ಸುಳ್ಯದಲ್ಲಿ ಬಿಜೆಪಿ ಭದ್ರಕೋಟೆ ಗಡಗಡ – ಆಡಳಿತ ವಿರೋಧಿ ಅಲೆ ದಾಖಲೆಯ ಬಾರಿ ಗೆದ್ದ ಶಾಸಕ ಅಂಗಾರ ಸೋಲಿಗೆ ಕಾರಣವಾಗುತ್ತಾ..!?

ನ್ಯೂಸ್ ಆ್ಯರೋ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈಗಾಗಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ರಾಜ್ಯ ಬಿಜೆಪಿ ಸರ್ಕಾರದ ಅವಧಿ 2023ರ ಮೇಯಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ತಯಾರಿ ಜೋರಾಗಿದೆ.
ರಾಜಕೀಯ ಪಕ್ಷಗಳು ಜನರನ್ನು ಸೆಲೆಯಲು ಪ್ಲಾನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಪರಸ್ಪರ ರಾಜಕೀಯ ಕೆಸರೆರಚಾಟ ನಡೆಸುತ್ತಾ ಜನರ ಮುಂದೆ ನಾವೇ ಬೆಸ್ಟ್ ಅಂತ ತೋರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬಿಜೆಪಿ ತಮ್ಮ ಸರ್ಕಾರದ ಸಾಧನೆಯನ್ನು ಜನರ ಮುಂದಿಡಲು ಯತ್ನಿಸಿದ್ರೆ, ವಿರೋಧ ಪಕ್ಷಗಳು ಸರ್ಕಾರದ ಲೋಪಗಳನ್ನು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಕೇಸರಿಯ ಭದ್ರಕೋಟೆ ದಕ್ಷಿಣಕನ್ನಡದ ಸುಳ್ಯ ಕ್ಷೇತ್ರದಲ್ಲಿ ಸತತ ಆರು ಬಾರಿ ಗೆಲುವು ಸಾಧಿಸಿದ ಸಚಿವ ಅಂಗಾರ ಈ ಬಾರಿಯೂ ಗೆಲ್ಲುತ್ತಾರಾ? ಅಥವಾ ಸುಳ್ಯ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗುತ್ತಾ? ಎನ್ನುವ ಪ್ರಶ್ನೆ ಮೂಡಿದೆ.
ಸುಳ್ಯ ಕ್ಷೇತ್ರ ಹಲವು ಕಾರಣಕ್ಕೆ ವಿಶೇಷತೆಯನ್ನು ಹೊಂದಿದೆ. 1957ರಲ್ಲಿ ವಿಧಾನಸಭೆ ಚುನಾವಣೆ ಶುರುವಾದಾಗ ಸುಳ್ಯ, ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೆ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆದ್ರೆ 1962ರಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದ ದ್ವಿಸದಸ್ಯತ್ವ ರದ್ದಾದಾಗ ಸುಳ್ಯ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಯಿತು. ಮಾತ್ರವಲ್ಲ ಸುಳ್ಯವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವನ್ನಾಗಿ ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಬಳಿಕ ಹಲವು ಬಾರಿ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದರೂ ಮೀಸಲಾತಿ ಬದಲಾಗಲಿಲ್ಲ. ಸುಳ್ಯ ಕ್ಷೇತ್ರ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರವಾಗಿ ಉಳಿಯಿತು.
ಅಂದಹಾಗೆ ಬಿಜೆಪಿಯ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ 2013ರಲ್ಲಿ ಬಿಜೆಪಿ ಕೈ ಹಿಡಿದ ಏಕೈಕ ಕ್ಷೇತ್ರ ಸುಳ್ಯ. 1994ರಿಂದ ಇಲ್ಲಿವರೆಗೆ ಬಿಜೆಪಿ ಸುಳ್ಯದಲ್ಲಿ ಸೋಲು ಕಂಡಿಲ್ಲ. 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗಲೂ ಬಿಜೆಪಿಗೆ ಆಸರೆಯಾಗಿದ್ದು ಇದೇ ಕ್ಷೇತ್ರ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಎಸ್. ಅಂಗಾರ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
2018ರಲ್ಲೂ ಸಚಿವ ಅಂಗಾರ ಭಾರೀ ಅಂತರದಿಂದ ಗೆದ್ದಿದ್ದರು. ಹೀಗಿದ್ದೂ ಅಂಗಾರ ಸಚಿವನಾಗಲು 2021ರ ವರೆಗೆ ಕಾಯಬೇಕಾಯಿತು. ಆದ್ರೆ ಮುಂದಿನ ಚುನಾವಣೆಯಲ್ಲಿ ಈ ನಾಯಕನನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡುತ್ತಿದ್ದಾರೆ.
ಒಂದಲ್ಲ, ಎರಡಲ್ಲ ಸತತ ಆರು ಬಾರಿ ಶಾಸಕರಾಗಿರುವ ಎಸ್. ಅಂಗಾರ ಅವರನ್ನು ಸೋಲಿಸುವುದು ವಿಪಕ್ಷಗಳಿಗೂ ಸವಾಲೇ ಸರಿ. ಬಹುಜನ ಸಮಾಜವಿರುವ ಸುಳ್ಯ ಕ್ಷೇತ್ರದಲ್ಲಿ ದಲಿತ ನಾಯಕ ಎಸ್. ಅಂಗಾರ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ ಅಂದ್ರೆ ಅದು ಸುಲಭದ ಮಾತಲ್ಲ. ಅವರ ಪ್ರಾಬಲ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಎಸ್. ಅಂಗಾರ ಅವರು ಸರಳ ಸಜ್ಜನಿಕೆಯ ರಾಜಕಾರಣಿಯೆಂದೇ ಹೆಸರುವಾಸಿ. ಸಚಿವನಾಗಿದ್ದೂ, ಉನ್ನತ ಸ್ಥಾನದಲ್ಲಿದ್ದರೂ ಇಂದಿಗೂ ಮನೆಯ ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕುತ್ತಿರುವ ಅಂಗಾರ ಅವರ ಸರಳತೆಗೆ ಸರಿಸಾಟಿಯಲ್ಲ. ಅದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತಿರುವ ವಿಚಾರ.
ಸುಳ್ಯ ವಿಧಾನಸಭಾ ಕ್ಷೇತ್ರ ಕಾಡು, ಬೆಟ್ಟಗುಡ್ಡಗಳಿಂದ ಕೂಡಿದ ಹಳ್ಳಿಗಾಡು ಪ್ರದೇಶ. ತೀರಾ ಹಿಂದುಳಿದ ಪ್ರದೇಶದಲ್ಲಿ ಅಂಗಾರ ಶಾಸಕರಾದ ಮೇಲೆ ಶಿಕ್ಷಣ, ಸಾಂಸ್ಕೃತಿಕ, ವ್ಯಾಪಾರ, ವಾಣಿಜ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೂ ಅಂಗಾರರ ಕಾರ್ಯವೈಖರಿ ಬಗ್ಗೆ ಜನರಿಗೆ ಸಣ್ಣ ಮಟ್ಟದ ಅಸಮಾಧಾನವಿದೆ. ಸತತ ಆರು ಬಾರಿ ಶಾಸಕರಾದರೂ, ಸುಳ್ಯದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ, ಸುಳ್ಯದ ಅಭಿವೃದ್ಧಿ ದೃಷ್ಟಿಯಿಂದ ದೊಡ್ಡ ಮೊತ್ತದ ಅನುದಾನ ತಂದಿಲ್ಲ.
ಸಚಿವ ಸ್ಥಾನಕ್ಕೇರಿದರೂ ಸುಳ್ಯ ಜನರ ನಿರೀಕ್ಷೆಯನ್ನು ಅಂಗಾರ ಅವರು ರೀಚ್ ಮಾಡಿಲ್ಲ. ಇನ್ನು, ಇತ್ತೀಚೆಗೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸಚಿವ ಅಂಗಾರ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಸುಳ್ಯದಲ್ಲಿ ಸದ್ಯ ಅಂಗಾರ ಹೊರತುಪಡಿಸಿ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನು, ಕಾಂಗ್ರೆಸ್’ನಲ್ಲಿ ಅಂಗಾರ ವಿರುದ್ಧ ಸತತ ನಾಲ್ಕು ಬಾರಿ ಸೋಲನುಂಡ ಡಾ.ಬಿ. ರಘು ಈ ಬಾರಿ ಸ್ಪರ್ಧಿಸಲು ಉತ್ಸಾಹ ತೋರುತ್ತಿಲ್ಲ ಎನ್ನಲಾಗ್ತಿದೆ. ಹೀಗಾಗಿ ಕಾಂಗ್ರೆಸ್ ಬ್ಲಾಕ್ ಉಸ್ತುವಾರಿಯಾಗಿದ್ದ ಹೆಚ್.ಎಂ. ನಂದಕುಮಾರ್’ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಅಲ್ಲದೆ, ಸುಳ್ಯದಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕಲು ಕಾಂಗ್ರೆಸ್ ಭಾರಿ ಪ್ಲಾನ್ ಮಾಡುತ್ತಿದೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ? ಸುಳ್ಯದಲ್ಲಿ ಶಾಸಕ ಸ್ಥಾನಕ್ಕೇರುವವರು ಯಾರು ಅಂತ ಕಾದು ನೋಡಬೇಕಿದೆ.