತ್ತಾರೆ. ಕರಾವಳಿಯಲ್ಲಿ ಬ್ಯಾರಿ ಭಾಷೆ ಅನೇಕರ ನಿತ್ಯನುಡಿ. ಕೇವಲ ಒಂದು ಸಮುದಾಯದವರು ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಬ್ಯಾರಿ ಭಾಷೆಯನ್ನು ಬೇಡವೆನ್ನುವುದು ತಪ್ಪು. 2007ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬ್ಯಾರಿ ಭಾಷಿಗರ ಬಹುಕಾಲದ ಬೇಡಿಕೆ ಆಗಿದ್ದ ʼಬ್ಯಾರಿ ಸಾಹಿತ್ಯ ಅಕಾಡೆಮಿʼ ಸ್ಥಾಪನೆಗೆ ಅನುಮೋದನೆ ನೀಡಿದ್ದೆ. ಬ್ಯಾರಿ ಅಕಾಡೆಮಿಯ ಮೂಲಕ ಅತ್ಯುತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನೂ ಸ್ಥಾಪಿಸಲಾಗಿದೆ. ಬ್ಯಾರಿ ಭಾಷಿಗರು ಕನ್ನಡ ಲಿಪಿಯನ್ನೇ ಬಳಸಿ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. ಕನ್ನಡಕ್ಕೂ ಅನುವಾದಿಸಿದ್ದಾರೆ. ಹೀಗಿದ್ದು ಸರ್ಕಾರ ಏಕಪಕ್ಷೀಯ ನಡೆ ತೋರಿರುವುದು ಎಷ್ಟು ಸರಿ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಏಕಭಾಷೆಯನ್ನು ಮೆರೆಸುವ ಬಿಜೆಪಿಗೆ ಕನ್ನಡ ಸೇರಿ ಇತರೆ ಉಪಭಾಷೆಗಳನ್ನು ಅಳಿಸಿಹಾಕುವ ಕೆಟ್ಟ ಮನಃಸ್ಥಿತಿ ಇರುವಂತೆ ಕಾಣಿಸುತ್ತದೆ. ಆದ್ರೆ ಇದು ಖಂಡಿತಾ ನಡೆಯುವುದಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಮತ್ತು ದಸರಾ ಸಮಿತಿ ಆಗಿರುವ ತಪ್ಪನ್ನು ಸರಿಪಡಿಸಿಬೇಕು. ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸರಣಿ ಟ್ವೀಟ್ ಮೂಲಕ ಹೆಚ್‌ಡಿಕೆ ಆಗ್ರಹಿಸಿದ್ದಾರೆ.