1. Home
  2. Political
  3. News
  4. ಹದಗೆಟ್ಟ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಆರೋಗ್ಯ – ತಂದೆಯ ಜೀವ ಉಳಿಸಲು ಕಿಡ್ನಿ ದಾನಕ್ಕೆ ಮುಂದಾದ ಪುತ್ರಿ

ಹದಗೆಟ್ಟ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಆರೋಗ್ಯ – ತಂದೆಯ ಜೀವ ಉಳಿಸಲು ಕಿಡ್ನಿ ದಾನಕ್ಕೆ ಮುಂದಾದ ಪುತ್ರಿ

ಹದಗೆಟ್ಟ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಆರೋಗ್ಯ – ತಂದೆಯ ಜೀವ ಉಳಿಸಲು ಕಿಡ್ನಿ ದಾನಕ್ಕೆ ಮುಂದಾದ ಪುತ್ರಿ
0

ನ್ಯೂಸ್‌ ಆ್ಯರೋ : ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ಅವರು ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಜೀವ ಉಳಿಸಲು ಸಿಂಗಾಪುರದಲ್ಲಿರುವ ಪುತ್ರಿ ರೋಹಿಣಿ ಆಚಾರ್ಯ ತಮ್ಮ ಕಿಡ್ನಿಯೊಂದನ್ನು ತಂದೆಗೆ ದಾನ ಮಾಡಲು ನಿರ್ಧರಿಸಿದ್ದಾರೆ.

ಲಾಲು ಪ್ರಸಾದ್ ಅವರು ತಮ್ಮ ಗಂಭೀರ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಸಿಂಗಾಪುರಕ್ಕೆ ಹೋಗಿದ್ದರು. ಲಾಲು ಅವರ ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಿಂಗಾಪುರದ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ, ತಂದೆಯ ಆರೋಗ್ಯದ ದೃಷ್ಟಿಯಿಂದ ಪುತ್ರಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಆರಂಭದಲ್ಲಿ ತಮ್ಮ ಪುತ್ರಿಯ ಕಿಡ್ನಿಯನ್ನು ದಾನವಾಗಿ ಪಡೆಯುವ ಪ್ರಸ್ತಾವವನ್ನು ಲಾಲು ತಿರಸ್ಕರಿಸಿದ್ದರು. ಆದರೆ, ರೋಹಿಣಿ ಅವರ ಒತ್ತಾಯದ ಮೇರೆಗೆ ಕಿಡ್ನಿ ಕಸಿಗೆ ಲಾಲೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ದೆಹಲಿಯ ಆಸ್ಪತ್ರೆಯಲ್ಲಿ ಲಾಲೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತಿಂಗಳು 20ರಿಂದ 24ರೊಳಗೆ ಅವರು ಮತ್ತೆ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಲಿದ್ದು, ಈ ಸಮಯದಲ್ಲಿ ಅವರು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.

ಲಾಲು ಪ್ರಸಾದ್ ಅವರ ಎರಡನೇ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದರೂ ತಮ್ಮ ತವರು ನೆಲ ಬಿಹಾರದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ವಿರೋಧಿಗಳ ಕುರಿತು ಟೀಕಿಸಲು ಸಾಮಾಜಿಕ ವೇದಿಕೆಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ವಿಘಟನೆ ಮತ್ತು ರಾಜಕೀಯ ಬೆಳವಣಿಗೆಗಳ ನಡುವೆ ಮಹಾಮೈತ್ರಿಕೂಟ ಸರ್ಕಾರಕ್ಕೆ ಸಿದ್ಧತೆಗಳು ನಡೆಯುತ್ತಿರುವಾಗ ರೋಹಿಣಿ ಸುದ್ದಿಯಾಗಿದ್ದರು. ಈ ವೇಳೆ ಅವರು ಟ್ವೀಟ್ ಮಾಡಿ, ತನ್ನ ತಂದೆಯನ್ನು ‘ಕಿಂಗ್ ಮೇಕರ್’ ಎಂದು ಬಣ್ಣಿಸಿದ್ದರು.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..