ನ್ಯೂಸ್ ಆ್ಯರೋ: ‘ನನಗೆ 74 ವರ್ಷ ನಡೆಯುತ್ತಿದ್ದು, ತುಂಬಾ ವರುಷ ಬದುಕಬೇಕೆಂಬ ಆಸೆ. ಆದರೆ ಶುಗರ್ ಇರುವುದರಿಂದ ಎಷ್ಟು ವರ್ಷ ಬದುಕುತ್ತೇನೆಂದು ಹೇಳಕ್ಕಾಗಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದರು.
ಡಾ. ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ಶ್ರೀಮಂತನ ಜೀವ ಬಡವನ ಜೀವ ಒಂದೇ ಆಗಿದ್ದು, ಜೀವವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಸಾಧ್ಯವಾದ ಮಟ್ಟಿಗೆ ರೋಗ ಬಾರದ ಹಾಗೇ ನಮ್ಮ ಜೀವವನ್ನು ನೋಡಿಕೊಳ್ಳಬೇಕು’ ಎಂದರು.
‘ಯೌವನದಲ್ಲಿ ಇರುವಾಗ ದೇಹವನ್ನು ದಂಡಿಸಬೇಕು. ಸಣ್ಣ ಪ್ರಾಯದಲ್ಲೇ ಯೋಗ, ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಬಿಪಿ ಶುಗರ್‌ನಿಂದ ದೂರ ಉಳಿಯಬಹುದು. ಆಸ್ಪತ್ರೆಗೆ ಹೋಗುವುದು ತಪ್ಪುತ್ತದೆ. ಶುಗರ್ ಬರುವಂತದ್ದು ನಮ್ಮ ಜೀವನ ಶೈಲಿಯಿಂದ’ ಎಂದು ಯುವಕರನ್ನು ಎಚ್ಚರಿಸಿದರು.
‘ಶುಗರ್ ಇರುವ ವ್ಯಕ್ತಿಯ 10 ವರ್ಷ ಆಯಸ್ಸು ಕಡಿಮೆಯಾಗುತ್ತೆ. ನನಗೆ ಶುಗರ್ ಇದೆ. ಆದರೆ ಹೆಂಗೋ ಮ್ಯಾನೇಜ್ ಮಾಡಿಕೊಂಡು 74 ವರ್ಷದಲ್ಲಿ ನಡೆಯುತ್ತಿದ್ದೇನೆ. ಜನಸೇವೆಗಾಗಿ ಬಹಳ ಬದುಕಬೇಕೆಂಬ ಆಸೆ. ಆದರೆ ಎಷ್ಟು ವರ್ಷ ಇರುತ್ತೇನೆಂದು ಹೇಳಕ್ಕಾಗಲ್ಲ’ ಎಂದು ಬೇಸರದಿಂದ ಹೇಳಿದರು.