ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಬಹುತೇಕ ಪಕ್ಕಾ – ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದಾಖಲೆಗಳ ಗೆಲುವಿನ ಸರದಾರ

ನ್ಯೂಸ್ ಆ್ಯರೋ : ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರಂಗೇರಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ. ಸೋನಿಯಾ ಗಾಂಧಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷರ ಬದಲಾವಣೆ ಅನಿವಾರ್ಯವಾಗಿದ್ದು, ಅಧ್ಯಕ್ಷೀಯ ಗದ್ದುಗೆ ಏರುವವರಾರು ಎನ್ನುವ ಬಗ್ಗೆ ಭಾರಿ ಚರ್ಚೆಯಾಗಿತ್ತು. ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಮೊದಲು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೆಸರು ಕೇಳಿ ಬಂದಿತ್ತು. ಆದ್ರೆ ಬಳಿಕ ಅಶೋಕ್ ಗೆಹ್ಲೋಟ್ ಅಧ್ಯಕ್ಷೀಯ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೂಡ ಸ್ಪರ್ಧೆಗೆ ಒಲವು ತೋರಿದ್ದರು. ಆದ್ರೆ ಅವರೂ ಕೂಡ ಹಿಂದೆ ಸರಿದಿದ್ದು, ಸಧ್ಯ ಶಶಿ ತರೂರ್ ಮತ್ತು ಖರ್ಗೆ ನಡುವೆ ಪೈಪೋಟಿ ನಡೆಯಲಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದು ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಉಮೇದುವಾರಿಕೆಯನ್ನು ಪಕ್ಷದ ಮುಖಂಡರಾದ ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್, ಪ್ರಮೋದ್ ತಿವಾರಿ, ಪಿ.ಎಲ್. ಪುನಿಯಾ, ಎಕೆ ಆಂಟನಿ ಮೊದಲಾದವರು ಬೆಂಬಲಿಸಿ ಸಹಿ ಹಾಕಿದ್ದಾರೆ. ಅಷ್ಟು ಮಾತ್ರವಲ್ಲದೆ, 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಕುಟುಂಬದ ಬೆಂಬಲವಿದ್ದು, ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ದೇಶದ ರಾಜಕೀಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೊಡ್ಡ ಹೆಸರಿದೆ. ಮಲ್ಲಿಕಾರ್ಜುನ ಖರ್ಗೆ ಸತತ 5 ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಿಧಾನಸಭೆ, ಲೋಕಸಭೆ ಎರಡರ ಅನುಭವ ಇರುವ ಖರ್ಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲುಂಡರೂ ಖರ್ಗೆ ಅವರ ವರ್ಚಸ್ಸು ಹಾಗೆಯೇ ಇದೆ. ಮಲ್ಲಿಕಾರ್ಜುನ ಖರ್ಗೆಯವರು ಅಖಾಡಕ್ಕೆ ಇಳಿಯುತ್ತಿದ್ದಂತೆ ಬಹುತೇಕ ನಾಯಕರು ಬೆಂಬಲಿಸಿದ್ದಾರೆ.
ಅಶೋಕ್ ಗೆಹ್ಲೋಟ್, ಕಮಲನಾಥ್ ಸಾಥ್ ನೀಡಿದ್ದು, ಅಲ್ಲದೇ ಗಾಂಧಿ ಕುಟುಂಬಕ್ಕೆ ಖರ್ಗೆ ಫೇವರಿಟ್ ಆಗಿದ್ದು, ಸಂಪೂರ್ಣ ಬೆಂಬಲವಿದೆ. ಖರ್ಗೆ ಪ್ರತಿಸ್ಪರ್ಧಿಯಾಗಿ ಶಶಿ ತರೂರ್ ಕಣಕ್ಕಿಳಿದಿದ್ದರೂ ಅದರಿಂದ ಖರ್ಗೆಯವರಿಗೆ ಯಾವ ಎಫೆಕ್ಟ್ ಆಗೋದಿಲ್ಲ. ಹೈಕಮಾಂಡ್ ಸೇರಿ ಬಹುತೇಕ ಕೈ ನಾಯಕರ ಸಪೋರ್ಟ್ ಇರೋದ್ರಿಂದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷ ಸ್ಥಾನಕ್ಕೆ ಏರೋದು ಪಕ್ಕಾ ಎನ್ನಲಾಗುತ್ತಿದೆ. ಖರ್ಗೆ ಸ್ಪರ್ಧೆ ಬಗ್ಗೆ ರಾಜ್ಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ತನ್ನನ್ನು ಬೆಂಬಲಿಸಿದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಪಕ್ಷದಲ್ಲಿ ದೊಡ್ಡ ಬದಲಾವಣೆಗಾಗಿ ಹೋರಾಡುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎಲ್ಲಾ ಪ್ರತಿನಿಧಿಗಳು ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಅಕ್ಟೋಬರ್ 17ರಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.