ನ್ಯೂಸ್ ಆ್ಯರೋ : ಕ್ರಿಕೆಟ್ ಇತಿಹಾಸದಲ್ಲೇ ಬಹುಶಃ ಇದೇ ಮೊದಲ ಬಾರಿಗೆ ಫ್ರಾಂಚೈಸಿ ತಂಡವೊಂದು ಕೇವಲ 15 ರನ್ ಗೆ ಆಲೌಟ್ ಆದ ಘಟನೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನಲ್ಲಿ ನಡೆದಿದೆ.
ಸಿಡ್ನಿಯ ಸಿಡ್ನಿ ಶೋಗ್ರೌಂಡ್ ಸ್ಟೇಡಿಯಂ ನಲ್ಲಿ ಬಿಗ್ ಬ್ಯಾಷ್ ಲೀಗ್ ನ ಐದನೇ ಪಂದ್ಯದಲ್ಲಿ ಇಂತಾದ್ದೊಂದು ಕಳಪೆ ಬ್ಯಾಟಿಂಗ್ ಕಂಡುಬಂದಿದೆ. ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಸಿಡ್ನಿ ಥಂಡರ್ ನಡುವಿನ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್ ಗೆ ಆಲೌಟ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಡಿಲೇಡ್ ಸ್ಟ್ರೈಕರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 139 ರನ್ ಗಳಿಸಿತ್ತು. ಅಡಿಲೇಡ್ ಪರ ಕ್ರಿಸ್ ಲಿನ್ 36 ರನ್ ಗಳಿಸಿದೆ, ಕಾಲಿನ್ ಗ್ರಾಂಡ್ ಹೋಮ್ 33 ರನ್ ಗಳಿಸಿದರು.
140 ರನ್ ಗಳ ಸುಲಭ ಗುರಿ ಬೆನ್ನತ್ತಿದ ಸಿಡ್ನಿ ಥಂಡರ್ 5.5 ಓವರ್ ಗಳಲ್ಲಿ ಕೇವಲ 15 ರನ್ ಗೆ ಕುಸಿಯಿತು. ತಂಡದ ಪರ ಒಬ್ಬನೇ ಒಬ್ಬ ಆಟಗಾರ ನೆಲಕಚ್ಚಿ ಆಡದೇ ಇದ್ದದ್ದು ತಂಡಕ್ಕೆ ದುಬಾರಿಯಾಯಿತು. ಹೇಲ್ಸ್, ರೊಸ್ಸೊ, ಸ್ಯಾಮ್ಸ್ ಅವರಂತಹ ಅಂತರಾಷ್ಟ್ರೀಯ ಆಟಗಾರರಿದ್ದರೂ ಸಿಡ್ನಿ ತಂಡ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು.
ಅಡಿಲೇಡ್ ಪರ ಹೆನ್ರಿ ಥಾರ್ಂಟನ್ ಐದು ವಿಕೆಟ್ ಬೇಟೆಯಾಡಿದರೆ, ವೆಸ್ ಅಗರ್ ನಾಲ್ಕು ವಿಕೆಟ್ ಪಡೆದರು.